

ಕೊಪ್ಪಳ: ನ್ಯಾಯಾಲಯದಲ್ಲಿನ ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಮಧ್ಯಸ್ಥಿಕೆದಾರ ವಕೀಲರ ಪಾತ್ರ ಬಹುಮುಖ್ಯ ಎಂದು ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಸಿ. ಅಭಿಪ್ರಾಯಪಟ್ಟರು.
ನಗರದ ಜಿಪಂ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ರಾಯಚೂರು, ಬಳ್ಳಾರಿ, ಕೊಪ್ಪಳ ಜಿಲ್ಲಾ ಮಧ್ಯಸ್ಥಿಕೆದಾರರಿಗೆ ಹಮ್ಮಿಕೊಂಡಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಲೋಕ ಅದಾಲತ್, ರಾಜೀ ಸಂಧಾನ ಹಮ್ಮಿಕೊಳ್ಳಲಾಗುತ್ತದೆ. ಇದರ ಜತೆಗೆ ಮಧ್ಯಸ್ಥಿಕೆ ಕಾರ್ಯಕ್ರಮ ಏರ್ಪಡಿಸಲಾಗುತ್ತಿದೆ. ವಕೀಲರ ಮೂಲಕ ತ್ವರಿತ ಹಾಗೂ ಸುಲಭವಾಗಿ ಪ್ರಕರಣ ಪರಿಹರಿಸಬಹುದು. ವೈವಾಹಿಕ, ಜೀವನಾಂಶ ಸೇರಿ ಇತರ ಬಾಕಿ ಪ್ರಕರಣಗಳನ್ನು ಪರಿಹರಿಸಬೇಕಿದೆ. ಈ ನಿಟ್ಟಿನಲ್ಲಿ ಮೂರು ಜಿಲ್ಲೆಗಳ ಮಧ್ಯಸ್ಥಿಕೆದಾರರಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ತರಬೇತಿ ಸದುಪಯೋಗ ಪಡಿಸಿಕೊಳ್ಳಿ. ಪ್ರಕರಣಗಳ ಇತ್ಯರ್ಥಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.
ಜಿಲ್ಲಾ ವಕೀಲರ ಸಂದ ಅಧ್ಯಕ್ಷ ಎ.ವಿ.ಕಣವಿ ಮಾತನಾಡಿ, ದೇಶಾದ್ಯಂತ ಅನೇಕ ಪ್ರಕರಣಗಳು ಬಾಕಿ ಇವೆ. ರಾಜೀ ಸಂಧಾನ, ಲೋಕ ಅದಾಲತ್ ಹಾಗೂ ಮಧ್ಯಸ್ಥಿಕೆ ಕಾರ್ಯಕ್ರಮ ಮೂಲಕ ಪರಿಹರಿಸಬೇಕೆಂಬುದು ಸುಪ್ರೀಂ ಕೋರ್ಟ್ ಅಭಿಪ್ರಾಯ. ಅದಾಲ್ ಮೂಲಕ ಲಾಂತರ ಪ್ರಕರಣಗಳನ್ನು ಪರಿಹರಿಸಲಾಗುತ್ತಿದೆ. ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ ಅತ್ಯಂತ ಯಶಸ್ವಿಯಾಗಿ ಕೆಲಸ ಮಾಡುತ್ತಿದೆ. ನಮ್ಮಲ್ಲಿ ಮಧ್ಯಸ್ಥಿಕೆ ವ್ಯವಸ್ಥೆ ಕೌಟುಂಬಿಕ ನ್ಯಾಯಾಲಯದಲ್ಲಿ ಸಫಲವಾಗಿದೆ. ಇತರ ನ್ಯಾಯಾಲಯಗಳಲ್ಲಿಯೂ ಮಧ್ಯಸ್ಥಿಕೆ ವ್ಯವಸ್ಥೆಯ ಮೂಲಕ ಪ್ರಕರಣಗಳನ್ನು ರಾಜಿ ಮಾಡಲು ಶ್ರಮಿಸಲಾಗುವುದು ಎಂದರು.
ಪ್ರಧಾನ ಜಿಲ್ಲಾ ಕೌಟುಂಬಿಕ ನ್ಯಾಯಾಧೀಶೆ ಸರಸ್ವತಿದೇವಿ, ಹೆಚ್ಚುವರಿ ಜಿಲ್ಲಾ ತ್ವರಿತ (ಪೊಕ್ಸೋ) ನ್ಯಾಯಾಧೀಶ ಕುಮಾರ ಡಿ.ಕೆ. ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಆರ್.ಒಡೆಯರ್, ಬೆಂಗಳೂರು ಮಧ್ಯಸ್ಥಿಕಾ ಕೇಂದ್ರದ ತರಬೇತುದಾರರಾದ ಗೀತಾದೇವಿ ಪಾಪಣ್ಣ ಹಾಗೂ ವೈಶಾಲಿ ಹೆಗಡೆ ಸೇರಿದಂತೆ ನ್ಯಾಯಾಧೀಶರು, ಮಧ್ಯಸ್ಥಿಕೆದಾರರು ಇದ್ದರು.