ಅಲಸಂದೆ ಸಾಲು ಬಿತ್ತನೆ ಕುರಿತು ತರಬೇತಿ

07M.D.R.5
Published on

ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ಹೂತಗೆರೆ ಗ್ರಾಮದಲ್ಲಿ ಆಹಾರ ಮತ್ತು ಪೌಷ್ಟಿಕ ಭದ್ರತಾ ಅಭಿಯಾನ ಅಲಸಂದೆ ಸಾಲು ಬಿತ್ತನೆ ಪ್ರಾತ್ಯಕ್ಷಿಕೆ ಯೋಜನೆ ಅಡಿ ರೈತ ತರಬೇತಿ ಕಾರ್ಯಕ್ರಮ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಕೆ.ಎಸ್.ವಿಜಯ್‌ಕುಮಾರ್ ಮಾತನಾಡಿ, ಆಹಾರ ಮತ್ತು ಪೌಷ್ಟಿಕ ಭದ್ರತೆ ಯೋಜನೆಯಡಿ (ಅಲಸಂದೆ ಸಾಲು ಬಿತ್ತನೆ)ರೈತರಿಗೆ ಸಹಾಯಧನದಲ್ಲಿ ಅಲಸಂದೆ ಬಿತ್ತನೆ ಬೀಜ ಹಾಗೂ ಉಚಿತವಾಗಿ ದೊರೆಯುವ ಲಘು ಪೋಷಕಾಂಶಗಳ ಮಿಶ್ರಣ, ಜಿಂಕ್ ಸಲ್ಫೇಟ್, ಬೋರಾಕ್ಸ್, ರೋಗ ಮತ್ತು ಕೀಟನಾಶಕಗಳು ಹಾಗೂ ಮುಂತಾದ ಕೃಷಿ ಪರಿಕರಗಳನ್ನು ನೂತನ ಕೃಷಿ ತಾಂತ್ರಿಕತೆಯೊಂದಿಗೆ ಬಳಸಿ ಖರ್ಚು ಕಡಿಮೆ ಮಾಡಿ ಇಳುವರಿ ಹೆಚ್ಚಿಸಲು ಹಾಗೂ ಅಲಸಂದೆ ಬೆಳೆಯ ವಿಸ್ತೀರ್ಣ ಹೆಚ್ಚಿಸಿ, ಇದರಿಂದ ರೈತರ ಆದಾಯವನ್ನು ಹೆಚ್ಚಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ ಎಂದು ತಿಳಿಸಿದರು.

ಕೃಷಿ ಅಧಿಕಾರಿ ಎಸ್.ದಯಾನಂದ್‌ಕುಮಾರ್ ಮಾತನಾಡಿ, ಮುಂಗಾರು ಹಂಗಾಮು ಈಗಾಗಲೇ ಪ್ರಾರಂಭವಾಗಿದ್ದು ಹೋಬಳಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಅದರಂತೆ 2025ರ ಮಾರ್ಚ್ ತಿಂಗಳಿಂದ ಮೇ 31ರವರೆಗಿನ ಮಳೆ ವರದಿಯ ಪ್ರಕಾರ ಆತಗೂರು ಹೋಬಳಿಯಲ್ಲಿ ವಾಡಿಕೆ ಮಳೆ 159.6 ಮಿ.ಮೀ ಗೆ 285.2 ಮಿ.ಮೀ ಮಳೆಯಾಗಿ ವಾಡಿಕೆಗಿಂತ ಶೇ.79 ರಷ್ಟು ಹೆಚ್ಚಿನ ಮಳೆಯಾಗಿದೆ ಎಂದರು.

ಅಲಸಂದೆ, ಉದ್ದು, ಹೆಸರು ಬಿತ್ತನೆ ಬೀಜವು ಕೆಸ್ತೂರು ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದೆ. ರಾಗಿ ಹಾಗೂ ಭತ್ತದ ಬಿತ್ತನೆ ಬೀಜಕ್ಕೆ ಈಗಾಗಲೇ ಸರಬರಾಜು ಸಂಸ್ಥೆಗಳಿಗೆ ಬೇಡಿಕೆ ಕೂಡ ಸಲ್ಲಿಸಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರಕ್ಕೆ ಯಾವುದೇ ಕೊರತೆ ಇರುವುದಿಲ್ಲ ಎಂದು ತಿಳಿಸಿದರು.

ರೈತರು ಜಮೀನುಗಳನ್ನು ಖಾಲಿ ಬಿಡದೆ ಕೃಷಿ ಬೆಳೆಗಳನ್ನು ಬೆಳೆಯಬೇಕು. ಬೆಳೆಗಳಿಗೆ ಅಗತ್ಯವಾದ ಹಸಿರೆಲೆ ಗೊಬ್ಬರ ಅಪಸೆಣಬು, ದ್ರವರೂಪದ ಲಘು ಪೋಷಕಾಂಶಗಳ ಮಿಶ್ರಣ, ಜಿಂಕ್ ಸಲ್ಫೇಟ್, ಬೋರಾಕ್ಸ್, ಲಘು ಪೋಷಕಾಂಶಗಳ ಮಿಶ್ರಣ(ಪೌಡರ್) ಜೈವಿಕ ಗೊಬ್ಬರ (ಎನ್.ಪಿ.ಕೆ ಕನ್ಸರ್ಷಿಯಾ)ಬೇವಿನ ಎಣ್ಣೆ, ಟಾರ್ಪಲಿನ್, ಎಚ್.ಡಿ.ಪಿ.ಇ ಪೈಪು, ಪಿ.ವಿ.ಸಿ ಪೈಪ್‌ಇತ್ಯಾದಿ ಕೃಷಿ ಪರಿಕರಗಳು ರಿಯಾಯಿತಿ ದರದಲ್ಲಿ ಕೆಸ್ತೂರು ರೈತ ಸಂಪರ್ಕ ಕೇಂದ್ರದಲ್ಲಿ ಲಭ್ಯವಿದ್ದು ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದರು.

ಜೈವಿಕ ಗೊಬ್ಬರ, ಹಸಿರೆಲೆ ಗೊಬ್ಬರ, ಲಘು ಪೋಷಕಾಂಶಗಳ ಮಿಶ್ರಣಗಳನ್ನು ಬೆಳೆಗಳಿಗೆ ಬಳಸಿ ಕೃಷಿ ಬೆಳೆಗಳ ಇಳುವರಿಯನ್ನು ಹೆಚ್ಚಿಸಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಹೂತಗೆರೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಚಂದ್ರಮ್ಮ, ಕೃಷಿ ಅಧಿಕಾರಿ ಎಸ್.ದಯಾನಂದ್ ಕುಮಾರ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕರು ಕೆ.ಎಸ್.ವಿಜಯ್ ಕುಮಾರ್, ಪ್ರಗತಿಪರ ರೈತರಾದ ಕೆಂಪರಾಜು, ಚನ್ನಕೇಶವ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net