ಗುಣಮಟ್ಟ ಹೆಚ್ಚಿಸಲು ಶಿಕ್ಷಕರಿಗೆ ತರಬೇತಿ

adi c
ಶೃಂಗೇರಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನಿಂದ ಪ್ರಾಚಾರ್ಯರು ಹಾಗೂ ಮುಖ್ಯ ಶಿಕ್ಷಕರಿಗೆ ಆಯೋಜಿಸಿರುವ ಟೀಮ್-2023ರ ಕಾರ್ಯಾಗಾರವನ್ನು ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ಡಾ. ಶಿವರಾಮ್, ಡಾ. ಕೆ.ಸಿ.ನಾಗೇಶ್, ಚರಣ್‌ಕುಮಾರ್ ಇತರರಿದ್ದರು.
Published on

ಶೃಂಗೇರಿ: ಶಿಕ್ಷಕ ವೃತ್ತಿ ಪವಿತ್ರವಾದುದು. ದೇಶದ ಭವಿಷ್ಯ ರೂಪಿಸುವ ಗುರುತರ ಜವಾಬ್ದಾರಿ ಅವರ ಮೇಲಿದೆ. ಸಾಧನೆಯ ಮೆಟ್ಟಿಲು ಏರಲು ತರಬೇತಿ ಮಹತ್ವ ಪಡೆದಿದ್ದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನಿಂದ ಶಿಕ್ಷಕರಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ತಿಳಿಸಿದರು.

ಆದಿಚುಂಚನಗಿರಿ ಸಮುದಾಯಭವನದಲ್ಲಿ ಟ್ರಸ್ಟ್‌ನಿಂದ ಪ್ರಾಚಾರ್ಯರು ಹಾಗೂ ಮುಖ್ಯಶಿಕ್ಷಕರಿಗೆ ಮಂಗಳವಾರ ಆಯೋಜಿಸಿದ್ದ ಟೀಮ್-2023 ಎರಡು ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹಕ್ಕಿಗಳು ಸರಳವಾಗಿ ಬದುಕುತ್ತವೆ. ಪೂರ್ವ ದಿಕ್ಕಿಗೆ ಗೂಡು ಕಟ್ಟಿಕೊಳ್ಳುತ್ತವೆ. ಮಾನವನ ಬದುಕು ಕೂಡ ಸಹಜವಾಗಿರಬೇಕು. ವಿಕೃತಭಾವ ಆತನ ವ್ಯಕ್ತಿತ್ವ ನಾಶವಾಗಲು ಕಾರಣವಾಗುತ್ತದೆ. ಮನುಷ್ಯ ಸರಳವಾಗಿ ಬದುಕಿದಾಗ ಮಾತ್ರ ಸಮಾಜ ಆತನಿಗೆ ಗೌರವ ಕೊಡುತ್ತದೆ. ಶಿಕ್ಷಕರಲ್ಲಿ ಅದ್ಭುತ ಶಕ್ತಿ ಇರುತ್ತದೆ. ತನ್ನೊಳಗಿರುವ ಸಾಮರ್ಥ್ಯ ತಿಳಿದುಕೊಂಡರೆ ಮಾತ್ರ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದರು.
ಮಣಿಪಾಲದ ಪ್ರೊ. ಮೇಜರ್ ರಾಧಾಕೃಷ್ಣ ಮಾತನಾಡಿ, ಸತ್ತಂತೆ ಬದುಕುವುದು ಜೀವನವಲ್ಲ. ಮಾತು ಹೃದಯದಿಂದ ಬರಬೇಕು.ನಮ್ಮಲ್ಲಿ ಮಗುವಿನ ಸ್ವಭಾವ ಇದ್ದರೆ ನಕಾರಾತ್ಮಕ ಯೋಜನೆಗಳಿಂದ ದೂರವಾಗುತ್ತೇವೆ. ಶಿಕ್ಷಕರು ಮಾಡುವ ಸಣ್ಣ ತಪ್ಪು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಅಹಂ ಇದ್ದರೆ ನಮ್ಮ ವ್ಯಕ್ತಿತ್ವ ಕೊಲ್ಲುತ್ತದೆ. ಶೈಕ್ಷಣಿಕ ಸಂಸ್ಥೆಯಲ್ಲಿ ಕೆಲಸ ಮಾಡುವ ಮುಖ್ಯಸ್ಥರಲ್ಲಿ ನೈತಿಕತೆ,ಪ್ರಾಮಾಣಿಕತೆ, ಮಾನವೀಯತೆ ಇರಬೇಕು. ಸಿಕ್ಕ ಅವಕಾಶಗಳನ್ನು ಶಿಕ್ಷಕರು ಸದ್ಬಳಕೆ ಮಾಡಬೇಕು ಎಂದು ತಿಳಿಸಿದರು.
ಶಾಸಕ ಟಿ.ಡಿ.ರಾಜೇಗೌಡ, ಸಂಪನ್ಮೂಲ ವ್ಯಕ್ತಿಗಳಾದ ಡಾ. ಎ.ಟಿ.ಶಿವರಾಮ್, ಚರಣ್‌ಕುಮಾರ್, ಡಾ. ಮಧುಸೂದನ್, ಡಾ. ನವೀನ್, ಡಾ. ಚಕ್ರವರ್ತಿ, ಬಿಜಿಎಸ್ ಪ್ರಾಚಾರ್ಯ ಡಾ. ಕೆ.ಸಿ.ನಾಗೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net