

ಪಾಂಡವಪುರ: ಮತದಾರರ ಪಟ್ಟಿ ತಯಾರಿಕೆ ಜವಾಬ್ದಾರಿಯುತವಾದ ಕೆಲಸವಾಗಿದ್ದು, ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯ ನಡೆಸಲಾಗುತ್ತಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಹೇಳಿದರು.
ಪಟ್ಟಣದ ಲಾಲ್ ಬಹದ್ದೂರ್ ಚಿತ್ರಮಂದಿರದಲ್ಲಿ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳಿಗೆ (ಬಿಎಲ್ಒ) ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಜು.21ರಿಂದ ಆಗಸ್ಟ್ 21ರವರೆಗೆ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ನಡೆಯಲಿದೆ. ಮತಗಟ್ಟೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಮತಪರಿಷ್ಕರಣೆ ಕಾರ್ಯ ನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಕಳೆದ ವಿಧಾನ ಸಭೆ ಚುನಾವಣೆಯ ವೇಳೆ ಮರಣ ಹೊಂದಿದ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಪೂರ್ಣ ಪ್ರಮಾಣದಲ್ಲಿ ತೆಗೆಯದ ಕಾರಣ ರಾಜ್ಯದಲ್ಲಿ ಶೇಕಡವಾರು ಮತದಾನದಲ್ಲಿ ಮಂಡ್ಯ ಜಿಲ್ಲೆಗೆ ನಂ.1 ಸ್ಥಾನ ಕೈ ತಪ್ಪಿ ಎರಡನೇ ಸ್ಥಾನಕ್ಕೆ ತೃಪ್ತಿಕೊಳ್ಳುವಂತಾಯಿತು ಎಂದರು.
ಉಪವಿಭಾಗಾಧಿಕಾರಿ ಎಂ.ಎಲ್.ನಂದೀಶ್, ಪ್ರಭಾರ ತಹಸೀಲ್ದಾರ್ ನಯಿಂ ಉನ್ನೀಸಾ, ಶಿರಸ್ತೇದಾರ್ ಎಂ.ವರುಣ್, ಪುರಸಭೆ ಮುಖ್ಯಾಧಿಕಾರಿ ವೀಣಾ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್, ಚುನಾವಣೆ ಸಿಬ್ಬಂದಿ ಮೋಹನ್ ಇತರರಿದ್ದರು.