ಪಶುಗಳ ಆರೋಗ್ಯ ರಕ್ಷಣೆಗೆ ನೀಡಿ ಉತ್ತಮ ಸೇವೆ...

Maithri 4
Published on

ಪಶುಸಂಗೋಪನಾ ಸಚಿವ ಕೆ.ವೆಂಕಟೇಶ ಆಶಯ

ಮೈತ್ರಿ ಕಾರ್ಯಕರ್ತರ ತರಬೇತಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಪಶುಗಳೂ ಸಹ ಉತ್ತಮ ಆರೋಗ್ಯ ಹೊಂದಬೇಕು ಎಂಬ ಉದ್ದೇಶದಿಂದ ಅವುಗಳ ಆರೋಗ್ಯ ರಕ್ಷಣೆಗಾಗಿ ಸರ್ಕಾರ ಪಶು ವೈದ್ಯರು, ಪಶು ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಮೈತ್ರಿ ಕಾರ್ಯಕರ್ತರನ್ನು ನೇಮೀಸಿದೆ. ಹೀಗಾಗಿ ಉಡುಪಿ ಜಿಲ್ಲೆಯಲ್ಲಿನ ಪಶುಗಳ ಆರೋಗ್ಯ ರಕ್ಷಣೆ, ಸುಧಾರಣೆಗೆ ನೇಮಕಗೊಂಡಿರುವ ಮೈತ್ರಿ ಕಾರ್ಯಕರ್ತರು ಉತ್ತಮ ಸೇವೆ ನೀಡಬೇಕು ಎಂದು ಪಶುಸಂಗೋಪನಾ ಸಚಿವ ಕೆ.ವೆಂಕಟೇಶ ಆಶಯ ವ್ಯಕ್ತಪಡಿಸಿದರು.

Maithri 3
ಉಡುಪಿಯ ಜಿಪಂ ಕಚೇರಿಯ ಡಾ. ವಿ.ಎಸ್​. ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಶ್ರಯದಲ್ಲಿ ಏ.5ರಂದು ಆಯೋಜಿಸಿದ್ದ ಮೈತ್ರಿ ಕಾರ್ಯಕರ್ತರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೂರು ತಿಂಗಳ ತರಬೇತಿ

ಮೈತ್ರಿ ಕಾರ್ಯಕರ್ತರಿಗೆ ಈಗಾಗಲೇ ಮೂರು ತಿಂಗಳ ತರಬೇತಿ ನೀಡಲಾಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿರುವ ಮನೆ ಮನೆಗೆ ಭೇಟಿ ನೀಡಿ, ಜಾನುವಾರುಗಳ ಸ್ಥಿತಿಗತಿಯ ಮಾಹಿತಿ ಕಲೆಹಾಕಿ, ಅವುಗಳ ಆರೋಗ್ಯದಲ್ಲಿ ಸಮಸ್ಯೆಯಿದ್ದಲ್ಲಿ ಅಗತ್ಯ ಸಲಹೆ-ಸೂಚನೆ ಹಾಗೂ ಚಿಕಿತ್ಸೆ ನೀಡಬೇಕು. ರೈತ ಸಮುದಾಯದವರೂ ಒಳಗೊಂಡಂತೆ ಜಾನುವಾರುಗಳಿಗೆ ಯೋಜನೆಯ ಲಾಭ ದೊರಕಿಸಬೇಕು ಎಂದರು.

Maithri 2
ಕಾಪು ಶಾಸಕ ಗುರ್ಮೆ ಸುರೇಶ ಶೆಟ್ಟಿ ಮಾತನಾಡಿದರು. ಜಿಲ್ಲೆಯ ಪಶುಪಾಲನಾ ಇಲಾಖೆಯ ಕಾರ್ಯಕ್ರಮಗಳ ಕುರಿತ ಕಿರುಚಿತ್ರಣ ಪ್ರದರ್ಶಿಸಲಾಯಿತು. ಮೈತ್ರಿ ಕಾರ್ಯಕರ್ತರಿಗೆ ಸಾಂಕೇತಿಕವಾಗಿ ಕಿಟ್​ ವಿತರಿಸಲಾಯಿತು. ಪ್ರಾಣಿಗಳ ಜನನ ನಿಯಂತ್ರಣ ಹಾಗೂ ಹುಚ್ಚುರೋಗ ನಿರೋಧಕ ಲಸಿಕೆ ಮಾಹಿತಿ ಒಳಗೊಂಡ ಕರಪತ್ರ ಬಿಡುಗಡೆ ಮಾಡಲಾಯಿತು.

ವೇದಿಕೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ, ಜಿಪಂ ಉಪ ಕಾರ್ಯದರ್ಶಿ ಶ್ರೀನಿವಾಸ ರಾವ್​, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನಿರ್ದೇಶಕ ಡಾ. ಮಂಜುನಾಥ ಎಸ್​. ಪಾಳೇಗಾರ, ಪಶು ವೈದ್ಯಕೀಯ ಪರಿಷತ್​ನ ನಿರ್ದೇಶಕ ಡಾ.ಸುಶಾಂತ ರೈ, ಮಂಗಳೂರು ಉಪನಿರ್ದೇಶಕ ಡಾ. ಅರುಣಕುಮಾರ ಶೆಟ್ಟಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ (ಆಡಳಿತ) ಡಾ. ಎಂ.ಸಿ. ರೆಡ್ಡಪ್ಪ ಸ್ವಾಗತಿಸಿದರು. ಮುಖ್ಯ ಪಶು ವೈದ್ಯಾಧಿಕಾರಿ ಡಾ. ಉದಯಕುಮಾರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಖಾಲಿ ಇರುವ ಹುದ್ದೆ ಭರ್ತಿ ಮಾಡಿ

Maithri 2
ಶಾಸಕ ಯಶ್​ಪಾಲ್​ ಸುವರ್ಣ ಮಾತನಾಡಿ, ಉಡುಪಿ ಜಿಲ್ಲೆಯು ಗೋಪಾಲಕರ ನಾಡಾಗಿದ್ದು, ಹೈನುಗಾರಿಕೆ ಅಭಿವೃದ್ಧಿಗೆ ಸರ್ಕಾರ ಅನೇಕ ಕಾರ್ಯಕ್ರಮ ಜಾರಿಗೊಳಿಸಿದೆ. ಹೈನುಗಾರಿಕೆಗೆ ಇನ್ನೂ ಹೆಚ್ಚಿನ ಶಕ್ತಿ ಹಾಗೂ ಪ್ರೋತ್ಸಾಹ ಸಿಗಬೇಕಿದೆ. ಕೊಕ್ಕರ್ಣೆ ಪ್ರಾಥಮಿಕ ಪಶುಚಿಕಿತ್ಸಾಲಯ ಮೇಲ್ದರ್ಜೆಗೇರಿಸುವಂತೆ ಹಾಗೂ ಡಿ ಗ್ರೂಪ್​ ಹುದ್ದೆಗಳ ನೇಮಕಾತಿಗೆ ತ್ವರಿತ ಕ್ರಮ ಕೈಗೊಳ್ಳುವಂತೆ ಸಚಿವರಿಗೆ ಲಿಖಿತ ಮನವಿ ನೀಡಿದರು.

ಉಡುಪಿ ಜಿಲ್ಲೆಯ ಜಾನುವಾರು ಮಾಹಿತಿ

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಮೈಸೂರು ಜಂಟಿ ನಿರ್ದೇಶಕ ಡಾ. ಶಿವಣ್ಣ ಪ್ರಾಸ್ತಾವಿಕವಾಗಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ 20ನೇ ಜಾನುವಾರು ಗಣತಿಯನ್ವಯ 2.57 ಲಕ್ಷ ದನ ಹಾಗೂ ಎಮ್ಮೆ, 3,107 ಆಡು&-ಕುರಿ, 3,289 ಹಂದಿ, 1.18 ಲಕ್ಷ ನಾಯಿ ಮತ್ತು 11.43 ಲಕ್ಷ ಕೋಳಿಗಳಿವೆ. 1 ಪಾಲಿಕ್ಲಿನಿಕ್​, 12 ಪಶು ಆಸ್ಪತ್ರೆ, 38 ಪಶು ಚಿಕಿತ್ಸಾಲಯ, 36 ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ ಹಾಗೂ 8 ಪಶು ಸಂಜೀವಿನಿ ಆಂಬುಲೆನ್ಸ್​ ಘಟಕ ಕಾರ್ಯನಿರ್ವಹಿಸುತ್ತಿವೆ. ಪ್ರಥಮ ಬಾರಿಗೆ ಜಿಲ್ಲೆಯಲ್ಲಿ 26 ಮೈತ್ರಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಮೈತ್ರಿ ಕಾರ್ಯಕರ್ತರಿಗೆ ಪ್ರಸ್ತುತ 3,700 ರೂ. ಗೌರವಧನ ನೀಡಲಾಗುತ್ತಿದ್ದು, ಹೆಚ್ಚಳ ಮಾಡಬೇಕೆಂಬ ಬೇಡಿಕೆಯನ್ನು ಕೇಂದ್ರದ ಹೈನುಗಾರಿಕಾ ಸಚಿವರ ಗಮನಕ್ಕೆ ತರಲಾಗಿದೆ. ಸಿಎಂ ಜತೆ ಚರ್ಚಿಸಿ ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇಲಾಖೆಗೆ ಸಂಬಂಧಿಸಿದಂತೆ ಇರುವ ಕುಂದು-ಕೊರತೆ ನಿವಾರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಲಾಗುವುದು. | ಕೆ.ವೆಂಕಟೇಶ. ಪಶುಸಂಗೋಪನಾ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net