

ಅಶೋಕ ಬೆನ್ನೂರು ಸಿಂಧನೂರು
ಸರ್ಕಾರಿ ರಜೆ ಹೀಗೂ ಸಿಗುತ್ತಾ ಎನ್ನುವುದಕ್ಕೆ ತಾಲೂಕಿನ ಮಲ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿಯ ಮೂರು ವರ್ಷದ ರಜೆ ಸಾಕ್ಷಿಯಾಗಿದೆ. ತರಬೇತಿ, ಹೆರಿಗೆ ಹಾಗೂ ಶಿಶುಪಾಲನೆ ರಜೆ ಪಡೆದಿದ್ದು ಬರೊಬ್ಬರಿ ಮೂರು ವರ್ಷದಿಂದ ಶಿಕ್ಷಕಿ ಶಾಲೆಗೆ ಬಂದಿಲ್ಲ.
ಮಲ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ 3-3-2008ಕ್ಕೆ ಸುಮಾ ಬಿ. ಎಂಬುವರು ಹಿಂದಿ ಭಾಷಾ ಶಿಕ್ಷಕಿಯಾಗಿ ನೇಮಕಗೊಂಡು 2018ವರೆಗೆ ಉತ್ತಮ ಸೇವೆ ನೀಡಿದ್ದಾರೆ. 2018ರಿಂದಲೇ ಅವರ ರಜೆಯ ಪರ್ವ ಆರಂಭಗೊಂಡಿದ್ದು ರಜೆ ಮೇಲೆ ರಜೆ ತೆಗೆದುಕೊಂಡಿದ್ದಾರೆ. 2021ರಲ್ಲಿ ಮೈಸೂರಿನ ಸೆಂಟ್ರಲ್ ಇನ್ಸೂಟ್ಯೂಟ್ ಆಫ್ ಇಂಡಿಯಾ ಲಾಂಗ್ವೆಜ್ ಇಲ್ಲಿ ತೆಲಗು ಭಾಷೆಯ ತರಬೇತಿಗೆ ಆಯ್ಕೆಗೊಂಡಿದ್ದು 10 ತಿಂಗಳ ರಜೆ ನೀಡುವಂತೆ 8-10-2021ರಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇದಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮತಿ ಮೇರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ರಜೆ ಮಂಜೂರು ಮಾಡಿದ್ದಾರೆ. ಆದರೆ ತರಬೇತಿ ಮುಗಿದ ಮೇಲೂ ರಜೆ ಪಡೆದಿರುವುದು ಅಚ್ಚರಿಗೆ ಕಾರಣವಾಗಿದೆ. ಕರ್ನಾಟಕದಲ್ಲಿ ಹಿಂದಿ ಭಾಷೆ ಶಿಕ್ಷಕಿಯಾಗಿ ನೇಮಕಗೊಂಡು, ತೆಲುಗು ಭಾಷೆಯ ತರಬೇತಿ ಏಕೆ? ಎನ್ನುವ ಪ್ರಶ್ನೆಗೆ ಉತ್ತರ ಇಲ್ಲವಾಗಿದೆ.
2022-23 ಜು.5ವರೆಗೆ ರಜೆ ಹಾಕಿರುವುದಾಗಿ ಇಲಾಖೆಗೆ ಮಾಹಿತಿ ನೀಡಿದ್ದು ಆದರೆ ಈ ರಜೆ ಮಂಜೂರಾತಿಯಲ್ಲೂ ಗೊಂದಲ ಇದೆ. ಆರು ತಿಂಗಳು ಹೆರಿಗೆ ರಜೆ, 180 ದಿನ ಶಿಶುಪಾಲನೆ ರಜೆ ಬಿಟ್ಟರೆ ಉಳಿದಂತೆ ಯಾವ ಆಧಾರದಲ್ಲಿ ರಜೆ ಮೇಲೆ ರಜೆ ಪಡೆಯುತ್ತಿದ್ದಾರೆನ್ನುವುದು ಅನುಮಾನಕ್ಕೆಡೆ ಮಾಡಿದೆ.
ಈಗಾಗಲೆ ಬರೊಬ್ಬರಿ ಮೂರು ವರ್ಷದಿಂದ ಸೇವೆಗೆ ಗೈರಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ವೇತನ ಪಾವತಿಯಾಗುತ್ತಿದೆ. ಮೂರು ವರ್ಷದಿಂದಲೂ ಹಿಂದಿ ವಿಷಯ ಪಾಠ ಮಾಡುವರಿಲ್ಲದೆ ಮಕ್ಕಳ ಶಿಕ್ಷಣಕ್ಕೆ ಪೆಟ್ಟು ಬಿದ್ದಿದೆ. ಹೆರಿಗೆ, ಶಿಶುಪಾಲನೆ ರಜೆ ಪಡೆದಿರುವುದೇ ಆಶ್ಚರ್ಯಕ್ಕೆ ಕಾರಣವಾಗಿದ್ದು ಜು.5ಕ್ಕೆ ರಜೆ ಮುಗಿಯಲಿದ್ದು ಅಂದು ಮರು ಸೇವೆಗೆ ಹಾಜರಾಗಬೇಕಿದೆ. 2018ರಿಂದ 2023ರವರೆಗೆ ಶಿಕ್ಷಕಿಯ ರಜೆ ಆವಾಂತರ ಗೊಂದಲಕ್ಕೆ ಕಾರಣವಾಗಿದೆ.
ಶಿಕ್ಷಣ ಇಲಾಖೆಯಲ್ಲೂ ಈ ಬಗ್ಗೆ ಸ್ಪಷ್ಟತೆ ಇಲ್ಲ. ಆದರೂ ವೇತನ ಮಾತ್ರ ಪೂರ್ಣ ಪ್ರಮಾಣದಲ್ಲಿ ಶಿಕ್ಷಕಿಗೆ ದೊರೆತಿದೆ. ಪ್ರತಿಯೊಬ್ಬ ಶಿಕ್ಷಕಿಗೂ ಈ ರೀತಿಯ ಅವಕಾಶ ಸಿಕ್ಕರೆ, ಮೂರು ವರ್ಷ ಬೇರೆ ಬೇರೆ ಕಾರಣವೊಡ್ಡಿ ವೇತನ ಪಡೆಯಬಹುದೆಂಬ ಲೆಕ್ಕಾಚಾರ ಹಾಕಿಕೊಳ್ಳುವಂಥ ಪ್ರಕರಣ ಇದಾಗಿದೆ.
ಶಾಲೆಗೆ ನೇಮಗೊಂಡಿರುವ ಶಿಕ್ಷಕಿ ಸುಮಾ ಬಿ. ಮೂರು ವರ್ಷದಿಂದ ರಜೆಯಲ್ಲಿರುವುದು ಇಲ್ಲಿನ ಮಕ್ಕಳಿಗೆ ಹಿಂದಿ ಭಾಷಾ ಪಠ್ಯ ಬೋಧಿಸುವರಿಲ್ಲದಂತಾಗಿದೆ. ಇದರಿಂದ ಮಕ್ಕಳ ಹಿಂದಿ ವಿಷಯದ ಶಿಕ್ಷಣದ ಮಟ್ಟ ಕುಸಿಯುತ್ತಿದೆ. ಈ ಶಿಕ್ಷಕಿ ಇರುವುದರಿಂದ ಇನ್ನೊಬ್ಬರನ್ನು ನೇಮಕ ಮಾಡಿಕೊಳ್ಳಲು ಅವಕಾಶವಿಲ್ಲ. ಶಿಕ್ಷಕಿಯು ಶಾಲೆಗೆ ಬಂದು ಪಾಠ ಮಾಡುತ್ತಿಲ್ಲ. ಈ ಸಮಸ್ಯೆಗೆ ಮುಕ್ತಿಯು ಸಿಕ್ಕಿಲ್ಲ.
ಮಲ್ಲಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂದಿ ಶಿಕ್ಷಕಿ ಸುಮಾ ಬಿ. ಅವರನ್ನು ತೆಲುಗು ತರಬೇತಿಗೆ ಕಳಿಸಿರುವುದು ಅಕ್ಷಮ್ಯ ಅಪರಾಧ. ಕರ್ನಾಟಕದಲ್ಲಿ ತೆಲುಗು ಭಾಷೆ ತರಬೇತಿ ಅಗತ್ಯವಿತ್ತಾ? ಮೂರು ವರ್ಷ ಸತತ ಗೈರಿನಿಂದ ಶಾಲೆಯಲ್ಲಿ ಹಿಂದಿ ಭಾಷೆ ಬೋಧಿಸುವರಿಲ್ಲದಂತಾಗಿದೆ. ಅಲ್ಲದೆ ಮೂರು ವರ್ಷದಿಂದ ವೇತನ ಪಡೆದುಕೊಂಡ ಬಗ್ಗೆ ಶಿಕ್ಷಣ ಇಲಾಖೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.ಅಮರೇಗೌಡ ಮಲ್ಲಾಪುರ ಅಧ್ಯಕ್ಷ, ವನಸಿರಿ ಫೌಂಡೇಷನ್, ಸಿಂಧನೂರು
ಮಲ್ಲಾಪುರ ಶಾಲೆಯ ಹಿಂದಿ ಶಿಕ್ಷಕಿ ಈ ಹಿಂದೆ ತೆಲುಗು ಭಾಷಾ ತರಬೇತಿಗೆ ಆಯ್ಕೆಗೊಂಡಿದ್ದರಿಂದ 2021ರಲ್ಲಿ 10 ತಿಂಗಳು ರಜೆ ಪಡೆದುಕೊಂಡಿದ್ದರು. ನಂತರ ಹೆರಿಗೆ, ಶಿಶುಪಾಲನಾ ರಜೆ ಪಡೆದಿದ್ದಾರೆ. ಹೆಚ್ಚುವರಿ ರಜೆ ಪಡೆದಿರುವ ಬಗ್ಗೆ ಪರಿಶೀಲಿಸುವೆ.ಶರಣಪ್ಪ ವಟಗಲ್ ಕ್ಷೇತ್ರ ಶಿಕ್ಷಣಾಧಿಕಾರಿ, ಸಿಂಧನೂರು
ನಮ್ಮ ಶಾಲೆಯಲ್ಲಿ ಹಿಂದಿ ವಿಷಯ ಶಿಕ್ಷಕಿಯಾಗಿರುವ ಸುಮಾ ಬಿ. ಅವರು ಹೆರಿಗೆ, ಶಿಶುಪಾಲನೆ ರಜೆಯಲ್ಲಿದ್ದರು. ಈಗ ಮೆಡಿಕಲ್ ರಜೆ ನೀಡಿದ್ದಾರೆ. ಇಷ್ಟು ನಮಗೆ ಮಾಹಿತಿ.ದಾದಾಪೀರ್ಮುಖ್ಯಶಿಕ್ಷಕ, ಸಹಿಪ್ರಾ ಶಾಲೆ, ಮಲ್ಲಾಪುರ