

ಮೈಸೂರು: ಸಮಾನತೆ ತರುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಪುರುಷ ಹಾಗೂ ಮಹಿಳಾ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೆ ಒಟ್ಟಿಗೆ ತರಬೇತಿ ನೀಡಲು ಯೋಜನೆ ರೂಪಿಸಲಾಗಿದೆ ಎಂದು ತರಬೇತಿ ವಿಭಾಗದ ಎಡಿಜಿಪಿ ಅಲೋಕ್‌ಕುಮಾರ್ ತಿಳಿಸಿದರು.
ಪೊಲೀಸ್ ತರಬೇತಿ ಶಾಲೆಯಿಂದ ಜ್ಯೋತಿನಗರದ ಕವಾಯತು ಮೈದಾನದಲ್ಲಿ ಶುಕ್ರವಾರ ಆಯೋಜಿಸಿದ್ದ 9ನೇ ತಂಡದ ಮಹಿಳಾ ಪೊಲೀಸ್ ಪೇದೆಗಳ ನಿರ್ಗಮನ ಪಥಸಂಚಲನದಲ್ಲಿ ಪ್ರಶಿಕ್ಷಣಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯಲ್ಲಿ ಲಿಂಗ ಸಮಾನತೆ ತರಬೇಕು ಹಾಗೂ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ಬಲವರ್ಧನೆಗೊಳಿಸಬೇಕು ಎನ್ನುವ ದೃಷ್ಟಿಯಿಂದ ಇಬ್ಬರಿಗೂ ಸಮಾನವಾಗಿ ತರಬೇತಿ ನೀಡಲಾಗುವುದು ಎಂದು ಹೇಳಿದರು.
ಮಹಿಳಾ ಪೊಲೀಸರು ಪ್ರಸ್ತುತ ತರಬೇತಿಯಲ್ಲಿ 9 ಎಂ.ಎಂ. ಪಿಸ್ತೂಲ್ ಬಳಕೆ ಮಾಡುವುದನ್ನು ಕಲಿತಿದ್ದಾರೆ. 10 ಕಿಲೋಮೀಟರ್ ದೂರವನ್ನು 70 ನಿಮಿಷದಲ್ಲಿ ಓಡುತ್ತಿದ್ದಾರೆ. ಆದ್ದರಿಂದ ಇಬ್ಬರಿಗೂ ಒಂದೇ ಮಾದರಿಯ ಅಗತ್ಯ ತರಬೇತಿ ದೊರೆಯುತ್ತಿದೆ. ತರಬೇತಿಯಲ್ಲೂ ಯಾವುದೇ ಭೇದಭಾವ ಇರುವುದಿಲ್ಲ ಎಂದರು.
ಕುಟುಂಬದೊಂದಿಗೆ ಆಪ್ತ ಸಮಾಲೋಚನೆ: ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿವಾಹಿತ ಮಹಿಳಾ ಸಿಬ್ಬಂದಿ ಕುಟುಂಬದವರಿಗೆ ಪ್ರತಿ ಆರು ತಿಂಗಳಿಗೊಮ್ಮೆ ಇಲಾಖೆಯಿಂದ ತಜ್ಞರ ಜತೆ ಆಪ್ತ ಸಲಹೆ ಹಾಗೂ ಅಹವಾಲು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.
ಆಯಾ ಪೊಲೀಸ್ ಠಾಣೆಯ ಅಧಿಕಾರಿಗಳು ಸಮರ್ಪಕವಾಗಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಬೇಕಾಗಿದೆ. ಆದರೆ, ಮಹಿಳಾ ಪೊಲೀಸರು ಕರ್ತವ್ಯ ನಿರ್ವಹಿಸುವ ವೇಳೆಯಲ್ಲಿ ಸರಿಯಾದ ಸಮಯಕ್ಕೆೆ ಮನೆಗೆ ಹೋಗಲು ಆಗುವುದಿಲ್ಲ. ಮನೆ ಕಡೆಗೆ ಗಮನ ಹರಿಸಲು ಸಾಧ್ಯವಾಗುವುದಿಲ್ಲ. ಮನೆಯಲ್ಲಿ ಅತ್ತೆೆ-ಮಾವ, ಗಂಡನ ಮನೆಯವರು ಆಕೆಯ ಮೇಲೆ ರೇಗುವುದು, ಅಸಹನೆ ವ್ಯಕ್ತಪಡಿಸುವುದು, ಅನುಮಾನಪಡುವುದು ಇನ್ನಿತರ ಸಮಸ್ಯೆಗಳು ಎದುರಿಸುತ್ತಿದ್ದಾರೆ. ಹೀಗಾಗಿ ಮಹಿಳಾ ಪೊಲೀಸ್ ಸಿಬ್ಬಂದಿಯ ಕುಟುಂಬವನ್ನು ಕರೆಯಿಸಿ ಅವರಿಗೆ ಅರಿವು ಮೂಡಿಸಿ, ಕೌಟುಂಬಿಕವಾಗಿ ಬಾಂಧವ್ಯ ವೃದ್ಧಿಯಾಗುವಂತೆ ಮಾಡಲಾಗುತ್ತದೆ. ಜತೆಗೆ ಸಮಸ್ಯೆಗಳು ಇದ್ದರೆ ಅಹವಾಲುಗಳನ್ನು ಸ್ವೀಕಾರ ಮಾಡಲಾಗುವುದು ಎಂದು ತಿಳಿಸಿದರು.
ತರಬೇತಿ ಪಡೆದುಕೊಂಡು ಕರ್ತವ್ಯಕ್ಕೆೆ ಹಾಜರಾಗುತ್ತಿರುವ ಪ್ರಶಿಕ್ಷಣಾರ್ಥಿಗಳು ಮುಖ್ಯವಾಗಿ ಸೇವಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಸಮಾಜದಿಂದ ನೀವು ಏನನ್ನು ಬಯಸುತ್ತೀರೋ ಸಮಾಜ ಹಾಗೂ ಶ್ರೀಸಾಮಾನ್ಯರೂ ನಿಮ್ಮಿಂದ ಅದನ್ನೇ ಬಯಸುತ್ತಾರೆ ಎಂದರು.
ನಾಗರಿಕ ಸಮಾಜದಲ್ಲಿ ಮಾನವಿಯತೆಯಿಂದ ವರ್ತಿಸುವುದನ್ನು ಪೊಲೀಸರು ರೂಢಿಸಿಕೊಳ್ಳಬೇಕು. ಪೊಲೀಸರು ಸಾವಿನಲ್ಲೂ ಹಣ ಪಡೆಯುತ್ತಾರೆ, ಎಲ್ಲದರಲ್ಲಿಯೂ ಪಕ್ಷಪಾತ ಮಾಡುತ್ತಾರೆ. ಇದರಿಂದ ನೊಂದವರಿಗೆ ನ್ಯಾಯ ದೊರೆಯುವುದಿಲ್ಲ ಎನ್ನುವ ಅಪವಾದವನ್ನು ತಪ್ಪಿಸಬೇಕು. ಹೊಸದಾಗಿ ಕೆಲಸಕ್ಕೆೆ ಹಾಜರಾಗುತ್ತಿರುವ ನೀವು ಮಾನವೀಯತೆಯನ್ನು ರೂಢಿಸಿಕೊಳ್ಳಿ ಎಂದು ಸಲಹೆ ನೀಡಿದರು.
ದಕ್ಷಿಣ ವಲಯ ಐಜಿಪಿ ಡಾ.ಬಿ.ಎಂ.ಬೋರಲಿಂಗಯ್ಯ, ಕೆಪಿಎ ನಿರ್ದೇಶಕ ಎಸ್.ಎಲ್.ಚನ್ನಬಸವಣ್ಣ, ಸೆಸ್ಕ್ ವಿಚಕ್ಷಣ ದಳದ ಎಸ್‌ಪಿ ಸವಿತಾ ಹೂಗಾರ್, ಪೊಲೀಸ್ ತರಬೇತಿ ಶಾಲೆಯ ಪ್ರಾಂಶುಪಾಲೆ ಎಂ.ಎಸ್.ಗೀತಾ ಪ್ರಸನ್ನ, ಡಿಸಿಪಿ ಆರ್.ಎನ್.ಬಿಂದುಮಣಿ, ಡಿವೈಎಸ್‌ಪಿ ಶಂಕರೇಗೌಡ ಇತರರು ಇದ್ದರು.
ಪ್ರಶಸ್ತಿ ಪುರಸ್ಕೃತರು
ತರಬೇತಿ ಸಮಯದಲ್ಲಿ ವಿವಿಧ ವಿಭಾಗದಲ್ಲಿ ಉತ್ತಮ ಪ್ರದರ್ಶನ ನಿರ್ವಹಣೆ ಮಾಡಿದ ಪ್ರಶಿಕ್ಷಣಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪುರಸ್ಕಾಾರ ನೀಡಲಾಯಿತು.
ತುಮಕೂರು ಜಿಲ್ಲೆೆಯ ಕೆ.ಜಿ.ಪವಿತ್ರಾ ಎಲ್ಲ ವಿಭಾಗದಲ್ಲಿ ಅತ್ಯುನ್ನತ ಪ್ರದರ್ಶನ ಪುರಸ್ಕಾರವನ್ನು ಪಡೆದುಕೊಂಡರು. ಒಳಾಂಗಣ ವಿಭಾಗದಲ್ಲಿ ವಿಜಯನಗರ ಜಿಲ್ಲೆೆಯ ರೇಷ್ಮಾ ಎಂ.ರಾಥೋಡ್ (ಪ್ರ), ಬೆಂಗಳೂರು ನಗರದ ಕುಸುಮಾ ಚನ್ನಪ್ಪ ಲಮಾಣಿ (ದ್ವಿ) ಪ್ರಶಸ್ತಿ ಗಳಿಸಿದರು. ಹೊರಾಂಗಣ ವಿಭಾಗದಲ್ಲಿ ತುಮಕೂರು ಜಿಲ್ಲೆೆಯ ಕೆ.ಜಿ.ಪವಿತ್ರಾಾ (ಪ್ರ), ಬೆಂಗಳೂರು ನಗರದ ಕುಸುಮಾ ಚನ್ನಪ್ಪ ಲಮಾಣಿ (ದ್ವಿ) ಪ್ರಶಸ್ತಿ ಪಡೆದವರು.
ಎಸ್‌ಎಲ್‌ಆರ್ ಫೈರಿಂಗ್ ವಿಭಾಗದಲ್ಲಿ ಶಿವಮೊಗ್ಗ ಜಿಲ್ಲೆೆಯ ಮೇಘನಾ ರವಿಕುಮಾರ್ ನಾಯ್ಕ (ಪ್ರ), ಬೆಂಗಳೂರು ನಗರ ಕೇಂದ್ರ ವಿಭಾಗದ ಟಿ.ಪೂರ್ಣಿಮಾ (ದ್ವಿ) ಪ್ರಶಸ್ತಿ ಗಳಿಸಿದರು. 9 ಎಂಎಂ ಪಿಸ್ತೂಲ್ ಫೈರಿಂಗ್ ವಿಭಾಗದಲ್ಲಿ ಬೆಂಗಳೂರು ನಗರ ಈಶಾನ್ಯ ವಿಭಾಗದ ಎಚ್.ಬಿ.ಧನ್ಯಾ (ಪ್ರ), ಮೈಸೂರು ನಗರದ ಎಸ್.ಎನ್.ಚೈತ್ರಾ (ದ್ವಿ) ಪ್ರಶಸ್ತಿ ಪಡೆದುಕೊಂಡರು.
ಕನ್ನಡಮಯ ಪಥಸಂಚಲನ!
ನಿರ್ಗಮನ ಪಥಸಂಚಲನ ಕಾರ್ಯಕ್ರಮ ಅಲ್ಲದೇ ಪಥಸಂಚಲನ ಸೂಚನೆಯೂ ಕನ್ನಡಮಯವಾಗಿತ್ತು. ಈ ಮೂಲಕ ಒಂದು ದಿನ ಮುಂಚೆಯೇ ಕನ್ನಡ ರಾಜ್ಯೋತ್ಸವದ ವಾತಾವರಣ ಕಂಡುಬಂತು.
ಈ ಹಿಂದಿನ ಪಥಸಂಚಲನಗಳಲ್ಲಿ ಆದೇಶಗಳು, ಸೂಚನೆಗಳನ್ನು ಹಿಂದಿ ಭಾಷೆ ಅಥವಾ ಇಂಗ್ಲಿಷ್ ಭಾಷೆಯಲ್ಲಿ ನೀಡಲಾಗುತ್ತಿತ್ತು. ಆದರೆ ಈ ಕಾರ್ಯಕ್ರಮದಲ್ಲಿ ಎಲ್ಲ ಆದೇಶ-ಸೂಚನೆಗಳು, ಗೌರವ ಸ್ವೀಕಾರದ ಎಲ್ಲವೂ ಕನ್ನಡದಲ್ಲೇ ನಡೆಯಿತು.
ಪಥಸಂಚಲನದ ಪೂರ್ಣ ತಂಡವನ್ನು ಮುನ್ನಡೆಸುತ್ತಿದ್ದ ಕೆ.ಜಿ.ಪವಿತ್ರಾ ಅವರು ಕನ್ನಡದಲ್ಲಿಯೇ ಸೂಚನೆಗಳನ್ನು ನೀಡುತ್ತಿದ್ದದ್ದು ವಿಶೇಷವಾಗಿತ್ತು.