ಪ್ರತಿಭೆ ಸಾಕಾರಗೊಳ್ಳಲು ತರಬೇತಿ ಅತ್ಯಗತ್ಯ

 ಕಾನ್‌ಬೈಲ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ರವೀಶ್‌ಕುಮಾರ್ ಮಾತನಾಡಿದರು.
ಕಾನ್‌ಬೈಲ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ರವೀಶ್‌ಕುಮಾರ್ ಮಾತನಾಡಿದರು.
Published on

ಸುಂಟಿಕೊಪ್ಪ: ಶ್ರೀ ತಲಕಾವೇರಿ ಜ್ಞಾನವಿಕಾಸ ಸಮಿತಿ ವತಿಯಿಂದ ಕಾನ್‌ಬೈಲ್‌ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾನ್‌ಬೈಲ್ ಕಾರ್ಯಕ್ಷೇತ್ರದ ಸ್ವಸಹಾಯ ಸಂಘದ ಪದಾಧಿಕಾರಿಗಳಿಗೆ ಭಾನುವಾರ ಸ್ವಉದ್ಯೋಗ ಹಾಗೂ ಆರೋಗ್ಯದ ಮಾಹಿತಿ ಕಾರ್ಯಗಾರ ಆಯೋಜಿಸಲಾಗಿತ್ತು.

ಕಾರ್ಯಾಗಾರದಲ್ಲಿ ಮಾತನಾಡಿದ ಕೂಡಿಗೆ ಸ್ವಉದ್ಯೋಗ ತರಬೇತಿ ಕೇಂದ್ರದ ನಿರ್ದೇಶಕ ರವೀಶ್‌ಕುಮಾರ್, 12 ವರ್ಷಗಳಿಂದ ನಮ್ಮ ಸಂಸ್ಥೆ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಸಾವಿರಾರು ಯುವಜನತೆಯ ಪಾಲಿಗೆ ಸಂಜೀವಿನಿಯಾಗಿದೆ. ಜಿಲ್ಲೆ ಸೇರಿದಂತೆ ನೆರೆಯ ಜಿಲ್ಲೆಗಳ ಯುವಜನತೆಗೆ ಬದುಕು ಕಟ್ಟಿಕೊಳ್ಳಲು ದಾರಿದೀಪವಾಗಿದೆ ಎಂದರು.

ಪ್ರತಿಯೊಬ್ಬರಿಗೂ ಪ್ರತಿಭೆ ಇರುತ್ತದೆ. ಅದು ಸಾಕಾರಗೊಳ್ಳಬೇಕಾದರೆ ತರಬೇತಿಗಳಿಗೆ ತೆರಳಬೇಕು. ಅಲ್ಲಿ ಆಸಕ್ತಿಗನುಸಾರವಾಗಿ ತರಬೇತಿ ಪಡೆದು ವೈಯಕ್ತಿಕ ಬದುಕು ಕಟ್ಟಿಕೊಳ್ಳಬಹುದಾಗಿದೆ. ಇಲ್ಲಿ ತರಬೇತಿ ಪಡೆದ ಅದೆಷ್ಟೋ ಜನರು ನಗರ ಪ್ರದೇಶಗಳಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಂಡಿದ್ದಾರೆ ಎಂದರು.

ಕೂಡಿಗೆಯ ತರಬೇತಿ ಕೇಂದ್ರದಲ್ಲಿ ಟೈಲರಿಂಗ್, ಎಂಬ್ರಾಯಿಡರಿ, ಕುಚ್ಚು ಹಾಕುವುದು, ಫಿನಾಯಿಲ್, ಸೋಪ್ ಹಾಗೂ ತ್ವರಿತ ಆಹಾರ, ಬೇಕರಿ ತಿಂಡಿ ತಿನ್ನಿಸುಗಳ ತಯಾರಿಕಾ ತರಬೇತಿ ನೀಡಲಾಗುತ್ತಿದೆ. ತರಬೇತಿ ಪಡೆದವರಿಗೆ ಪ್ರಮಾಣ ಪತ್ರವನ್ನು ಇಲಾಖೆಯಿಂದ ನೀಡಲಾಗುವುದು. ಇದನ್ನು ಪಡೆದವರು ಉದ್ಯೋಗಕ್ಕೆ ತೆರಳಬಹುದು ಮತ್ತು ಸ್ವಉದ್ಯೋಗ ಆರಂಭಿಸಲು ಬ್ಯಾಂಕ್‌ಗಳಿಂದ ಸುಲಭವಾಗಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದೆಂದು ಹೇಳಿದರು.

ಆಶಾ ಕಾರ್ಯಕರ್ತೆ ಸುಮಿತ್ರಾ ಮಾತನಾಡಿ, ಮನೆಯ ಸುತ್ತಮುತ್ತಲಿನ ಪರಿಸರವನ್ನು ಪ್ರತಿಯೊಬ್ಬರೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ಮಳೆಗಾಲದ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳು ಬಾಧಿಸುವುದರಿಂದ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ನಮ್ಮ ದೇಹದಲ್ಲಿ ಸಣ್ಣ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆ ಕಂಡು ಬಂದ ತಕ್ಷಣವೇ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆಯುವಂತಾಗಬೇಕು. ಒಂದು ವೇಳೆ ನಿರ್ಲಕ್ಷಿಸಿದರೆ ರೋಗ ಉಲ್ಬಣಗೊಂಡು ಸಾವು ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀನಿಧಿ ತಂಡದ ವಿನುತಾ ವಹಿಸಿದ್ದರು. ವೇದಿಕೆಯಲ್ಲಿ ಕಾನ್‌ಬೈಲ್ ಒಕ್ಕೂಟದ ಅಧ್ಯಕ್ಷೆ ಭವ್ಯಾ, ನಿಕಟಪೂರ್ವ ಅಧ್ಯಕ್ಷೆ ಖತ್ತೀಜ, ಸೇವಾ ಪ್ರತಿನಿಧಿ ಯಶೋದಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net