

ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂಸವಾರಿ ಮೆರವಣಿಗೆಯ ಪ್ರಮುಖ ಆಕರ್ಷಣೆಯಾದ ಗಜಪಡೆಗೆ ಮರದ ಅಂಬಾರಿ ಹೊರುವ ತಾಲೀಮಿಗೆ ಸೋಮವಾರ ಚಾಲನೆ ದೊರೆಯಿತು.
ಮೊದಲ ದಿನ ಅಂಬಾರಿ ಆನೆ ಅಭಿಮನ್ಯು 280 ಕೆ.ಜಿ.ತೂಕದ ಮರದ ಅಂಬಾರಿ, 400 ಕೆ.ಜಿ.ಮರಳಿನ ಮೂಟೆ ಸೇರಿದಂತೆ ಸೇರಿದಂತೆ ಒಟ್ಟು 750ಕ್ಕೂ ಭಾರ ಹೊರುವ ಮೂಲಕ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ (5 ಕಿ.ಮೀ) ಯಶಸ್ವಿಯಾಗಿ ಹೆಜ್ಜೆ ಹಾಕಿದ.
ಸಂಜೆ 5.30ಕ್ಕೆ ಅರಮನೆ ಆವರಣ ಬಿಟ್ಟ ಅಭಿಮನ್ಯು ಸಂಜೆ 6.40ರ ವೇಳೆಗೆ ಬನ್ನಿಮಂಟಪ ತಲುಪಿದ್ದಾನೆ. 1 ಗಂಟೆ 10 ನಿಮಿಷದಲ್ಲಿ ಬನ್ನಿಮಂಟಪ ತಲುಪುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾನೆ. ಆ ಮೂಲಕ ಅಂಬಾರಿ ಹೊರಲು ತಾನು ಸಮರ್ಥನಿದ್ದೇನೆ ಎಂಬ ಸಂದೇಶ ನೀಡಿದ್ದಾನೆ.
ಅಭಿಮನ್ಯು ಮರದ ಅಂಬಾರಿ ಹೊತ್ತು ಗಾಂಭೀರ್ಯದಿಂದ ಮುಂದೆ ನಡೆದರೆ, ಆತನ ಪಕ್ಕ ಕುಮ್ಕಿ ಆನೆಗಳಾದ ಚೈತ್ರಾ ಮತ್ತು ಕಾವೇರಿ ಸಾಗಿ ಸಾಥ್ ನೀಡಿದವು. ಗಂಡಾನೆಗಳಾದ ಅರ್ಜುನ, ಗೋಪಾಲಸ್ವಾಮಿ, ಧನಂಜಯ, ಮಹೇಂದ್ರ, ಭೀಮ, ಹೆಣ್ಣಾನೆ ಲಕ್ಷ್ಮಿಯೂ ಹಿಂದೆ ಹೆಜ್ಜೆ ಹಾಕಿದರು.
ರಾಜಪಥದಲ್ಲಿದ ನೂರಾರು ಜನ ಆನೆಗಳ ತಾಲೀಮನ್ನು ಕಣ್ತುಂಬಿಕೊಂಡರು. ಮರದ ಅಂಬಾರಿ ಹೊತ್ತು ಸಾಗುತ್ತಿದ್ದ ಅಭಿಮನ್ಯ ಹಾಗೂ ಆತನ ಹಿಂದೆ ಸಾಗುತ್ತಿದ್ದ ಗಜಪಡೆಯ ಚಿತ್ರಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದರು. ಅನೇಕರು ಸೆಲ್ಫಿಯನ್ನು ಕ್ಲಿಕ್ಕಿಸಿಕೊಂಡರು.
ಈ ಪೈಕಿ ಸತತ 8 ವರ್ಷ ಅಂಬಾರಿ ಹೊತ್ತ ಅರ್ಜುನನಿಗೆ ವಯಸ್ಸಿನ ಕಾರಣಕ್ಕೆ ಈ ಬಾರಿ ಭಾರ ಹೊರಿಸಲಿಲ್ಲ. ಹಾಗಾಗಿ, ಅರ್ಜುನ ಮರದ ಅಂಬಾರಿಯನ್ನು ಹೊರುವುದಿಲ್ಲ. ಉಳಿದಂತೆ ಗೊಪಾಲಸ್ವಾಮಿ, ಧನಂಜಯ, ಮಹೇಂದ್ರ, ಭೀಮ ಆನೆಗಳಿಗೆ ಭಾರ ಹೊರಿಸಿ ತಾಲೀಮು ನಡೆಸಲಾಗಿತ್ತು. ಆದರೆ, ಈ ಪೈಕಿ ಗೋಪಾಲಸ್ವಾಮಿ, ಧನಂಜಯ, ಮಹೇಂದ್ರನಿಗೆ ಮಾತ್ರ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲು ಅರಣ್ಯ ಅಧಿಕಾರಿಗಳು ನಿರ್ಧರಿಸಿದ್ದಾರೆ. ಪ್ರತಿದಿನ ಒಂದು ಆನೆಗೆ ಮರದ ಅಂಬಾರಿ ಹೊರಲಿವೆ.
ಇದಕ್ಕೂ ಮೊದಲು ಅರಮನೆಯ ಆವರಣದಲ್ಲಿರುವ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿವಾಸದ ಮುಂದೆ ಅಳವಡಿಸಲಾಗಿರುವ ಕ್ರೇನ್ ಸಹಾಯದಿಂದ ಅಭಿಮನ್ಯು ಮೇಲೆ ಮರಳು ಮೂಟೆ ಮತ್ತು ಮರದ ಅಂಬಾರಿ ಇರಿಸಲಾಯಿತು. ಬಳಿಕ ಅರ್ಚಕ ಮೈಸೂರಿನ ಪ್ರಹ್ಲಾದ್ ರಾವ್ ಗಜಪಡೆಗೆ ಪೂಜೆ ಸಲ್ಲಿಸಿದರು.
ಅಭಿಮನ್ಯು ಮರದ ಅಂಬಾರಿ ಹೊರುವ ತಾಲೀಮನ್ನು ಯಶಸ್ವಿಯಾಗಿ ಪೂರೈಸಿದ್ದಾನೆ. ಅರಮನೆ ಆವರಣದಿಂದ ಬನ್ನಿಮಂಟಪದವರೆಗಿನ ದೂರವನ್ನು 1.10 ಗಂಟೆಯಲ್ಲಿ ಕ್ರಮಿಸಿದ್ದಾನೆ. ಗೋಪಾಲಸ್ವಾಮಿ, ಧನಂಜಯ, ಮಹೇಂದ್ರನಿಗೂ ಮರದ ಅಂಬಾರಿ ಹೊರುವ ತಾಲೀಮು ನಡೆಸಲಾಗುತ್ತದೆ.ಕರಿಕಾಳನ್, ಡಿಸಿಎಫ್