

ಚಿಕ್ಕೋಡಿ: ಕೆಎಲ್‌ಇ ಸಂಸ್ಥೆಯ ಬಿ.ಕೆ.ಕಾಲೇಜಿನ ವಿದ್ಯಾರ್ಥಿಗಳಿಗೆ ಕೆಇಎ, ನೀಟ್, ಜೆಇಇ, ಸಿಎ, ಕೆಎಎಸ್, ಐಎಎಸ್ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾಗುವ ತರಬೇತಿಯನ್ನು ಧಾರವಾಡದ ಕೋಚಿಂಗ್ ಸಂಸ್ಥೆಯಾಗಿರುವ ಮೈಪಾಲ್ ಸೆಂಟರ್ ನೀಡಲು ಮುಂದಾಗಿದೆ ಎಂದು ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ ಹೇಳಿದರು.
ಇಲ್ಲಿನ ಬಿ.ಕೆ. ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ನೀಟ್ ಪರೀಕ್ಷೆ ತರಬೇತಿ ಸದ್ಬಳಕೆ ಮಾಡಿಕೊಂಡು ಜೀವನದಲ್ಲಿ ಯಶಸ್ಸು ಸಾಸಬೇಕು. ಕೆಎಲ್‌ಇ ಸಂಸ್ಥೆ ಗುಣಾತ್ಮಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತಿದೆ. ಶಿಕ್ಷಣ, ಆರೋಗ್ಯ, ಕೃಷಿ, ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರಗಳಲ್ಲಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ದುಡಿಯುತ್ತಿದೆ. ಗ್ರಾಮೀಣ ವಿದ್ಯಾರ್ಥಿಗಳು ಜಾಗತಿಕ ಸ್ಪರ್ಧಾತ್ಮಕತೆಗೆ ತಕ್ಕಂತೆ ಸಿದ್ಧಗೊಳ್ಳಬೇಕೆಂಬ ಮಹಾದಾಸೆ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರದು ಎಂದು ತಿಳಿಸಿದರು.
ಪಾಲಕರು ಮಕ್ಕಳ ಅಭಿರುಚಿಗೆ ತಕ್ಕಂತೆ ಶಿಕ್ಷಣ ನೀಡಿದರೆ ಮಾತ್ರ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಕೆಎಲ್‌ಇ ಸಂಸ್ಥೆ ಕೋವಿಡ್ ನಂತರ ಹಲವಾರು ವೈದ್ಯಕೀಯ ಶಿಕ್ಷಣದಲ್ಲಿ ಬೇಸಿಕ್ ಶಿಕ್ಷಣ ನೀಡುತ್ತಿದೆ ಎಂದರು.
7ನೇ ಹೆಚ್ಚುವರಿ ಜಿಲ್ಲಾ ನ್ಯಾಯಾೀಶ ತಾರಕೇಶ್ವರಗೌಡ ಪಾಟೀಲ ಮಾತನಾಡಿ, ಮಕ್ಕಳು ಪಾಲಕರ ಶ್ರಮ ಅರಿತು ಜವಾಬ್ದಾರಿಯೊಂದಿಗೆ ನಡೆದುಕೊಂಡು ಉತ್ತಮವಾದ ಪ್ರತಿಫಲ ಕೊಡಬೇಕು. ಮೊಬೈಲ್‌ನಿಂದ ಒಳ್ಳೆಯದನ್ನು ಮಾತ್ರ ಪಡೆದುಕೊಂಡು ಸಾಧನೆ ಮಾಡಿ ಮಾನವೀಯ ವೌಲ್ಯ ಅಳವಡಿಸಿಕೊಳ್ಳಬೇಕು ಎಂದರು.
ಪಿಯು ಕಾಲೇಜಿನ ಪ್ರಾಚಾರ್ಯ ಪಿ.ಪಿ.ಕೋಳಿ ಪ್ರಾಸ್ತಾವಿಕ ಮಾತನಾಡಿದರು. ಕಳೆದ ಸಾಲಿನಲ್ಲಿ ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ಥಾನಿಕ ಆಡಳಿತ ಮಂಡಳಿಯ ಸದಸ್ಯರಾದ ಮಹೇಶ ಭಾತೆ, ಎನ್.ಎಸ್. ವಂಟಮುತ್ತೆ, ಮೈಪಾಲ್ ಕೋಚಿಂಗ್ ಸಂಸ್ಥೆಯ
ವಿನಾಯಕ ಕುಲಕರ್ಣಿ ಉಪಸ್ಥಿತರಿದ್ದರು. ಪದವಿ ಪ್ರಾಚಾರ್ಯ ಡಾ. ಬಿ.ಜಿ. ಕುಲಕರ್ಣಿ ಸ್ವಾಗತಿಸಿದರು. ಮೋಹನ ಪಾಟೀಲ, ಪ್ರಿಯಾ ಖೊಂಬಾರೆ ನಿರೂಪಿಸಿದರು. ತಿಪ್ಪಣ್ಣ ಖೋತ ವಂದಿಸಿದರು.