

ಹುಣಸೂರು: ರೈತಸಂಘಕ್ಕೆ ಸೇರ್ಪಡೆಗೊಳ್ಳುವ ಯುವಕರಿಗೆ ರೈತ ಹೋರಾಟದ ಕುರಿತು ನಿರಂತರ ತರಬೇತಿ ನೀಡಲಾಗುವುದು ಎಂದು ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.
ತಾಲೂಕಿನ ಮುಳ್ಳೂರು ಗ್ರಾಮದಲ್ಲಿ ಸೋಮವಾರ ರೈತ ಸಂಘದ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಯಾವುದೇ ಚಳವಳಿ ವ್ಯಕ್ತಿ ಕೇಂದ್ರಿತವಾಗಬಾರದು. ಚಳವಳಿಯನ್ನು ಸಿದ್ಧಾಂತದಡಿ ಕಟ್ಟಬೇಕು. ಯಾವುದೇ ಸಂಘಟನೆ ವಿಚಾರವಂತ ಕಾರ್ಯಕರ್ತರ ತಂಡವನ್ನು ಹೊಂದಿರಬೇಕು. ಈ ನಿಟ್ಟಿನಲ್ಲಿ ನಿರಂತರವಾಗಿ ಯುವಕರಿಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಹಸಿರು-ನೀಲಿ-ಕೆಂಪು ಟವೆಲ್‌ಗಳು ಒಂದಾಗಿ ಸೈದ್ಧಾಂತಿಕ ರಾಜಕೀಯ ಸ್ಪಷ್ಟತೆಯೊಂದಿಗೆ ಹೋರಾಟ ಮಾಡಬೇಕು ಎಂದರು.
ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಒಂದು ತಾಲೂಕನ್ನು ಆಯ್ಕೆ ಮಾಡಿಕೊಂಡು 1 ವರ್ಷದೊಳಗೆ ಎಲ್ಲ ಗ್ರಾಮಗಳಲ್ಲಿ ರೈತ ಸಂಘ ಸ್ಥಾಪಿಸಲು ನಿರ್ಧರಿಸಿದ್ದು, ಮೈಸೂರು ಜಿಲ್ಲೆಯಿಂದ ಹುಣಸೂರು ತಾಲೂಕನ್ನು ಆಯ್ಕೆ ಮಾಡಲಾಗಿದೆ. ಹುಣಸೂರು ತಾಲೂಕಿನಲ್ಲಿ ಪ್ರಭಲವಾದ ಚಳವಳಿಯನ್ನು ಕಟ್ಟಬೇಕು ಎಂದರು.
ಸಂಘದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ಅಲ್ಪ ಮೊತ್ತದ ಸಾಲಕ್ಕಾಗಿ ರೈತರ ಚರ-ಸ್ಥಿರ ಸ್ವತ್ತುಗಳನ್ನು ಹರಾಜು ಹಾಕುವುದನ್ನು ತಡೆ ಹಿಡಿದಿದ್ದು, ರೈತರಿಗೆ ಉಚಿತ ವಿದ್ಯುತ್ ದೊರಕಲು, ಸಾಲ ಮನ್ನಾ ಕಾರ್ಯಕ್ರಮ ರೈತ ಸಂಘದ ಹೋರಾಟದ ಪ್ರತಿಫಲವಾಗಿದೆ. ರೈತರು ಪಕ್ಷಾತೀತವಾಗಿ, ಜಾತ್ಯತೀತವಾಗಿ ಒಂದಾಗದಿದ್ದರೆ ರೈತ ಕುಲಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್ ಮಾತನಾಡಿ, ತಂಬಾಕಿಗೆ ಬೆಲೆ ದೊರಕಿಸಲು ಸರ್ಕಾರದ ಮೇಲೆ ಒತ್ತಡ ಹಾಕುತ್ತಿದ್ದು, ಉತ್ತಮ ಬೆಲೆ ಪಡೆಯಲು ಹೋರಾಟ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಈ ಸಂಬಂಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಸಭೆಯಲ್ಲಿ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ ಮಾತನಾಡಿದರು. ಸಂಘದ ತಾಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಂಬಾಕು ಬೆಳೆಗಾರರ ಹೋರಾಟದ ಗೌರವಾಧ್ಯಕ್ಷ ಉಂಡವಾಡಿ ಸಿ.ಚಂದ್ರೇಗೌಡ, ತಾಲೂಕು ಉಪಾಧ್ಯಕ್ಷ ಬಸವರಾಜೇಗೌಡ, ಪ್ರಧಾನ ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಮುಖಂಡರಾದ ಅರಸು ಕಲ್ಲಹಳ್ಳಿ ವಿಷಕಂಠಪ್ಪ, ಉಂಡವಾಡಿ ಅಧ್ಯಕ್ಷ ನೀತಾ ಅಮ್ಮಯ್ಯ, ಶಿವಕುಮಾರ್, ಪುಟ್ಟಣ್ಣಯ್ಯ, ಮಾಸ್ಟರ್ ಗಂಗಾಧರ್, ಸತೀಶ್ ಇತರರು ಇದ್ದರು.
ಮುಳ್ಳೂರು ಘಟಕಕ್ಕೆ ಆಯ್ಕೆ: ಮುಳ್ಳೂರು ಘಟಕದ ಅಧ್ಯಕ್ಷರಾಗಿ ಮಹದೇವರಾವ್ ನಿಂಬಾಲ್ಕರ್, ಗೌರವಾಧ್ಯಕ್ಷರಾಗಿ ವೆಂಕಟೇಶ್ ಕಂಪಕದಂ, ಗೌರವ ಸಲಹೆಗಾರರಾಗಿ ಎಂ.ಎಸ್.ವಿನಯ್, ಉಪಾಧ್ಯಕ್ಷರಾಗಿ ಈರೇಶ್, ಚೆಲುವಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಗಂಗಾಧರ್, ಖಜಾಂಚಿಯಾಗಿ ಸುದರ್ಶನ್ ರಾವ್ ಕ್ಷೀರಸಾಗರ್, ಸಹ ಕಾರ್ಯದರ್ಶಿಗಳಾಗಿ ಗಂಗಾಧರ್ ನಾಯಕ್, ಮಂಜಾಚಾರಿ ಹಾಗೂ ದೇವರಾಜ್, ಸಂಘಟಣಾ ಕಾರ್ಯದರ್ಶಿಗಳಾಗಿ ಜ್ಞಾನೇಶ್ವರ್ ರಾವ್, ರಘು ಆಯ್ಕೆಗೊಂಡರು.