

ಮಂಗಳೂರು: ಸಂಜೀವಿನಿ ಒಕ್ಕೂಟಗಳ ಮೂಲಕ ಗ್ರಾಮ ಪಂಚಾಯಿತಿಗಳಲ್ಲಿ ಘನತ್ಯಾಜ್ಯ ನಿರ್ವಹಿಸುವ ನಿಟ್ಟಿನಲ್ಲಿ ಕೆಮ್ರಾಲ್, ಅತಿಕಾರಿಬೆಟ್ಟು, ಕಂದಾವರ, ಐಕಳ, ಪಡು ಪಣಂಬೂರು ಹಾಗೂ ಹಳೆಯಂಗಡಿ ಗ್ರಾಪಂ ಮಟ್ಟದ ಒಕ್ಕೂಟಗಳಿಗೆ ಒಡಂಬಡಿಕೆ ಮಾಡಿಕೊಳ್ಳುವ ತರಬೇತಿ ಹಳೆಯಂಗಡಿ ಗ್ರಾಪಂ ಸಭಾಂಗಣದಲ್ಲಿ ಬುಧವಾರ ಜರುಗಿತು.
ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಉದ್ಘಾಟಿಸಿದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನಾಗಾರಾಜ್ ಎನ್.ಜಿ. ಸೂಕ್ತ ಸಲಹೆ ನೀಡಿದರು. ಪಂ.ಅಭಿವೃದ್ಧಿ ಅಧಿಕಾರಿ ಮುತ್ತಪ್ಪ ತರಬೇತಿ ಮಹತ್ವ ತಿಳಿಸಿದರು.
ಸ್ವಚ್ಛ ಭಾರತ್ ಮಿಷನ್ (ಗ್ರಾ) ಸಂಯೋಜಕ ಡೊಂಬಯ್ಯ ಇಡ್ಕಿದು ಮಾತನಾಡಿ, ಗ್ರಾಮ ಮಟ್ಟದಲ್ಲಿ ತ್ಯಾಜ್ಯ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಲು ಗ್ರಾಮ ಮಟ್ಟದ ಒಕ್ಕೂಟಗಳು ಮುತುರ್ವಜಿ ವಹಿಸಬೇಕು. ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುವ ಕೆಲಸವಾಗಬೇಕು. ಆ ಮೂಲಕ ಗ್ರಾಮದ ಸ್ವಚ್ಚತೆಗೆ ಆದ್ಯತೆ ನೀಡಬೇಕು ಎಂದರು.
ಸಾಹಸ್ ಸ್ವಯಂ ಸೇವಾ ಸಂಸ್ಥೆಯ ಭರತ್, ಕಸ ಸಂಗ್ರಹಣೆ ಮತ್ತು ವಿಲೇವಾರಿ ಸವಾಲಿನ ಕೆಲಸ. ಅನೇಕ ಅಡತಡೆಗಳು ಇರುತ್ತದೆ. ಮನೆಗಳಿಂದ ತ್ಯಾಜ್ಯ ಸಂಗ್ರಹಿಸುವಾಗ ಅವರಿಗೆ ಸಮರ್ಪಕ ಮಾಹಿತಿ ನೀಡಬೇಕು ಎಂದರು.
ನಂತರ ತ್ಯಾಜ್ಯ ವಿಂಗಡಣೆಯ ಕುರಿತು ಪ್ರಾಯೋಗಿಕವಾಗಿ ತಿಳಿಸಿದರು. ಎನ್‌ಆರ್‌ಎಲ್ಎಂ ತಾಲೂಕು ಕಾರ್ಯಕ್ರಮ ಅಧಿಕಾರಿ ಸುಬ್ರಹ್ಮಣ್ಯ ಸ್ವಾಗತಿಸಿದರು. ಕ್ಲಸ್ಟರ್ ಮೇಲ್ವಿಚಾರಕ ಮೋಹನ್ ವಂದಿಸಿದರು.