ಪಿಎಂ ವಿಶ್ವಕರ್ಮ ಯೋಜನೆ ನೋಂದಣಿಯಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲ ಸ್ಥಾನ: ಫಲಾನುಭವಿಗಳಿಗೆ ತರಬೇತಿ ಕಾರ್ಯಾಗಾರ

Training for PM Vishwakarma Yojana beneficiaries mandya
Published on

ಮಂಡ್ಯ: ಪಿಎಂ ವಿಶ್ವಕರ್ಮ ಯೋಜನೆಯ ನೋಂದಣಿಯಲ್ಲಿ ರಾಷ್ಟ್ರದಲ್ಲಿ ನಮ್ಮ ರಾಜ್ಯ ಮೊದಲ ಸ್ಥಾನದಲ್ಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ಹೇಳಿದರು.

ನಗರದ ಜಿಪಂ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಪಿಎಂ ವಿಶ್ವಕರ್ಮ ಯೋಜನೆ ಫಲಾನುಭವಿಗಳಿಗೆ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಉತ್ತಮ ಕಲೆ ರೂಡಿಸಿಕೊಂಡಿರುವ ಕುಶಲಕರ್ಮಿಗಳು ಇದ್ದಾರೆ. ಮಹಿಳೆಯರ ಒಕ್ಕೂಟ, ಸ್ತ್ರೀ ಶಕ್ತಿ ಸಂಘ, ರೈತ ಚಟುವಟಿಕೆ ಬೆಂಬಲಿಸುವ ಗುಂಪುಗಳಲ್ಲಿ ವಿಶ್ವಕರ್ಮ ಯೋಜನೆಯ ಮಾಹಿತಿ ನೀಡಿ ಎಂದು ಸಲಹೆ ನೀಡಿದರು.

ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಇದಾಗಿದೆ. ಕುಶಲಕರ್ಮಿಗಳು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಕುಶಲಕರ್ಮಿಗಳು ವಿವಿಧ ಸಾಂಪ್ರದಾಯಿಕ ಕಲೆಗಳನ್ನು ರೂಢಿಸಿಕೊಂಡಿರುತ್ತಾರೆ. ಅವುಗಳು ನಶಿಸಿ ಹೋಗದಂತೆ ನೋಡಿಕೊಳ್ಳುವುದು ಯೋಜನೆಯ ಉದ್ದೇಶವಾಗಿದೆ. ಜಿಲ್ಲೆಯಲ್ಲಿ ಅರ್ಹತೆ ಹೊಂದಿರುವ ಫಲಾನುಭವಿಗಳು ಬಿಟ್ಟು ಹೋಗಿದ್ದರೆ ಅವರನ್ನು ಕೂಡ ಈ ಯೋಜನೆಯ ವ್ಯಾಪ್ತಿಗೆ ತರಬೇಕು. ಇನ್ನೂ ವಿಸ್ತೃತವಾದ ರೂಪದಲ್ಲಿ ತರಬೇತಿ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದರು.

ಯಾವುದೇ ಯೋಜನೆ ಸರ್ಕಾರ ಜಾರಿಗೆ ತಂದಂತಹ ಸಂದರ್ಭದಲ್ಲಿ ಸಫಲತೆ ಸಿಗಬೇಕಾದರೆ ಅರ್ಹರಿಗೆ ತಲುಪಬೇಕು. ಜತೆಗೆ ಯೋಜನೆ ಕೇವಲ ದಾಖಲೆಗಳ ಮೇಲೆ ಉಳಿಯದೆ ಪ್ರತಿ ವ್ಯಕ್ತಿಯ ಮನೆ ಬಾಗಿಲಿಗೆ ತಲುಪಬೇಕು. ಆಗ ಮಾತ್ರ ಯೋಜನೆಗೆ ಸಾರ್ಥಕತೆ ಸಿಗುತ್ತದೆ. ಕರ್ನಾಟಕದಲ್ಲಿ ಪಿಎಂ ವಿಶ್ವಕರ್ಮ ಯೋಜನೆಯ ಮೊದಲ ಹಂತದಲ್ಲಿ 9 ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. ಎರಡನೇ ಹಂತದಲ್ಲಿ ಮಂಡ್ಯ ಸೇರ್ಪಡೆಯಾಗಿದ್ದು, ಇವರಿಗೆ 71,707 ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ವಿವರಿಸಿದರು.

ಯೋಜನೆಯಡಿ ನೋಂದಾಯಿಸಿಕೊಳ್ಳಲು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರು ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಿ, ಅವರ ಲಾಗಿನ್‌ನಲ್ಲಿ ಅನುಮೋದನೆ ನೀಡಿ ಜಿಲ್ಲಾಡಳಿತಕ್ಕೆ ಕಳಿಹಿಸಿಕೊಡುತ್ತಾರೆ. ನಂತರ ರಾಜ್ಯಮಟ್ಟದ ಸಮಿತಿಗೆ ಕಳುಹಿಸಿಕೊಡಲಾಗುತ್ತದೆ. ಮೂರು ಹಂತ ಯಶಸ್ವಿಯಾಗಿ ಮುಗಿದ ನಂತರ ಫಲಾನುಭವಿಗಳಿಗೆ ತರಬೇತಿ ನೀಡಲಾಗುವುದು. ತರಬೇತುದಾರರಿಗೆ 500 ರೂ ಸಂಭಾವನೆ ಹಾಗೂ 15 ಸಾವಿರ ರೂ ಮೌಲ್ಯದ ಟೂಲ್ಕಿಟ್‌ಗಳನ್ನು ಕೊಡಲಾಗುವುದು. ಇದರ ಸದುಪಯೋಗವನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಾಗಾರದಲ್ಲಿ ಸೂಕ್ಷ್ಮ, ಸಣ್ಣ ಹಾಗೂ ಮಧ್ಯಮ ಅಭಿವೃದ್ಧಿ ಕಾರ್ಯಾಲಯದ ಜಂಟಿ ನಿರ್ದೇಶಕ ಡಾ.ಕೆ.ಸಾಕ್ರೆಟಿಸ್, ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಶಿವಲಿಂಗಯ್ಯ, ಉಪನಿರ್ದೇಶಕಿ ಶೈಲಜಾ, ಲೀಡ್‌ಬ್ಯಾಂಕ್ ವ್ಯವಸ್ಥಾಪಕ ಅರುಣ್‌ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net