ಜೀವನೋಪಾಯಕ್ಕಾಗಿ ತರಬೇತಿ

Training for livelihood
Published on

ಮಡಿಕೇರಿ:

ತಪ್ಪು ಮಾಡುವುದು ಸಹಜ. ಆದರೆ ಅದನ್ನು ತಿದ್ದಿ ಪರಿವರ್ತನೆಗೊಳ್ಳಬೇಕು ಮತ್ತು ಸಿಕ್ಕ ಅವಕಾಶಗಳನ್ನು ಸದುಪಯೋಗಪಡಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ಎಚ್. ಸಿ. ಶಾಂಪ್ರಸಾದ್ ಹೇಳಿದರು. ನಬಾರ್ಡ್ ಮತ್ತು ಓ ಡಿ ಪಿ ಸಂಸ್ಥೆ ವತಿಯಿಂದ ಮಡಿಕೇರಿಯ ಜಿಲ್ಲಾ ಕಾರಾಗೃಹದಲ್ಲಿ ಮಂಗಳವಾರ ನಡೆದ ಎಲೆಕ್ಟ್ರಿಷಿಯನ್, ಪ್ಲಂಬಿಂಗ್ ಮತ್ತು ಸ್ಯಾನಿಟರಿ ವರ್ಕ್ಸ್ ಕೌಶಲ್ಯಾಭಿವೃದ್ಧಿ ತರಬೇತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಎಲೆಕ್ಟ್ರಿಷಿಯನ್ ಮತ್ತು ಪ್ಲಂಬಿಂಗ್ ತರಬೇತಿ ಪಡೆದಿರುವ ಕೈದಿಗಳ ಜೀವನೋಪಾಯಕ್ಕೆ ದಾರಿ ಕಂಡುಕೊಳ್ಳಲು ಹಾಗೂ ಸಬಲರಾಗಲು ಅವಕಾಶ ಸಿಕ್ಕಿದೆ. ನಾಗರಿಕ ಸಮಾಜದಲ್ಲಿ ಉತ್ತಮ ಜೀವನ ನಡೆಸಲು ಮತ್ತು ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಸಹಕರಿಸಿದ ನಬಾರ್ಡ್ ಹಾಗೂ ಒಡಿಪಿ ಸಂಸ್ಥೆ ಹಾಗೂ ಜಿಲ್ಲಾ ಕಾರಾಗ್ರಹ ಮುಖ್ಯಸ್ಥರು ಅಭಿನಂದನಾರ್ಹರು. ಹೊಸ ಜೀವನಕ್ಕೆ ಈ ತರಬೇತಿ ದಾರಿದೀಪವಾಗಲಿ ಎಂದರು.

ನಬಾರ್ಡ್ ಸಂಸ್ಥೆಯ ಮಹಾ ಪ್ರಬಂಧಕ ಡಾ. ಕೆ. ಎಸ್. ಮಹೇಶ್ ಮಾತನಾಡಿ ಇಲ್ಲಿ ತರಬೇತಿ ಪಡೆದವರು ಸಮಾಜಕ್ಕೆ ಹಿಂದಿರುಗಿದಾಗ ಅವರಿಗೆ ಸ್ವಂತ ಉದ್ಯೋಗ ಮಾಡಿ ಕುಟುಂಬ ನಿರ್ವಹಣೆ ಮಾಡಲು ಬ್ಯಾಂಕಿನ ಸಾಲ ಸೌಲಭ್ಯಗಳನ್ನು ನೀಡಲು ಬ್ಯಾಂಕಿನ ಮ್ಯಾನೇಜರ್‌ಗಳು ಮುಂದೆ ಬಂದಿದ್ದಾರೆ. ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ನಬಾರ್ಡ್ ಸಂಸ್ಥೆ ಕಳೆದ ೪೦ ವರ್ಷಗಳಿಂದ ಮಹಿಳಾ ಸಬಲೀಕರಣ, ಜಲಾನಯನ ಕಾರ್ಯಕ್ರಮ, ರೈತರು ಹಾಗೂ ಬುಡಕಟ್ಟು ಜನಾಂಗದವರ ಅಭಿವೃದ್ಧಿಗಾಗಿ ದೇಶದ ವಿವಿಧ ಭಾಗದಲ್ಲಿ ಕೌಶಲ್ಯ ಮತ್ತು ವಿವಿಧ ತರಬೇತಿಗಳನ್ನು ನೀಡಿ ಅವರನ್ನು ಸಬಲೀಕರಣ ಮಾಡುವಲ್ಲಿ ಶ್ರಮಿಸುತ್ತಿದೆ ಎಂದು ಹೇಳಿದರು.

ಓಡಿಪಿ ಸಂಸ್ಥೆ ನಿರ್ದೇಶಕ ಫಾ. ಅಲೆಕ್ಸ್ ಪ್ರಶಾಂತ್ ಸಿಕ್ವೇರ ಮಾತನಾಡಿ ಓಡಿಪಿ ಮತ್ತು ನಬಾರ್ಡ್ ಸಂಸ್ಥೆಯ ಸಹಭಾಗಿತ್ವದಲ್ಲಿ ಹಲವಾರು ಜನಪರ ಕಾರ್ಯಕ್ರಮಗಳು ಆಯೋಜಿಸಿಕೊಂಡು ಬಡ ಮಹಿಳೆಯರ, ರೈತರ ಅಭಿವೃದ್ಧಿಗಾಗಿ ಶ್ರಮಿಸಲಾಗುತ್ತಿದೆ. ಜೈಲಿನಲ್ಲಿರುವ ಕೈದಿಗಳಿಗೆ ಅವರ ಮುಂದಿನ ಜೀವನೋಪಾಯಕ್ಕಾಗಿ ೩೦ ದಿನಗಳ ಸಹಾಯಕ ಎಲೆಕ್ಟ್ರಿಷಿಯನ್, ಪ್ಲಂಬಿಂಗ್ ಹಾಗೂ ಸ್ಯಾನಿಟರಿ ವರ್ಕ್ಸ್ ತರಬೇತಿಯನ್ನು ನೀಡಲಾಗಿದೆ. ಇದರಿಂದ ಅವರ ಕುಟುಂಬಗಳನ್ನು ಮುನ್ನಡೆಸಿಕೊಂಡು ಹೋಗಲು ಸಹಾಯವಾಗುತ್ತದೆ ಎಂದರು.

ನಬಾರ್ಡ ಕೊಡಗು ಜಿಲ್ಲಾ ವ್ಯವಸ್ಥಾಪಕ ರಮೇಶ್ ಬಾಬು ವಿ., ಜಿಲ್ಲಾ ಕಾರಾಗ್ರಹದ ಅಧೀಕ್ಷಕ ಸಂಜಯ ಜತ್ತಿ ಮಾತನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಸಾದ್ ಕೆ. ಬಿ., ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯಕ್, ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ರಮಾಕಾಂತ್, ಕೆನರಾ ಬ್ಯಾಂಕ್ ಪ್ರಾದೇಶಿಕ ಮುಖ್ಯಸ್ಥ ರಾಜೇಶ್ ಕುಮಾರ್, ಎಸ್‌ಬಿಐ ಪ್ರಾದೇಶಿಕ ಮುಖ್ಯಸ್ಥ ಶ್ರೀಜಿತ್, ಓಡಿಪಿ ಸಂಸ್ಥೆಯ ಜಾಯ್ಸ, ಮೋಲಿ ಮತ್ತಿತರರು ಇದ್ದರು.

೫೦ ಶಿಬಿರಾರ್ಥಿಗಳಿಗೆ ತರಬೇತಿ ನೀಡಲಾಗಿದ್ದು, ಪ್ರಮಾಣ ಪತ್ರ ಮತ್ತು ೩,೩೦೦ ರೂ. ಮೌಲ್ಯದ ಟೂಲ್ ಕಿಟ್ ವಿತರಿಸಲಾಯಿತು. ಜೈಲಿನಿಂದ ಬಿಡುಗಡೆ ಆದ ತಕ್ಷಣ ಸ್ವಾವಲಂಬಿಯಾಗಿ ಕೆಲಸ ಮಾಡಲು ಇದರಿಂದ ಅನುಕೂಲ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net