

ಕಾರವಾರ: ಕೊಯಮತ್ತೂರಿನಲ್ಲಿ ನಡೆಯಲಿರುವ ರೋಲರ್ ಸ್ಕೇಟಿಂಗ್ (Skating ) ಹಾಕಿ ಹಾಗೂ ಡರ್ಬಿ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಕರ್ನಾಟಕವನ್ನು ಪ್ರತಿನಿಧಿಸುವ ತಂಡಗಳು ಕಾರವಾರದಲ್ಲಿ ತರಬೇತಿ ಪಡೆಯುತ್ತಿವೆ. ಜಿಲ್ಲೆಯ 10 ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 70 ಸ್ಪರ್ಧಿಗಳು ಇಡೀ ದಿನ ಕಾಲಿಗೆ ಸ್ಕೇಟಿಂಗ್ ಕಟ್ಟಿಕೊಂಡು ತರಬೇತಿ ಪಡೆಯುತ್ತಿದ್ದಾರೆ. ಕರ್ನಾಟಕ ರೋಲರ್ ಸ್ಕೇಟಿಂಗ್ ಕೋಚ್ ದಿಲೀಪ ಹಣಬರ್ ತರಬೇತಿ ನೀಡುತ್ತಿದ್ದಾರೆ. ಕೈಗಾ ಅಣು ವಿದ್ಯುತ್ ಕೇಂದ್ರದ ಉದ್ಯೋಗಿಯಾಗಿರುವ ದಿಲೀಪ ಹಣಬರ್ ರಾಜ್ಯ ರೋಲರ್ ಸ್ಕೇಟಿಂಗ್ ತಂಡಗಳ ಕೋಚ್ ಆಗಿದ್ದಾರೆ. ಆದರೆ, ಅವರು ಕರ್ನಾಟಕ ತಂಡಕ್ಕೆ ತರಬೇತಿ ನೀಡಲು ಬೆಂಗಳೂರು ಅಥವಾ ಬೇರೆ ಜಿಲ್ಲೆಗಳಿಗೆ ಪ್ರಯಾಣ ಬೆಳೆಸಬೇಕಿತ್ತು. ಇದೇ ಮೊದಲ ಬಾರಿಗೆ ರಾಜ್ಯ ತಂಡವೊಂದಕ್ಕೆ ಜಿಲ್ಲೆಯಲ್ಲಿ ತರಬೇತಿ ನೀಡಲಾಗುತ್ತಿರುವುದು ವಿಶೇಷ.
ಜಿಲ್ಲೆಯ ರೋಲರ್ ಸ್ಕೇಟಿಂಗ್ (Skating )ತಂಡಗಳು, ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ಜಿಲ್ಲೆಯ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ಬಂದಿದ್ದಾರೆ. ಆದರೆ, ಇಲ್ಲಿ ಒಂದು ಸುಸಜ್ಜಿತ ಸ್ಕೇಟಿಂಗ್ ರಿಂಕ್(ಪ್ರಾಂಗಣ) ಇರಲಿಲ್ಲ. ಏಳು ವರ್ಷಗಳ ಪ್ರಯತ್ನ ಈಡೇರಿರಲಿಲ್ಲ. ಇದರಿಂದ ಈಗ ಉತ್ತರ ಕನ್ನಡ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಸ್ವತಃ 27 ಲಕ್ಷ ರೂ. ಖರ್ಚು ಮಾಡಿ ಕಾರವಾರದಲ್ಲಿ ಸ್ಕೇಟಿಂಗ್ ರಿಂಕ್ ನಿರ್ಮಿಸಿದೆ. ಮಿತ್ರ ಸಮಾಜ ಸಂಘವು ಅದಕ್ಕೆ ಜಾಗ ಒದಗಿಸಿದೆ. 20 ಮೀಟರ್ ಅಗಲ, 60 ಮೀಟರ್ ಉದ್ದದಲ್ಲಿ ಭಾರತೀಯ ರೋಲರ್ ಸ್ಕೇಟಿಂಗ್ ಒಕ್ಕೂಟ(ಆರ್‌ಎಸ್‌ಎಫ್‌ಐ) ಗುಣಮಟ್ಟದ ರಿಂಕ್ ಸಿದ್ಧ ಮಾಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಳವಡಿಸುವ ಟೈಲ್ಸ್ಗಳನ್ನೇ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಪ್ರತಿಭೆಗಳಿಗೆ ನಿರಂತರ ತರಬೇತಿ ನಡೆಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ರೋಲರ್ ಸ್ಕೇಟಿಂಗ್ ಅಸೋಸಿಯೇಶನ್ ಅಧ್ಯಕ್ಷ ರಾಜನ್ ಬಾನಾವಳಿ ತಿಳಿಸಿದರು.
ಮಿತ್ರ ಸಮಾಜದ ಅಧ್ಯಕ್ಷ ಡಾ.ನಿತಿನ್ ಪಿಕಳೆ ಮಾತನಾಡಿ, ಜಿಲ್ಲೆಯ ರೋಲರ್ ಸ್ಕೇಟಿಂಗ್ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಅದಕ್ಕೆ ಕಾರಣ ದಿಲೀಪ ಹಣಬರ್ ಅವರು. ಉತ್ತಮ ಸೌಲಭ್ಯ ಇಲ್ಲದೆಯೂ ಕ್ರೀಡಾಪಟುಗಳು ಸಾಧನೆ ಮಾಡುತ್ತಿದ್ದಾರೆ ಎಂದರೆ, ಸೌಲಭ್ಯ ಕೊಟ್ಟರೆ ಅವರು ದುಪ್ಪಟ್ಟು ಸಾಧನೆ ಮಾಡಬಹುದು ಎಂದು ನಾನು ಯೋಜಿಸಿದ್ದೆ. ನಗರಸಭೆ ಅಧ್ಯಕ್ಷನಾಗಿರುವಾಗಲೇ ಸ್ಕೇಟಿಂಗ್ ರಿಂಕ್ ನಿರ್ಮಾಣಕ್ಕೆ ಯೋಜಿಸಿದ್ದೆ. ಆದರೆ, ಸಾಧ್ಯವಾಗಿಲ್ಲ. ಈಗ ಅಸೋಸಿಯೇಶನ್‌ನವರು ನಿರ್ಮಾಣ ಮಾಡುತ್ತೇವೆ ಎಂದಾಗ ಸಹಕಾರ ನೀಡಿದ್ದೇನೆ ಎಂದರು. ಅಸೋಸಿಯೇಶನ್ ಗೌರವ ಅಧ್ಯಕ್ಷ ಗಿರೀಶ ರಾವ್, ಸ್ಟಾರ್ ಚಾಯ್ಸ್ ನೃತ್ಯ ಕಲಾ ಕೇಂದ್ರದ ಅಧ್ಯಕ್ಷ ರಾಜನ್ ಬಾನಾವಳಿ, ಮಿತ್ರ ಸಮಾಜ ಉಪಾಧ್ಯಕ್ಷ ನಿತಿನ್ ಪಾವಸ್ಕರ್, ಡಾ.ಹರೀಶ, ಶ್ರೀಪಾದ ನಾಯ್ಕ, ಸಚಿನ್ ದೇಸಾಯಿ, ಮಂಜುನಾಥ ನಾಯ್ಕ, ವಿಜಯಾನಂದ ನಾಯ್ಕ, ಅರುಣ ಬಾಡ್ಕರ್ ಇದ್ದರು.