

ಮಂಡ್ಯ: ಪರಿಶಿಷ್ಟ ಜಾತಿ ಮತ್ತು ಉಪ ಜಾತಿಗಳ ಸಮಗ್ರ ಸಮೀಕ್ಷೆ ಮೇ 5ರಿಂದ ಪ್ರಾರಂಭವಾಗುತ್ತಿದೆ. ಆದ್ದರಿಂದ ಇಲಾಖೆ ಸಿಬ್ಬಂದಿ ಸೇರಿದಂತೆ ಸಂಬಂಧಪಟ್ಟವರು ಸಮರ್ಪಕವಾಗಿ ಕೆಲಸ ನಿರ್ವಹಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಸಿದ್ದಲಿಂಗೇಶ್ ತಿಳಿಸಿದರು.
ನಗರದ ಪಿಇಎಸ್ ಕಾಲೇಜಿನ ಎಂಬಿಎ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಗಣತಿದಾರರು ಮತ್ತು ಮೇಲ್ವಿಚಾರಕರಿಗೆ ಆಯೋಜಿಸಿದ್ದ ತರಬೇತಿ ಕಾರ್ಯಾಗಾರರದಲ್ಲಿ ಮಾತನಾಡಿದ ಅವರು, ಉಪಜಾತಿಗಳ ಸಮಗ್ರ ಮಾಹಿತಿ ಸಂಗ್ರಹಿಸಲಾಗುತ್ತದೆ. ಮೂರು ಹಂತದಲ್ಲಿ ಈ ಸಮೀಕ್ಷೆ ಇರಲಿದೆ. ಮತಗಟ್ಟೆ ಕ್ಷೇತ್ರವಾರು ಒಟ್ಟು 1823ರಲ್ಲಿ ಮತಗಟ್ಟೆ ಕ್ಷೇತ್ರವಾರು ಸಮೀಕ್ಷೆ ನಡೆಯಲಿದೆ. ಮೇ 5 ರಿಂದ 17ರವರೆಗೆ ಮನೆಮನೆ ಸಮೀಕ್ಷೆ ನಡೆಯುತ್ತದೆ ಎಂದರು.
ಶಿಕ್ಷಕರನ್ನು ಗಣತಿದಾರರಾಗಿ ನೇಮಕ ಮಾಡಲಾಗಿದೆ. ಪ್ರತಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದ್ದು, ಅವರು ಮನೆಮನೆಗೆ ತೆರಳಿ ಪ್ರತಿ ವಾರ್ಡ್ ಮತ್ತು ಮತಗಟ್ಟೆಯ ವ್ಯಾಪ್ತಿಯಲ್ಲಿ ಬರುವ ಮನೆಗಳಿಗೆ ಬಂದು ತಮ್ಮ ಮೊಬೈಲ್‌ನಲ್ಲಿ ಸಮೀಕ್ಷೆ ಹಾಗೂ ದಾಖಲಾತಿ ಮಾಡುತ್ತಾರೆ ಎಂದರು.
ಮಂಡ್ಯ ಉಪವಿಭಾಗಾಧಿಕಾರಿ ಎಂ.ಶಿವಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಕಾವ್ಯ, ತರಬೇತುದಾರರಾದ ಸುಬ್ರಹ್ಮಣ್ಯ, ನಟೇಶ್ ಇತರರಿದ್ದರು. ಜಿಲ್ಲೆಯಲ್ಲಿ ಒಟ್ಟು 410 ಗಣತಿದಾರದಾರರನ್ನು ಸಮೀಕ್ಷೆಗಾಗಿ ಆಯ್ಕೆ ಮಾಡಲಾಗಿದೆ.