ಹಣಕಾಸು ವ್ಯವಸ್ಥೆಗೆ ಕೃಷಿ ಅಪಾರ ಕೊಡುಗೆ: ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿಕೆ

Training for Assistant Professors Mandya
Published on

ಮಂಡ್ಯ: ಜಾಗತಿಕ ಹಣಕಾಸು ವ್ಯವಸ್ಥೆಗೆ ಕೃಷಿಯ ಕೊಡುಗೆ ಅಪಾರವಾಗಿದ್ದು, ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಕೃಷಿಯ ಹೊಸ ತಂತ್ರಜ್ಞಾನದ ಬಗ್ಗೆ ತಿಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ತಾಲೂಕಿನ ವಿ.ಸಿ ಫಾರ್ಮ್‌ನಲ್ಲಿ ಆಯೋಜಿಸಿದ್ದ ಸಹಾಯಕ ಪ್ರಾಧ್ಯಾಪಕರಿಗೆ ಎರಡು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೂತನವಾಗಿ ರೂಪುಗೊಂಡಿರುವ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ನೂತನವಾಗಿ ನೇಮಕಗೊಂಡ ಅಧಿಕಾರಿ/ನೌಕರರಿಗೆ ಹಾಗೂ ಇತರರಿಗೆ ಆಯೋಜಿಸಿರುವ ತರಬೇತಿ ಕಾರ್ಯಕ್ರಮ ಜ್ಞಾನದ ಉನ್ನತಿಗೆ ವೇದಿಕೆಯಾಗಲಿ ಎಂದು ಶುಭ ಹಾರೈಸಿದರು.

ಕೃಷಿ ವಿಜ್ಞಾನಿಗಳು ಹೊಸದಾಗಿ ತಂತ್ರಜ್ಞಾನಗಳ ಅಳವಡಿಕೆ ಮತ್ತು ತಂತ್ರಜ್ಞಾನದ ಉಪಯುಕ್ತತೆಯಿಂದ ಕೃಷಿಯ ವ್ಯಾಪ್ತಿ ಜಾಗತಿಕ ಮಟ್ಟಕ್ಕೂ ವಿಸ್ತರಿಸುತ್ತಿದೆ. ತರಬೇತಿ ಕಾರ್ಯಕ್ರಮಗಳು ಜ್ಞಾನದ ಆಗರದ ಜತೆಗೆ ಸ್ಫೂರ್ತಿದಾಯಕವಾಗಿರುತ್ತದೆ. ಇದನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಿ. ನಾವು ಮಾಡುವ ಪ್ರತಿ ಕಾರ್ಯದಲ್ಲೂ ತೋರುವ ಶ್ರದ್ದೆಗೆ ಸೂಕ್ತ ಪ್ರತಿಫಲ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಎಂದಿಗೂ ಪ್ರತಿಫಲ ಅಪೇಕ್ಷಿಸದಂತೆ ನಿರ್ವಹಿಸುವ ಕಾರ್ಯವು ಸಂಸ್ಥೆಯ ಹಾಗೂ ವೈಯಕ್ತಿಕ ಸಾಧನೆಗೆ ಸ್ಪೂರ್ತಿಯಾಗುತ್ತದೆ ಎಂದರು.

ಪ್ರತಿ ವಿಜ್ಞಾನಿಯು ಮಾಡುವ ಸಂಶೋಧನಾ ಫಲಿತಾಂಶಗಳು ಕೇವಲ ಪ್ರಬಂಧಗಳಲ್ಲಿ ಉಳಿಯದೇ ರೈತರ ಜಮೀನಿನಲ್ಲಿ ತಂತ್ರಜ್ಞಾನಗಳ ರೂಪದಲ್ಲಿ ಕೃಷಿ ಸಮಸ್ಯೆಗಳಿಗೆ ಪರಿಹಾರವಾಗಿ ಉಪಯೋಗವಾಗಬೇಕು. ನಮ್ಮ ಕಾರ್ಯಸ್ಥಳದಲ್ಲಿ ಒಗ್ಗೂಡಿಸಿಕೊಳ್ಳುವ ಉತ್ತಮ ಮಟ್ಟದ ವೃತ್ತಿ ನೈತಿಕತೆಯು ನಮ್ಮನ್ನು ಸಾಧನೆಯೆಡೆಗೆ ಕೊಂಡೊಯ್ಯತ್ತದೆ. ಕೃಷಿಯೊಂದಿಗೆ ಪಾರದರ್ಶಕವಾದ ಸೇವಾ ಮನೋಭಾವನೆಯುಳ್ಳ ವೃತ್ತಿ ಜೀವನವನ್ನು ಅಳವಡಿಸಿಕೊಂಡಲ್ಲಿ ವಿಶ್ವದಲ್ಲಿ ಭಾರತವು ಪಾರಂಪರಿಕವಾಗಿ ಕೃಷಿಯಲ್ಲಿ ಅಗ್ರಸ್ಥಾನದಲ್ಲಿರಲು ಕಾರಣಿಭೂತವಾಗಿರುತ್ತದೆ ಎಂದು ಹೇಳಿದರು.

ಮಂಡ್ಯ ಕೃಷಿ ವಿಶ್ವವಿದ್ಯಾನಿಲಯದ ವಿಶೇಷ ಅಧಿಕಾರಿ ಡಾ.ಕೆ.ಎಂ.ಹರಿಣಿಕುಮಾರ್, ಕೃಷಿ ಮಹಾವಿದ್ಯಾಲಯದ ಡೀನ್(ಕೃಷಿ) ಡಾ.ಪಿ.ಎಸ್.ಫಾತಿಮಾ, ಶಿಕ್ಷಣ ನಿರ್ದೇಶಕ ಡಾ.ಎನ್.ಶಿವಕುಮಾರ್, ವಿಸ್ತರಣಾ ನಿರ್ದೇಶಕ ಡಾ.ಸಿ.ರಾಮಚಂದ್ರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net