

ಉಡುಪಿ: ಕಡಲ ತೀರದ ವಲಯಗಳಲ್ಲಿ ಪ್ರವಾಸಿಗರ ಸುರಕ್ಷತೆ ಕಾರ್ಯಕ್ಕೆ ಜೀವರಕ್ಷಕ ತಂಡ ನಿಯೋಜಿಸಲಾಗಿದ್ದು, ಭವಿಷ್ಯದಲ್ಲಾಗುವ ಅಹಿತಕರ ಘಟನೆ ತಡೆಯಲು ಸಾಧ್ಯವಾಗಲಿದೆ ಎಂದು ಶಾಸಕ ಯಶ್ಪಾಲ್ ಸುವರ್ಣ ಹೇಳಿದರು.
ಮಲ್ಪೆಯ ಕಡಲತೀರದಲ್ಲಿ ಜೀವ ರಕ್ಷಕ ಸಿಬ್ಬಂದಿಗೆ ತರಬೇತಿ ಹಾಗೂ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಡಲ ಸೊಬಗನ್ನು ಸವಿಯಲು ಹೊರಗಿನಿಂದ ಬರುವ ಜನರಿಗೆ ಸಮುದ್ರ ಪ್ರದೇಶದ ಆಳ, ಅಲೆಗಳ ಹೊಡೆತಗಳನ್ನು ತಪ್ಪಿಸಿಕೊಳ್ಳುವ ಬಗ್ಗೆ ಅರಿವಿಲ್ಲದೇ ಅನಾಹುತಗಳು ಆಗುವ ಸಾಧ್ಯತೆಗಳಿದ್ದು, ಇವುಗಳನ್ನು ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ನುರಿತ ಹಾಗೂ ಪರಿಣಿತ ಜೀವ ರಕ್ಷಕ ಸಿಬ್ಬಂದಿಗಳನ್ನು ನಿಯೋಜನೆ ಮಾಡಿರುವುದು ಒಂದು ಅಭಿನಂದನೀಯ ಕಾರ್ಯ ಎಂದರು.
ದೇಶದಲ್ಲಿಯೇ ಮಲ್ಪೆ ಬೀಚ್ ಅತ್ಯಾಕರ್ಷಣೀಯವಾಗಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ದಿನೇ ದಿನೇ ಇಲ್ಲಿಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಅಗತ್ಯ ಮೂಲಭೂತ ಸೌಕರ್ಯಗಳನ್ನೊಳಗೊಂಡ ಬೀಚ್ನ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಮಾತನಾಡಿ, ಪ್ರವಾಸಿಗರ ಸುರಕ್ಷತೆಯ ಹಿತದೃಷ್ಟಿಯಿಂದ ಜೀವರಕ್ಷಕರನ್ನು ಮಲ್ಪೆ, ಮರವಂತೆ, ಕಾಪು, ತ್ರಾಸಿ, ಬೀಚ್ಗಳಲ್ಲಿ ನೇಮಿಸಲಾಗುತ್ತಿದೆ . ಮೊದಲ ಹಂತದಲ್ಲಿ 17 ಜನ ಜೀವರಕ್ಷಕರಿಗೆ ತರಬೇತಿಯನ್ನು ನೀಡಲಾಗಿದ್ದು, ತಮ್ಮ ಕಾರ್ಯಕ್ಕೆ ಶೀಘ್ರದಲ್ಲಿಯೇ ನಿಯೋಜನೆಗೊಳ್ಳಲಿದ್ದಾರೆ ಎಂದರು.
ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದಾಗಿದೆ ಎಂದ ಅವರು, ಪ್ರವಾಸಿ ತಾಣಗಳ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ, ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ, ನಗರಸಭೆ ಪೌರಾಯುಕ್ತ ರಾಯಪ್ಪ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ್ ಸಿ.ಯು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ರಾಷ್ಟ್ರೀಯ ಲೈಫ್ ಸೇವಿಂಗ್ಸ್ ಸೊಸೈಟಿಯಿಂದ ಮಾನ್ಯತೆ ಪಡೆದ ಪುತ್ತೂರಿನ ವಾರಾಣಾಸಿ ಡೆವಲಪ್ಮೆಂಟ್ ಅಂಡ್ ರಿಸರ್ಚ್ ಫೌಂಡೇಶನ್ ಸಂಸ್ಥೆಯ ವತಿಯಿಂದ ಜೀವ ರಕ್ಷಕ ತಂಡದವರಿಗೆ ಉತ್ತಮ ಈಜುಗಾರಿಕೆ, ಕೃತಕ ಉಸಿರಾಟ, ಪ್ರಥಮಚಿಕಿತ್ಸೆ, ಪ್ರಜ್ಞಾಹಿನರಿಗೆ ಸಾಗಿಸುವುದು ಸೇರಿದಂತೆ ವಿವಿಧ ತರಬೇತಿ ನೀಡಿ ಪ್ರಮಾಣ ಪತ್ರವನ್ನು ವಿತರಿಸಲಾಯಿತು.