ಹಿರಿಯರು, ಹೆತ್ತವರ ಕಡೆಗಣನೆ ನಾಚಿಕೆಗೇಡು...

Asha Lead
Published on

ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಭಿಪ್ರಾಯ

ಆಶಾ ಕಾರ್ಯಕರ್ತೆಯರಿಗೆ ತರಬೇತಿ ಉದ್ಘಾಟನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಮನೆಯಲ್ಲಿರುವ ಹಿರಿಯ ಜೀವಗಳನ್ನು, ತಂದೆ&ತಾಯಿಯನ್ನು ಕೈಲಾಗದವರೆಂದು, ನಿರುಪಯುಕ್ತರೆಂದು ಪರಿಗಣಿಸುವ ಮನೋಭಾವದಿಂದ ಮಕ್ಕಳು ಹೊರಬರಬೇಕು. ಮನೆಯೊಳಗೆ ಅವರೊಂದಿಗೆ ಅಗೌರವವಾಗಿ ನಡೆದುಕೊಳ್ಳುವುದು, ಹೆತ್ತವರನ್ನು ಮನೆಯಿಂದ ಹೊರಹಾಕುವುದು, ಆಸ್ತಿ ಕಬಳಿಸಲು ಸಂಚು ಮಾಡುವುದು ಅಥವಾ ಅವರಿಗೆ ಅಸಹಾಯಕ ಸ್ಥಿತಿ ಉಂಟುಮಾಡುವುದು ನಾಚಿಕೆಗೇಡಿನ ಸಂಗತಿ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಅಭಿಪ್ರಾಯಪಟ್ಟರು.

Asha -2
ಉಡುಪಿಯ ಪುರಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿ ಉಡುಪಿ ಶಾಖೆಯ ಆಶ್ರಯದಲ್ಲಿ ಹಿರಿಯ ನಾಗರಿಕರ ಸಮಗ್ರ ಆರೈಕೆ (ವಿಶ್ವ ಸಂಸ್ಥೆ ಕಾರ್ಯಕ್ರಮ) ನಿಮಿತ್ತ ಉಡುಪಿ ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ಶುಕ್ರವಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜೀವಿತಾವಧಿ ಹೆಚ್ಚಳ

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು ವಿಭಾಗೀಯ ಉಪ ನಿರ್ದೇಶಕಿ ಡಾ. ಮಲ್ಲಿಕಾ ಮಾತನಾಡಿ, ವೈಜ್ಞಾನಿಕ ತಂತ್ರಜ್ಞಾನದಿಂದ ಜನರ ಜೀವಿತಾವಧಿ ಹೆಚ್ಚಳವಾಗುತ್ತಿದೆ. ಹೀಗಾಗಿ ಹಿರಿಯ ನಾಗರಿಕರ ಸಂಖ್ಯೆಯೂ ಹೆಚ್ಚುತ್ತಲಿದೆ. ಅವರ ಆರೋಗ್ಯ ಕಾಳಜಿ ಅತ್ಯಗತ್ಯವಾಗಿದ್ದು, ಮನೆಗಳಿಗೆ ಸಮೀಕ್ಷೆಗೆಂದು ಹೋಗುವ ಆಶಾ ಕಾರ್ಯಕರ್ತೆಯರು ಅವರ ಆರೋಗ್ಯವನ್ನೂ ವಿಚಾರಿಸಿಬರಬೇಕು. ಸೂಕ್ತ ಚಿಕಿತ್ಸೆಯ ಅಗತ್ಯತೆಯಿದ್ದಲ್ಲಿ ಅವಕಾಶ ಮಾಡಿಕೊಡಬೇಕು ಎಂದರು.

ದೇಶಕ್ಕೆ ಮಹಿಳಾ ಶಕ್ತಿ

LAMP Photo
ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಮಾತನಾಡಿ, ಆರೋಗ್ಯ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆ ಮುಂಚೂಣಿಯಲ್ಲಿದೆ. ಮಹಿಳಾ ಶಕ್ತಿಯಿಂದಲೂ ದೇಶದ ಪ್ರಗತಿ ಸಾಧ್ಯ ಎನ್ನುವುದು ಈಗಾಗಲೇ ಹಲವಾರು ಕ್ಷೇತ್ರಗಳಲ್ಲಿ ಕಂಡುಬಂದಿದೆ. ಇಂದಿನ ಯುವ ಪೀಳಿಗೆ ದಾರಿ ತಪ್ಪುತ್ತಲಿದ್ಭು, ಜ್ಞಾನ ವೃದ್ಧರಾಗಿರುವ, ಮನೆಯಲ್ಲೇ ಇರುವ ಹಿರಿಯರ ಮಾರ್ಗದರ್ಶನ ಪಡೆಯಬೇಕು. ಸನ್ಮಾರ್ಗದಲ್ಲಿ ನಡೆದು ಉತ್ತಮ ಭವಿಷ್ಯ ಕಂಡುಕೊಳ್ಳಬೇಕು ಎಂದರು.

ಜಿಪಂ ಸಿಇಒ ಪ್ರತೀಕ್​ ಬಾಯಲ್​, ಜಿಲ್ಲಾ ಆರ್​ಸಿಎಚ್​ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ., ಜಿಲ್ಲಾ ಹಿರಿಯ ನಾಗರಿಕರ ಉಪಶಮನ ಆರೈಕೆಯ ನೋಡಲ್​ ಅಧಿಕಾರಿ ಡಾ. ನಾಗರತ್ನಾ ಶಾಸ್ತ್ರಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಗಳ ನೋಡಲ್​ ಅಧಿಕಾರಿ ಡಾ. ಲತಾ ನಾಯಕ್​, ರಾಜಸ್ಥಾನ ಮೌಂಟ್​ ಅಬು ಗ್ಲೋಬಲ್​ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಮಹೇಶ್​ ಹೇಮಾದ್ರಿ, ಡಾ. ರೀಟಾ, ಬ್ರಹ್ಮಕುಮಾರಿ ಈಶ್ವರೀಯ ವಿವಿ ಉಡುಪಿ ಶಾಖೆಯ ಸಂಚಾಲಕಿ ರಾಜಯೋಗಿನಿ ಬಿ.ಕೆ. ಸುಮಾ ಉಪಸ್ಥಿತರಿದ್ದರು.

ಆಶಾ ಕಾರ್ಯಕರ್ತೆಯರಿಗೆ ಬೆಂಗಳೂರಿನ ಇ-ಹೆಲ್ತ್​ನ ಉಪನಿರ್ದೇಶಕ ಡಾ. ವಸಂತಕುಮಾರ್​ ತರಬೇತಿ ನೀಡಿದರು. ಬಿ.ಕೆ. ರಘುರಾಮ್​ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಿಲ್ಲಾ ಆರೋಗ್ಯಾಧಿಕಾರಿಗೆ ಗೌರವ

ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ ಅವರು ಮುಂದಿನ 3 ತಿಂಗಳ ಬಳಿಕ ನಿವೃತ್ತರಾಗುತ್ತಿರುವ ಹಿನ್ನೆಲೆಯಲ್ಲಿ ತರಬೇತಿ ಕಾರ್ಯಕ್ರಮದಲ್ಲಿಯೇ ಆಶಾ ಕಾರ್ಯಕರ್ತೆಯರು ತಮ್ಮ ಮೊಬೈಲ್​ನ ಟಾರ್ಚ್​ಗಳನ್ನು ಏಕಕಾಲದಲ್ಲಿ ಪ್ರಜ್ವಲಿಸುವ ಮೂಲಕ ಗೌರವ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net