

ಮಡಿಕೇರಿ:
ಗ್ರಾಮೀಣ ಬಡ ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಜತೆಗೆ ಅವರ ಬದುಕಿಗೆ ದಾರಿ ತೋರಿಸುವ ನಿಟ್ಟಿನಲ್ಲಿ ಯೂನಿಯನ್ ಬ್ಯಾಂಕ್‌ನ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಗಳು ಸಾಕಷ್ಟು ಕೊಡುಗೆ ನೀಡುತ್ತಿವೆ. ಕೊಡಗಿನಲ್ಲಿ ಕುಶಾಲನಗರ ತಾಲೂಕು ಕೂಡಿಗೆಯಲ್ಲಿರುವ ಆರ್‌ಎಸ್‌ಇಟಿಐ ಕೂಡ ಜಿಲ್ಲೆಯ ಪಾಲಿಗೆ ಆಶಾಕಿರಣವಾಗಿದ್ದು, ಸಾವಿರಾರು ಯುವಕರು ಈ ಕೇಂದ್ರದ ಪ್ರಯೋಜನ ಪಡೆದುಕೊಂಡಿದ್ದಾರೆ. ಈ ಮೂಲಕ ಸ್ಥಳೀಯವಾಗಿ ಉದ್ಯೋಗವಕಾಶದ ಮಾರ್ಗವನ್ನೂ ತೋರಿಸಿದಂತಾಗಿದೆ.
ಶಿಕ್ಷಣ ವ್ಯವಸ್ಥೆ ಸುಧಾರಿಸಿದಂತೆ ಪದವೀಧರರು ಸೇರಿ ವಿವಿಧ ರೀತಿಯ ಶೈಕ್ಷಣಿಕ ಅರ್ಹತೆ ಪಡೆದುಕೊಂಡಿರುವ ವಿದ್ಯಾವಂತ ನಿರುದ್ಯೋಗಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಎಲ್ಲರಿಗೂ ಸರ್ಕಾರಿ ಉದ್ಯೋಗ ಇಂದಿನ ದಿನಗಳಲ್ಲಿ ಕನಸಿನ ಮಾತು. ಖಾಸಗಿ ವಲಯದಲ್ಲಿ ಉದ್ಯೋಗ ಸಿಗಬೇಕೆಂದರೆ ವಿದ್ಯೆ, ಪದವಿ ಜತೆಗೆ ಕೌಶಲ್ಯದ ಅಗತ್ಯವೂ ಇರುತ್ತದೆ. ಅಂಕ ಗಳಿಸುವುದಕ್ಕಷ್ಟೇ ಆದ್ಯತೆ ಕೊಡುವ ಇಂದಿನ ಶಿಕ್ಷಣ ಪದ್ಧತಿ ವರ್ತಮಾನದ ಉದ್ಯೋಗದಾತರ ಅಗತ್ಯತೆಗಳನ್ನು ಪೂರೈಸುತ್ತಿಲ್ಲ ಎನ್ನುವ ಮಾತುಗಳೂ ಇದೆ. ಹಾಗಾಗಿ ಸರ್ಕಾರ ಕೌಶಲ್ಯಾಧಾರಿತ ತರಬೇತಿಗಳಿಗೆ ಆದ್ಯತೆ ಕೊಡುತ್ತಿದೆ.
ಕೇಂದ್ರ ಪುರಸ್ಕೃತ ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಮತ್ತು ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರಗಳು ರಾಜ್ಯದಲ್ಲಿ ಅನುಷ್ಠಾನದಲ್ಲಿದ್ದು, ನಿರುದ್ಯೋಗ ಸಮಸ್ಯೆ ಬಗೆ ಹರಿಸುವಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಿವೆ. ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆಯನ್ನು 20 ಯೋಜನಾ ಅನುಷ್ಠಾನ ಸಂಸ್ಥೆಗಳ ಮೂಲಕ 24 ತರಬೇತಿ ಕೇಂದ್ರಗಳನ್ನು 14 ಜಿಲ್ಲೆಗಳಲ್ಲಿ ತೆರೆಯಲಾಗಿದೆ. ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರಗಳು ರಾಜ್ಯದಲ್ಲಿ ಆಯಾಯ ಜಿಲ್ಲೆಗಳ ಲೀಡ್ ಬ್ಯಾಂಕ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ. ವಿಜಯನಗರ ಜಿಲ್ಲೆ ಹೊರತುಪಡಿಸಿ 30 ಜಿಲ್ಲೆಗಳಲ್ಲಿ ಈ ತರಬೇತಿ ಕೇಂದ್ರಗಳು ಕಾರ್ಯಾಚರಿಸುತ್ತಿವೆ.
ಕೊಡಗಿನಲ್ಲಿ ಕುಶಾಲನಗರ ತಾಲೂಕು ಕೂಡಿಗೆಯಲ್ಲಿ ಕಾರ್ಪೊರೇಷನ್ ಬ್ಯಾಂಕ್ ಮೂಲಕ ಆರಂಭವಾದ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರ ಪ್ರಸ್ತುತ ಯೂನಿಯನ್ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರವಾಗಿ ಕಾರ್ಯ ನಿರ್ವಹಿಸುತ್ತಿದೆ. ಯೂನಿಯನ್ ಬ್ಯಾಂಕ್‌ನ ರಾಜ್ಯದಲ್ಲಿ ಇರುವ ಇಂಥ 2 ಕೇಂದ್ರಗಳ ಪೈಕಿ ಕೂಡಿಗೆ ಕೇಂದ್ರವೂ ಒಂದಾಗಿದ್ದು, 2015ರಿಂದ ಇಲ್ಲಿ ಕಾರ್ಯಾಚರಿಸುತ್ತಿದೆ. ಕಳೆದ 8 ವರ್ಷಗಳಿಂದ ಇಲ್ಲಿ ಸಾವಿರಾರು ನಿರುದ್ಯೋಗಿ ಯುವಕ-ಯುವತಿಯರು ಬೇರೆ ಬೇರೆ ರೀತಿಯ ತರಬೇತಿ ಪಡೆದುಕೊಂಡಿದ್ದು ಯುವ ಸಬಲೀಕರಣದಲ್ಲಿ ಈ ಕೇಂದ್ರ ಮಹತ್ವದ ಪಾತ್ರ ವಹಿಸುತ್ತಿದೆ.
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಪ್ರಾಯೋಜಿಸಿರುವ ಯೂನಿಯನ್ ಆರ್‌ಎಸ್‌ಇಟಿಐಗಳು ಗ್ರಾಮೀಣ ನಿರುದ್ಯೋಗಿ ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೀಡುತ್ತಿದೆ. ಅವರಿಗೆ ಸೂಕ್ತವಾದ ಮತ್ತು ಸ್ಥಳೀಯ ಅಗತ್ಯತೆಗಳನ್ನು ಪೂರೈಸುವ, ಕಡಿಮೆ ಇನ್‌ಪುಟ್ ವೆಚ್ಚ ಮತ್ತು ಹೆಚ್ಚಿನ ಆದಾಯವನ್ನು ಹೊಂದಿರುವ ಸ್ವಯಂ-ಉದ್ಯೋಗ, ವ್ಯವಹಾರ ಅಥವಾ ಉದ್ಯಮಗಳನ್ನು ಕೈಗೊಳ್ಳಲು ಅನುವು ಮಾಡಿಕೊಡುವ ರೀತಿಯಲ್ಲಿ ತರಬೇತುಗೊಳಿಸುತ್ತಿದೆ.
ಯೂನಿಯನ್ ಆರ್‌ಎಸ್‌ಇಟಿಐಗಳು ಗ್ರಾಮೀಣ ನಿರುದ್ಯೋಗಿ ಯುವಜನತೆಗೆ ಬ್ಯೂಟಿಷಿಯನ್ ತರಬೇತಿ, ಮೊಬೈಲ್ ಫೋನ್ ರಿಪೇರಿ, ಟೈಲರಿಂಗ್, ವಿದ್ಯುತ್ ಉಪಕರಣಗಳ ದುರಸ್ತಿ, ಪಶುಸಂಗೋಪನೆ, ಕಂಪ್ಯೂಟರ್ ತರಬೇತಿ, ವಿವಿಧ ಕೃಷಿ ಸಂಬAಧಿತ ಕಾರ್ಯಕ್ರಮಗಳು, ಪಿಎಂಇಜಿಪಿ ಮುಂತಾದ ವಿವಿಧ ಕೋರ್ಸ್ಗಳ ಅಡಿಯಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಕೊಡಲಾಗುತ್ತಿದೆ.
ಯೂನಿಯನ್ ಆರ್‌ಎಸ್‌ಇಟಿಐಗಳು ತರಬೇತಿ ಪಡೆದ ಅಭ್ಯರ್ಥಿಗಳಿಗೆ ತಮ್ಮದೇ ಆದ ಉದ್ಯಮಗಳನ್ನು ಪ್ರಾರಂಭಿಸಲು ಬೆಂಬಲ ನೀಡುತ್ತದೆ. ಯಶಸ್ವಿಯಾಗಿ ತರಬೇತಿ ಪಡೆದ ಅಭ್ಯರ್ಥಿಗಳು ಸ್ವಯಂ ಉದ್ಯೋಗದಲ್ಲಿ ತಮ್ಮ ದಾರಿ ಕಂಡು ಕೊಳ್ಳುವ ತನಕವೂ ಬೆಂಬಲವಾಗಿ ನಿಲ್ಲುತ್ತವೆ. ಸ್ವಯಂ-ಉದ್ಯೋಗ, ಉದ್ಯಮಗಳು ಅಥವಾ ವ್ಯವಹಾರಗಳನ್ನು ಸ್ಥಾಪಿಸಲು ಯಶಸ್ವಿಯಾಗಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಯೂನಿಯನ್ ಬ್ಯಾಂಕ್ ವತಿಯಿಂದ ಅಗತ್ಯ ಸಾಲ ಸೌಲಭ್ಯದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ.
ದೀನ್ ದಯಾಳ್ ಉಪಾದ್ಯಾಯ ಗ್ರಾಮೀಣ ಕೌಶಲ್ಯ ಯೋಜನೆ ಅಡಿಯಲ್ಲಿ ಕೊಡಗಿನಲ್ಲಿ ಇಲ್ಲಿಯ ತನಕ 360 ಮಂದಿ ತರಬೇತಿ ಪಡೆದುಕೊಂಡಿದ್ದು, 199 ಮಂದಿ ವೇತನ ಆಧಾರಿತ ಉದ್ಯೋಗ ಹೊಂದಿಕೊAಡಿದ್ದಾರೆ. ಯೂನಿಯನ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಕೇಂದ್ರದ ಮೂಲಕ ಈ ತನಕ 244 ಬ್ಯಾಚ್‌ಗಳಲ್ಲಿ ವಿವಿಧ ತರಬೇತಿ ಕೊಡಲಾಗಿದೆ. 6691 ಅಭ್ಯರ್ಥಿಗಳು ತರಬೇತಿ ಪಡೆದುಕೊಂಡಿದ್ದಾರೆ. ಇದರಲ್ಲಿ 4851 ಮಂದಿ ಸ್ವ-ಉದ್ಯೋಗದ ಮೂಲಕ ಜೀವನ ಕಂಡುಕೊAಡಿದ್ದಾರೆ. ಈ ಪೈಕಿ 2098 ಮಂದಿ ಬ್ಯಾಂಕ್ ಸಾಲ ಪಡೆಯದೇ ಉದ್ಯೋಗ ಆರಂಭಿಸಿದ್ದಾರೆ.
ಸೂಕ್ತವಾಗಿ ತರಬೇತಿ ಪಡೆದ ನಂತರ ಯುವಕರು ಲಾಭದಾಯಕ ಸೂಕ್ಷ್ಮ ಉದ್ಯಮಗಳನ್ನು ಪ್ರಾರಂಭಿಸುತ್ತಾರೆ. ತಮ್ಮದೇ ಆದ ಜೀವನ ಮಟ್ಟ ಹೆಚ್ಚಿಸುತ್ತಾರೆ. ಈ ಮೂಲಕ ಒಟ್ಟಾರೆ ರಾಷ್ಟ್ರೀಯ ಆರ್ಥಿಕತೆಗೆ ಕೊಡುಗೆ ನೀಡುತ್ತಾರೆ. ಪ್ರಸ್ತುತ ನಮ್ಮಲ್ಲಿ ಟೈಲರಿಂಗ್ ತರಬೇತಿ ನಡೆಯುತ್ತಿದೆ. ಮುಂದೆ ಡಿ. 5ರಿಂದ ಟ್ಯಾಲಿ ತರಬೇತಿಗೆ ಸಿದ್ಧತೆ ನಡೆದಿದೆ. ಡಿ. 11ರಿಂದ ಮೇಣದ ಬತ್ತಿ ತಯಾರಿಕೆಗೂ ತರಬೇತಿ ಕೊಡಲಾಗುತ್ತದೆ. 18-45 ವಯೋಮಾನದವರು ಈ ತರಬೇತಿಯನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಮುಂದಿನ ತಿಂಗಳಿನಿAದ ಬ್ಯೂಟಿಷಿಯನ್ ತರಬೇತಿಯೂ ಶುರುವಾಗಲಿದೆ.