ಅಕ್ಷರ ದಾಸೋಹ ಸಿಬ್ಬಂದಿಗೆ ಕಾರ್ಯಾಗಾರ

13blrp1
Published on

ಬೇಲೂರು: ಮಕ್ಕಳಿಗೆ ಶುಚಿ, ರುಚಿ ಹಾಗೂ ಗುಣಮಟ್ಟದ ಆಹಾರ ನೀಡುವ ಮೂಲಕ ಮಕ್ಕಳನ್ನು ಭವಿಷ್ಯದಲ್ಲಿ ದೇಶದ ಉತ್ತಮ ಪ್ರಜೆಗಳನ್ನಾಗಿಸಿ ಸದೃಢ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕುವ ಅಕ್ಷರ ದಾಸೋಹದ ಅಡುಗೆ ಸಿಬ್ಬಂದಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ಪಟ್ಟಣದ ಮೌಂಟ್ ಕಾರ್ಮೆಲ್ ಶಾಲೆಯಲ್ಲಿ ಅಕ್ಷರ ದಾಸೋಹದ ಅಡುಗೆ ಸಿಬ್ಬಂದಿಗೆ ಶನಿವಾರ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಹಾಗೂ ಅಡುಗೆ ಸಿದ್ಧಪಡಿಸುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು. ಶಾಲಾ ಮಕ್ಕಳಿಗೆ ಪೌಷ್ಟಿಕ ಆಹಾರ ತಯಾರು ಮಾಡಿ ಬಡಿಸುವ ಮೂಲಕ ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಅಡುಗೆಯವರ ಪಾತ್ರ ಮಹತ್ತರದ್ದಾಗಿದೆ. ಅಡುಗೆಯವರಿಗೆ ಸರ್ಕಾರ 3,500 ರೂ. ಗೌರವ ಧನ ನೀಡುತ್ತಿರುವುದು ಬೇಸರದ ಸಂಗತಿಯಾಗಿದ್ದು, ಮುಂದಿನ ಅಧಿವೇಶನದಲ್ಲಿ ಚರ್ಚಿಸಿ ಕನಿಷ್ಠ 10 ಸಾವಿರ ರೂ. ನೀಡುವಂತೆ ಸರ್ಕಾರದ ಗಮನ ಸೆಳೆಯುತ್ತೇನೆ ಎಂದು ಭರವಸೆ ನೀಡಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸಿಬ್ಬಂದಿ ತಯಾರಿಸಿದ ರಾಗಿ ಕೀಲ್ಸಾ, ಜೋಳದ ರೊಟ್ಟಿ, ಖಾರ ಚಟ್ನಿ, ರಾಗಿ ರೊಟ್ಟಿ, ಉಚ್ಚೆಳ್ಳು ಚಟ್ನಿ, ಮಲೆನಾಡಿನ ವೈವಿಧ್ಯಮಯ ಖಾದ್ಯಗಳು ಆಕರ್ಷಣಿಯವಾಗಿದ್ದವು. ನಂತರ ಅಡುಗೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಡಾ.ಜಗದೀಶ ನಾಯ್ಕ, ಬಿಆರ್‌ಪಿ ಮೋಹನರಾಜ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಬಿ.ಪಾಲಾಕ್ಷ, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಿವಪ್ಪ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net