ಶಿಕ್ಷಣದ ಪಾವಿತ್ರ್ಯ ಕಾಪಾಡುವ ಶಿಕ್ಷಕರು

2BLK1
???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ಭಾಲ್ಕಿ: ಶಿಕ್ಷಣ ಅತ್ಯಂತ ಪವಿತ್ರ ಕ್ಷೇತ್ರ. ಅದರ ಪಾವಿತ್ರ್ಯತೆ ಕಾಪಾಡುವ, ಸಮಾಜವನ್ನು ರಕ್ಷಿಸುವ ಬಹುದೊಡ್ಡ ಜವಾಬ್ದಾರಿ ಶಿಕ್ಷಕರ ಮೇಲೆ ಇದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಕಲವಾಡಿ ಗ್ರಾಮದ ಮಹಾತ್ಮ ಗಾಂಧಿ ಪ್ರೌಢ ಶಾಲೆಯಲ್ಲಿ ಅಲ್ಲಮಪ್ರಭು ಶಿಕ್ಷಣ ಮಹಾವಿದ್ಯಾಲಯದಿಂದ ಶನಿವಾರ ಆಯೋಜಿಸಿದ್ದ ೨೦೨೨-೨೩ನೇ ಸಾಲಿನ ಪ್ರಶಿಕ್ಷಣಾರ್ಥಿಗಳ ಪ್ರಾಯೋಗಿಕ ಪಾಠಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿ, ಮಾನವ ಸಂಪನ್ಮೂಲ ತಯಾರಿಸುವ ಕ್ಷೇತ್ರ ಶಿಕ್ಷಣ. ಇಂಥ ಕ್ಷೇತ್ರದಲ್ಲಿ ಕೆಲಸ ಮಾಡುವ ಶಿಕ್ಷಕರು ಇಷ್ಟಪಟ್ಟು ಕಾರ್ಯನಿರ್ವಹಿಸಬೇಕು. ಎಲ್ಲ ಕ್ಷೇತ್ರಕ್ಕಿಂತಲೂ ಹೆಚ್ಚಿನ ಗೌರವ ಸಿಗುವ ಕ್ಷೇತ್ರ ಶಿಕ್ಷಣ ಎಂದರು.
ಶಿಕ್ಷಕರಾಗಲು ಬಯಸುವವರು ಚಾರಿತ್ರ್ಯ, ವ್ಯಕ್ತಿತ್ವದ ಮೇಲೆ ವಿಜಯ ಸಾಧಿಸಬೇಕು. ಬಸವಣ್ಣನವರು ಹೇಳಿದ ಹಾಗೆ ಆಚಾರವೇ ಸ್ವರ್ಗ ಎನ್ನುವ ಮಾರ್ಗದಲ್ಲಿ ಸಾಗಬೇಕು. ನಮ್ಮ ಆಚಾರ, ವಿಚಾರ ಶುದ್ಧವಾಗಿರಬೇಕು. ಆಗ ಮಾತ್ರ ಮಕ್ಕಳು ನಮ್ಮನ್ನು ಅನುಕರಣೆ ಮಾಡುತ್ತಾರೆ. ಭಾವಿ ಶಿಕ್ಷಕರು ಪರಿಪೂರ್ಣ ವ್ಯಕ್ತಿತ್ವ ಬೆಳೆಸಿಕೊಂಡು ವೃತ್ತಿ ಜೀವನದಲ್ಲಿ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಯರಾಜ ದಾಬಶೆಟ್ಟಿ ಮಾತನಾಡಿ, ಶಿಕ್ಷಕರಾಗುವವರು ಉತ್ತಮ ನಡುವಳಿಕೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಧಿಕಾರಕ್ಕಿಂತಲೂ ವ್ಯಕ್ತಿತ್ವ ಮುಖ್ಯ. ಜಗತ್ತನ್ನು ಗೆದ್ದ ಸಾಮ್ರಾಟರೂ ತಮ್ಮ ಶಿಕ್ಷಕರ ಮುಂದೆ ತಲೆಬಾಗುತ್ತಾರೆ ಎಂದು ಹೇಳಿದರು.
ಮುಖ್ಯಗುರು ಕಿರಣಕುಮಾರ ಭಾಟಸಿಂಗೆ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ರಾಜೇಂದ್ರ ವರವಟ್ಟೆ ಪ್ರಾಸ್ತಾವಿಕ ಮಾತನಾಡಿದರು. ಗುರುಕುಲದ ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರದ ಮುಖ್ಯಸ್ಥ ಮಹಾದೇವ ಪಟ್ನೆ ಅವರನ್ನು ಸನ್ಮಾನಿಸಲಾಯಿತು.
ಪ್ರಾಂಶುಪಾಲೆ ಡಾ.ಆಶಾ ಮುದಾಳೆ, ಪ್ರೀತಿ ಪಾಟೀಲ್, ಸುಭಾಷ ದರ್ಗಾ, ಇಂದಿರಾ ನೀಲಾ, ಗಣೇಶ ಗರೂಡ, ಮಹೇಶ ಜಾಧವ್, ಶಿವಕುಮಾರ ವಾಡಿಕರ್, ಆನಂದ ಖಂಡಗೊಂಡ, ವಿಜಯಕುಮಾರ ಗುತ್ತೇದಾರ್, ಶಿವಶರಣಪ್ಪ ಸೋನಾಳೆ ಇತರರಿದ್ದರು. ಪ್ರಶಿಕ್ಷಣಾರ್ಥಿ ಸೋನಮ್ಮ ಸ್ವಾಗತಿಸಿದರು. ಪಲ್ಲವಿ ನಿರೂಪಣೆ ಮಾಡಿದರು. ಜಯಶ್ರೀ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net