

ಮಡಿಕೇರಿ: ಕೊಡಗು ಜಿಲ್ಲಾ ಮಡಿಕೇರಿ ನಗರ ವ್ಯಾಪ್ತಿಯ ಎಲ್ಲಾ ಎಲ್ಲಾ ರೀತಿಯ ಆಹಾರ ಪದಾರ್ಥ ವಹಿವಾಟುದಾರರಿಗೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ತರಬೇತಿ ಕಾರ್ಯಗಾರ ನಗರದ ಗಾಂಧಿ ಭವನದಲ್ಲಿ ಶನಿವಾರ ನಡೆಯಿತು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅಂಕಿತಾಧಿಕಾರಿ ಡಾ.ಅನಿಲ್ ಧಾವನ್ ಮಾತನಾಡಿ, ಆಹಾರ ತಯಾರು ಮಾಡುವವರು ದೈಹಿಕ ಶುಚಿತ್ವ ಹೊಂದಿರಬೇಕು. ಆರೋಗ್ಯದ ಕಡೆ ವಿಶೇಷ ಕಾಳಜಿ ಹೊಂದಿರಬೇಕು. ಅಡುಗೆ ತಯಾರು ಮಾಡುವ ಸ್ಥಳ ಪರಿಸರ ನೈರ್ಮಲ್ಯವಾಗಿರಬೇಕು. ಆಹಾರದ ಕಚ್ಚಾ ವಸ್ತುಗಳನ್ನು ಸೂಕ್ತವಾಗಿ ಸಂಗ್ರಹಿಸಿ ಶುದ್ದೀಕರಿಸಿ ಉಪಯೋಗಿಸಬೇಕು. ಆಹಾರ ತಯಾರಿಕೆಗೆ ಶುದ್ದವಾದ ನೀರು ಬಳಸಬೇಕು. ತಯಾರಿಸಿದ ಆಹಾರ ಕಲುಷಿತವಾಗದಂತೆ ಎಚ್ಚರವಹಿಸಬೇಕು. ಕ್ರಿಮಿಕೀಟಗಳು ಆಹಾರಕ್ಕೆ ಬೀಳದಂತೆ ಜಾಗೃತಿ ವಹಿಸಬೇಕು ಎಂದರು.
ಪೋಷಕಾಂಶ ನಾಶವಾಗದ ರೀತಿಯಲ್ಲಿ ಆಹಾರವನ್ನು ತಯಾರಿಸಬೇಕು. ತಯಾರಿಸಿದ ಆಹಾರವನ್ನು ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಉಪಯೋಗಿಸಬೇಕು. ಪ್ಯಾಕ್ ಮಾಡಿದ ಆಹಾರ ವಸ್ತುಗಳ ಲೇಬಲ್‌ಗಳಲ್ಲಿ ಗ್ರಾಹಕರಿಗೆ ಅಗತ್ಯವಾಗಿ ನೀಡಲೇಬೇಕಾದ ಮಾಹಿತಿ ಇರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದರು.
ತರಬೇತಿಯಲ್ಲಿ ೫೨ ಆಹಾರ ಉದ್ದಿಮೆದಾರರು ಭಾಗವಹಿಸಿದ್ದರು. ಮಡಿಕೇರಿ ಅಧ್ಯಕ್ಷ ಧನಂಜಯ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ವಿಭಾಗದ ಯಶ್ವಂತ, ಹಿರಿಯ ಆಹಾರ ಸುರಕ್ಷತಾಧಿಕಾರಿ ಮಂಜುನಾಥ್‌ರವರು ಇದ್ದರು.