

ವಿ.ಶಿವಾರೆಡ್ಡಿ ಬಂಗಾರಪೇಟೆ: ರಾಜ್ಯದಲ್ಲೇ ಮೊದಲ ಬಾರಿಗೆ ರೈಲು ಸಂಪರ್ಕ ಪಡೆದ ಖ್ಯಾತಿ ಹೊಂದಿರುವ ಬಂಗಾರಪೇಟೆ ಜಂಕ್ಷನ್ನಿಂದ ಪ್ರಸ್ತುತ ದೇಶದ ವಿವಿಧ ಭಾಗಗಳಿಗೆ ಸಂಪರ್ಕ ವ್ಯವಸ್ಥೆ ಇದ್ದರೂ, 60 ಕಿ.ಮೀ. ದೂರದ ಬೆಂಗಳೂರಿಗೆ ನಿತ್ಯ ಕೆಲಸ ಕಾರ್ಯಗಳಿಗೆ ಓಡಾಡುವವರಿಗೆ ಸೂಕ್ತ ರೈಲಿನ ವ್ಯವಸ್ಥೆ ಇಲ್ಲವಾಗಿದೆ.
ಈ ಹಿಂದೆ ಬ್ರಿಟಿಷರು ವ್ಯಾಪಾರಕ್ಕಾಗಿ ಆರಂಭಿಸಿದ ರೈಲು ಸಂಪರ್ಕ ಒಂದು ಪ್ರಮುಖ ಭಾಗವಾಗಿತ್ತು. ಇದರ ಮೂಲಕವೇ ಬಿಜಿಎಂಎಲ್ನಲ್ಲಿನ ಚಿನ್ನದ ನಿಕ್ಷೇಪ ಕೊಂಡೊಯ್ಯಲು ನಿಮಾರ್ಣವಾದ ರೈಲು ಮಾರ್ಗವನ್ನು ಇಂದು ಈ ಭಾಗದ ಸುಮಾರು 20ರಿಂದ 30 ಸಾವಿರ ಜನ ಶಿಕ್ಷಣ, ಉದ್ಯೋಗ ಮತ್ತು ಜೀವನಾಧಾರಕ್ಕೆ ಅವಲಂಬಿಸಿದ್ದಾರೆ.
ಆದರೆ, ಬಂಗಾರಪೇಟೆ ಜಂಕ್ಷನ್ನಿಂದ ಯಾವೊಂದು ರೈಲು ಬೆಂಗಳೂರಿಗೆ ಸಂಚರಿಸದ ಕಾರಣ ನಿತ್ಯವೂ ಪ್ರಯಾಣಿಕರು ಪಡಿಪಾಟಲು ಪಡುವಂತಾಗಿದೆ. ಬೇರೆ ಕಡೆಗಳಿಂದ ಬರುವ, ಮೊದಲೇ ತುಂಬಿರುವ ರೈಲಿನಲ್ಲಿ ನಿಂತುಕೊಂಡೋ, ಇಲ್ಲವೇ ಬಾಗಿಲಿಗೆ ಜೋತುಬಿದ್ದೋ ಪ್ರಯಾಣಿಸುವ ಪರಿಸ್ಥಿತಿ ಇದೆ.
ನಿಲುಗಡೆ ಇಲ್ಲ
ದೆಹಲಿ, ಕೋಲ್ಕತ್ತಾ, ಹವಾರ, ಕೂಚುವೆಲಿ, ಚೆನ್ನೆ$, ಹೈದರಾಬಾದ್ ಸೇರಿ ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಸೇತುವೆಯಂತೆ ಈ ಜಂಕ್ಷನ್ ಕಾರ್ಯನಿರ್ವಹಿಸುತ್ತಿದೆ. ಆದರೆ ಅತಿವೇಗದ (ಎಕ್ಸ್ಪ್ರೆಸ್) ರೈಲುಗಳಿಗೆ ಬಂಗಾರಪೇಟೆ ನಿಲ್ದಾಣದಲ್ಲಿ ನಿಲುಗಡೆ ಇಲ್ಲದಿರುವುದು ಜನರಿಗೆ ತೊಂದರೆಯಾಗಿದೆ.
ಕಾಲಿಡಲೂ ಜಾಗವಿಲ್ಲದ ಸ್ಥಿತಿ
ನಿತ್ಯ ಬೆಳಗ್ಗೆ ಕೆಜಿಎಫ್ ಮತ್ತು ಕುಪ್ಪಂ ರೈಲು ನಿಲ್ದಾಣಗಳಿಂದ ಪ್ರಾರಂಭವಾಗಿ ಬೆಂಗಳೂರು ಕಡೆಗೆ ಚಲಿಸುವ ರೈಲುಗಳು ಬಂಗಾರಪೇಟೆ ನಿಲ್ದಾಣಕ್ಕೆ ಬರುವ ಮುಂಚೆಯೇ ಪ್ರಯಾಣಿಕರಿಂದ ತುಂಬಿರುತ್ತವೆ. ಬಂಗಾರಪೇಟೆಯಿಂದ ತೆರಳುವ ಪ್ರಯಾಣಿಕರು ಬೋಗಿಯಲ್ಲಿ ಕಾಲಿಡಲೂ ಜಾಗವಿಲ್ಲದಂತಾಗಿ ಎಷ್ಟೋ ಜನ ಬಾಗಿಲಲ್ಲೇ ನಿಂತು ಪ್ರಯಾಣಿಸುತ್ತಾರೆ. ಬಂಗಾರಪೇಟೆ ನಂತರದ ಟೇಕಲ್ ಮತ್ತು ಮಾಲೂರು ನಿಲ್ದಾಣಗಳಿಂದ ಹೋಗುವ ಪ್ರಯಾಣಿಕರ ಸ್ಥಿತಿಯಂತೂ ಹೇಳತೀರದಾಗಿರುತ್ತದೆ. ವೃದ್ಧರು, ಮಕ್ಕಳು, ಮಹಿಳೆಯರು ರೈಲು ಹತ್ತಲು ಹರಸಾಹಸ ಪಡಬೇಕಾಗಿದೆ.
ಮನವಿಗಿಲ್ಲ ಸ್ಪಂದನೆ
ಬೆಂಗಳೂರು ಸೆಂಟ್ರಲ್ನಿಂದ ಸಂಜೆ 5 ಗಂಟೆಗೆ ಹೊರಡುವ ಕೂಚುವೇಲಿ ಎಕ್ಸ್ಪ್ರೆಸ್, ಜೋಲಾರ್ಪೇಟ್, ಸ್ವರ್ಣ, ಕುಪ್ಪಂ, ಕೋಲಾರ ಪ್ಯಾಸೆಂಜರ್ ರೈಲುಗಳು ಹೌಸ್ಫುಲ್ ಆದರೂ ಒಬ್ಬರನ್ನೊಬ್ಬರು ತಳ್ಳಿಕೊಂಡು ಕಷ್ಟ್ಟವಾದರೂ ಪ್ರಯಾಣ ಬೆಳೆಸಿ ಮನೆ ಸೇರಿಕೊಳ್ಳಬೇಕು. ಬೆಂಗಳೂರಿಗೆ ಕೆಲಸಕ್ಕೆ ಹೋಗಿ ಬರುವ ಪ್ರಯಾಣಿಕರ ಕಷ್ಟ ಒಂದು ದಿನಕ್ಕೆ ಸೀಮಿತವಲ್ಲ. ಪ್ರತಿನಿತ್ಯ ಇದೇ ಸಮಸ್ಯೆ. ರೈಲುಗಳ ಸಂಖ್ಯೆ ಹೆಚ್ಚು ಮಾಡಲು ಹಾಗೂ ಹಾಲಿ ಇರುವ ರೈಲುಗಳಿಗೆ ಹೆಚ್ಚಿನ ಬೋಗಿಗಳನ್ನು ಅಳವಡಿಸಲು ಪ್ರಯಾಣಿಕರು ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಹಾಗಾಗಿ ಪ್ರಯಾಣಿಕರು ರೈಲ್ವೆ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿರುವ ನಿದರ್ಶನಗಳೂ ಇವೆ. ಸಂಸದ ಮಲ್ಲೇಶ್ಬಾಬು ರೈಲ್ವೆ ಇಲಾಖೆ ಗಮನ ಸೆಳೆದು ಪ್ರಯಾಣಿಕರ ಹಿತದೃಷ್ಟಿಯಿಂದ ಬೆಳಗ್ಗೆ ಬೆಂಗಳೂರು ಕಡೆಗೆ ಬಂಗಾರಪೇಟೆ ನಿಲ್ದಾಣದಿಂದಲ್ಲೇ ರೈಲಿನ ವ್ಯವಸ್ಥೆ ಮಾಡಬೇಕೆಂಬ ಒತ್ತಾಯಗಳು ಕೇಳಿ ಬರುತ್ತಿದೆ.
ಬಂಗಾರಪೇಟೆ, ಟೇಕಲ್, ಮಾಲೂರು ನಿಲ್ದಾಣಗಳಿಂದ ಸಾವಿರಾರು ಸಂಖ್ಯೆಯಲ್ಲಿ ನಿತ್ಯ ಬೆಳಗ್ಗೆ ಕೆಲಸಗಳಿಗೆ ತೆರಳಲು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಕೆಜಿಎಫ್, ಕುಪ್ಪಂ ನಿಲ್ದಾಣಗಳಿಂದ ಬರುವ ರೈಲುಗಳು ಪ್ರಯಾಣಿಕರಿಂದ ಭರ್ತಿಯಾಗಿರುತ್ತವೆ. ಬಂಗಾರಪೇಟೆ ನಿಲ್ದಾಣಕ್ಕೆ ಬರುವಷ್ಟರಲ್ಲಿ ಒಳಗಡೆ ಹೋಗಲೂ ಆಗುವುದಿಲ್ಲ. ಹಾಗಾಗಿ ಬೆಳಗಿನ ಸಮಯದಲ್ಲಿ ಬಂಗಾರಪೇಟೆಯಿಂದ ಬೆಂಗಳೂರು ನಗರಕ್ಕೆ ರೈಲಿನ ವ್ಯವಸ್ಥೆ ಮಾಡಿದರೆ ಪ್ರಯಾಣಿಕರಿಗೆ ಅನುಕೂಲವಾಗುತ್ತದೆ.
- ಕಿಶೋರ್ ಪಾಟೇಲ್, ರೈಲ್ವೆ ಸಲಹಾ ಸಮಿತಿ ಮಾಜಿ ಸದಸ್ಯ
ಬೆಳಗ್ಗೆ 10 ಗಂಟೆಗೆ ಕೆಲಸಕ್ಕೆ ಹಾಜರಾಗಬೇಕು. ಬೆಳಗ್ಗೆ 7.30 ಮತ್ತು 8 ಗಂಟೆಗೆ ಬರುವ ಕೆಜಿಎಫ್ ಮತ್ತು ಕುಪ್ಪಂ ಪ್ಯಾಸೆಂಜರ್ ರೈಲುಗಳಲ್ಲಿ ಹೋದರೆ ಕೆಲಸದ ಸಮಯಕ್ಕೆ ಹೋಗಬಹುದು. ಆದರೆ, ಈ ರೈಲುಗಳಲ್ಲಿ ಸ್ಥಳಾವಕಾಶ ಇರುವುದಿಲ್ಲ. ಕಷ್ಟಪಟ್ಟು ರೈಲು ಹತ್ತಬೇಕು. ಇದು ಪ್ರತಿನಿತ್ಯದ ಸಮಸ್ಯೆಯಾಗಿದೆ. ಇದೇ ಸಮಯದಲ್ಲಿ ಬಂಗಾರಪೇಟೆಯಿಂದಲೇ ರೈಲು ವ್ಯವಸ್ಥೆ ಮಾಡಿದರೆ ಟೇಕಲ್, ಮಾಲೂರು ಪ್ರಯಾಣಿಕರಿಗೂ ಅನುಕೂಲವಾಗುತ್ತದೆ. ಸಂಸದರು ಗಮನ ಹರಿಸಿ ರೈಲು ವ್ಯವಸ್ಥೆ ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳಬೇಕು.
- ಟಿ.ಎನ್ ರವಿ, ಪ್ರಯಾಣಿಕ