

ಅನ್ಸಾರ್ ಇನೋಳಿ, ಉಳ್ಳಾಲ
ಪ್ರತಿದಿನ ಸಾವಿರಾರು ಜನ ನಡೆದಾಡುವ ರೈಲು ಹಳಿಗೆ ಗೇಟ್ ಹಾಕಿ ಮೂರು ವರ್ಷಗಳಾಗುತ್ತಿವೆ. ಹಳಿ ದಾಟಲು ಸರ್ಕಸ್ ನಡೆಸಿ ಸಾರ್ವಜನಿಕರು ಬೇಸತ್ತು ಹಿಡಿಶಾಪ ಹಾಕುತ್ತಿದ್ದರೆ, ವಿದ್ಯಾರ್ಥಿಗಳು ಹೋರಾಟಕ್ಕೆ ಧುಮುಕಿದ್ದಾರೆ. ಹೋರಾಟ ಮುಂದುವರಿದರೆ ಪ್ರತಿಫಲ ಸಿಗುವ ನಿರೀಕ್ಷೆ ಸಾರ್ವಜನಿಕರದ್ದಾಗಿದೆ.
ಪ್ರತಿದಿನ ತೊಕ್ಕೊಟ್ಟು ಜಂಕ್ಷನ್‌ನಷ್ಟೇ ಸಾರ್ವಜನಿಕರು ಒಳಪೇಟೆಯಲ್ಲೂ ಇರುತ್ತಾರೆ. ಒಳಪೇಟೆಯಾಗಿ ಖಾಸಗಿ, ಅನುದಾನಿತ ಶಾಲೆ, ಕಾಲೇಜುಗಳು, ಮಂದಿರಗಳು, ಚರ್ಚ್, ಮಸೀದಿಗಳಿವೆ. ಉಳ್ಳಾಲ ದರ್ಗಾ, ಭಗವತೀ ದೇವಸ್ಥಾನಕ್ಕೆ ಒಳಪೇಟೆ ಕಾಲ್ನಡಿಗೆ ದಾರಿಯೂ ಆಗಿದೆ. ಅಂಬೇಡ್ಕರ್ ರಂಗಮಂದಿರ, ಮಾರುಕಟ್ಟೆ, ವ್ಯಾಪಾರಿ ಮಳಿಗೆಗಳು, ವಸತಿ ನಿಲಯಗಳೂ ಇಲ್ಲಿವೆ.
ತೊಕ್ಕೊಟ್ಟುವಿನಿಂದ ರೈಲ್ವೇ ಹಳಿವರೆಗೆ ಸಾಗುವ ಕಾಲು ದಾರಿಯುದ್ದಕ್ಕೂ ಪೆಟ್ಟಿಗೆ ಅಂಗಡಿಗಳ ಸಾಲಿದ್ದು, ಜನ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಪ್ರತಿದಿನ ಸಾವಿರ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರು ಇಲ್ಲಿಂದ ಸಂಚರಿಸುತ್ತಾರಾದರೂ ಇದಕ್ಕೆ ರೈಲು ಹಳಿ ದಾಟಿಯೇ ಹೋಗಬೇಕು. ಹಿಂದೆ ಒಂದು ಹಳಿ ಇದ್ದಾಗಲೇ ಜನರ ಕಣ್ಣೆದುರಲ್ಲೇ ಸಾಕಷ್ಟು ಜೀವ ಬಲಿಯಾಗಿತ್ತು. ಎರಡು ಹಳಿ ಆದ ಬಳಿಕವಂತೂ ಜೀವಬಲಿ ಪ್ರಮಾಣ ಹೆಚ್ಚಾಗಿದೆ. ಯಾವ ಹಳಿಯಿಂದ ರೈಲು ಬರುತ್ತಿದೆ ಎನ್ನುವ ಗೊಂದಲ ಜೀವಹರಣಕ್ಕೆ ಕಾರಣ.
ಪ್ರತಿದಿನ ಕೇರಳ, ತಮಿಳುನಾಡಿಗೆ ಪ್ಯಾಸೆಂಜರ್, ಎಕ್ಸ್‌ಪ್ರೆಸ್, ಸೂಪರ್ ಎಕ್ಸ್‌ಪ್ರೆಸ್ ಹೀಗೆ ಹಲವು ರೈಲುಗಳು ಇಲ್ಲಿಂದ ಚಲಿಸುತ್ತವೆ. ಹಳಿ ದಾಟುವ ಸಂದರ್ಭ ಉಂಟಾದ ಜೀವಹಾನಿಯ ಹಿನ್ನೆಲೆಯಲ್ಲಿ ರೈಲ್ವೇ ಇಲಾಖೆ 2021ರ ಸೆಪ್ಟೆಂಬರ್‌ನಲ್ಲಿ ಹಳಿಗೆ ಅಡ್ಡಲಾಗಿ ಕಬ್ಬಿಣದ ಪಟ್ಟಿ ಅಳವಡಿಸಿ ರಸ್ತೆ ಬಂದ್ ಮಾಡಿದೆ. ಈ ಸಂದರ್ಭ ಸಾರ್ವಜನಿಕರಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಳಿ ದಾಟಲು ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ನಗರಸಭೆಯ ತಲೆಮೇಲೆ ಅಧಿಕಾರಿಗಳು ಭಾರ ಹಾಕಿದರು.
ನಗರಸಭೆಯಿಂದ ಪರ್ಯಾಯ ವ್ಯವಸ್ಥೆ ಅಸಾಧ್ಯ ಎನಿಸಿದ್ದರಿಂದ ಎರಡೂವರೆ ವರ್ಷ ಕಾದ ರೈಲ್ವೆ ಅಧಿಕಾರಿಗಳು ಇದೇ ವರ್ಷ ಫೆಬ್ರವರಿಯಲ್ಲಿ ಪೂರ್ಣಪ್ರಮಾಣದ ಗೇಟ್ ಅಳವಡಿಸಿದ್ದರು. ಇದಾದ ಬಳಿಕ ಯುವಕರು ಗೇಟ್ ಮೇಲಿಂದ ಹಾರಿ ಹಳಿ ದಾಟಿದರೆ, ಮಕ್ಕಳು ಮತ್ತು ಮಹಿಳೆಯರು ಅಡಿಭಾಗದಿಂದಲೂ, ಗೇಟ್ ಪಕ್ಕ ಇರುವ ಸಣ್ಣ ಜಾಗದಿಂದಲೂ ನುಸುಳಿ ಹೋಗುವ ಸನ್ನಿವೇಶ ಪ್ರತಿದಿನ ಕಾಣಲು ಸಿಗುತ್ತದೆ. ಆದರೆ ವಯಸ್ಕರ ಸಂಕಷ್ಟ ಕೇಳುವವರೇ ಇಲ್ಲ.
ತೊಕ್ಕೊಟ್ಟು ಜಂಕ್ಷನ್‌ನಲ್ಲಿ ಪೆಟ್ರೋಲ್ ಪಂಪ್ ಇದ್ದ ಸಂದರ್ಭ ಅದರ ಹಿಂದಿನ ಭಾಗದಿಂದ ಒಳಪೇಟೆಗೆ ಸಂಪರ್ಕ ರಸ್ತೆಯಿತ್ತು. ಆ ಸಂದರ್ಭ ಸಾರ್ವಜನಿಕರ ಉಪಯೋಗಕ್ಕಾಗಿ ರೈಲು ಹಳಿ ಅಡಿಭಾಗದಿಂದ ಹೋಗಲು ಕಿರು ಸೇತುವೆ ನಿರ್ಮಿಸಲಾಗಿತ್ತು. ಕ್ರಮೇಣ ಪೆಟ್ರೋಲ್ ಪಂಪ್ ಹಿಂಬದಿಯಿದ್ದ ರಸ್ತೆ ಮುಚ್ಚಲ್ಪಟ್ಟಿತು. ಈಗ ಜನರು ಬಳಸುವ ರಸ್ತೆಯುದ್ದಕ್ಕೂ ಪೆಟ್ಟಿಗೆ ಅಂಗಡಿಗಳೂ ತಲೆ ಎತ್ತಿದ್ದರಿಂದ ಸಾರ್ವಜನಿಕರು ಇದೇ ರಸ್ತೆ ಬಳಸಲು ಆರಂಭಿಸಿದರು. ಇದರ ಪರಿಣಾಮ ಕೆಳ ಸೇತುವೆ ಪಾಳು ಬಿದ್ದು ನೀರು ಹರಿದಾಡುವ ಕಾಲುವೆಯಾಯಿತು.ಪ್ರಸ್ತುತ ಕೆಳಸೇತುವೆಯಲ್ಲಿ ವಾಹನ ಸಂಚಾರಕ್ಕೆ ನಿಬರ್ಂಧ ಹೇರಲಾಗಿದೆ.
ಸೋಮೇಶ್ವರದಲ್ಲಿ ರೈಲ್ವೇ ಮೇಲ್ಸೇತುವೆ ನಿರ್ಮಿಸುವುದಾದರೆ ಶೇ.50ರಷ್ಟು ಹಣ ರೈಲ್ವೇ ಇಲಾಖೆ ಮತ್ತು ಶೇ.50 ಸ್ಥಳೀಯಾಡಳಿತ ನೀಡಬೇಕು. ತೊಕ್ಕೊಟ್ಟಿನಲ್ಲಿ ಮೇಲ್ಸೇತುವೆ ನಿರ್ಮಿಸಲು ಬೇಕಾದ ಖರ್ಚು ನಗರಸಭೆಯೇ ಭರಿಸಬೇಕು ಎನ್ನುವುದು ರೈಲ್ವೇ ಇಲಾಖೆಯ ಅಧಿಕಾರಿಗಳ ವಾದ. ಇದರಿಂದಾಗಿ ಇಲ್ಲಿ ಮೇಲ್ಸೇತುವೆ ನಿರ್ಮಾಣ ಕನಸು ನನಸಾಗುವುದು ದೂರದ ಮಾತು.
ಮೂರು ವರ್ಷಗಳ ಹಿಂದೆ ಇಲಾಖೆ ಕಬ್ಬಿಣದ ಪಟ್ಟಿ ಹಾಕಿದರೂ ಸಣ್ಣ ರಸ್ತೆ ಇಡಲಾಗಿತ್ತು. ಆದರೆ ಈ ಬಾರಿ ರಸ್ತೆಯೇ ಇಲ್ಲದ ಕಾರಣ ವಿದ್ಯಾರ್ಥಿಗಳಿಗೂ ಬಿಸಿ ತಟ್ಟಿದ್ದು, ಕಳೆದ ವಾರ ಪ್ರತಿಭಟನೆಯೂ ನಡೆದಿದೆ. ಆದರೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಹೋರಾಟ ಮುಂದುವರಿಸುವ ಎಚ್ಚರಿಕೆ ಕೇಳಿ ಬಂದಿದೆ.
ತೊಕ್ಕೊಟ್ಟಿನ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನ ಸೆಳೆಯಲಾಗಿದ್ದು, ಪಾಲಕ್ಕಾಡ್ ವಿಭಾಗ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಮೇಲ್ಸೇತುವೆ ಖರ್ಚು ಸ್ಥಳೀಯಾಡಳಿತ ಭರಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದರಿಂದ ಉಳ್ಳಾಲ ನಗರಸಭೆಗೂ ಮನವಿ ನೀಡುತ್ತೇವೆ. ತೊಕ್ಕೊಟ್ಟಿನಲ್ಲಿರುವ ಕೆಳಸೇತುವೆ ಬಗ್ಗೆಯೂ ಪ್ರಸ್ತಾಪಿಸಿದ್ದೇನೆ. - ಯಶವಂತ ಅಮೀನ್, ರೈಲ್ವೆ ಸಲಹಾ ಸಮಿತಿ ಸದಸ್ಯ
ಹಿರಿಯ ನಾಗರಿಕರು, ವಿದ್ಯಾರ್ಥಿಗಳು ರೈಲು ಹಳಿ ದಾಟಲು ಸಾಕಷ್ಟು ಕಷ್ಟಪಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲ್ವೇ ಅಧಿಕಾರಿಗಳು ಹಾಗೂ ಸಂಸದರು ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು. - ಸಿರಿಲ್ ರಾಬರ್ಟ್ ಡಿಸೋಜ, ನಿವೃತ್ತ ಸರ್ಕಾರಿ ನೌಕರ
ಈ ಭಾಗದಲ್ಲಿ ಹಲವು ಪ್ರಾಥಮಿಕ, ಪ್ರೌಢ ಶಾಲೆ, ಕಾಲೇಜುಗಳಿವೆ. ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಹೋಗುವ ದಾರಿ. ರೈಲು ಹಳಿ ಮುಚ್ಚಿರುವುದರಿಂದ ವಿದ್ಯಾರ್ಥಿಗಳು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಮುಂದುವರಿಸಲಾಗುವುದು. - ಸಫ್ವಾನ್ ಕೆರೆಬೈಲ್, ಉಳ್ಳಾಲ ವಿದ್ಯಾರ್ಥಿ ಯೂನಿಯನ್ ಅಧ್ಯಕ್ಷ