

ಚನ್ನರಾಯಪಟ್ಟಣ: ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಆನ್‌ಲೈನ್ ಬುಕ್ಕಿಂಗ್ ಕೇಂದ್ರ ತೆರೆಯುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಮಾಡಿದ್ದು, ಸಕಾರಾತ್ಮಕವಾಗಿ ಸ್ಪಂದನೆ ಸಿಕ್ಕಿದೆ. ಇದರಿಂದ ಪ್ರಯಾಣಿಕರು ಹಾಸನಕ್ಕೆ ತೆರಳಿ ಟಿಕೆಟ್ ಬುಕ್ಕಿಂಗ್ ಮಾಡುವ ಸಮಸ್ಯೆಗೆ ಮುಕ್ತಿ ಸಿಗಲಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ರಾಮೇಶ್ವರ ಬಡಾವಣೆಗೆ ಹೊಂದಿಕೊಂಡಂತಿರುವ ರೈಲ್ವೆ ನಿಲ್ದಾಣದ ಬಳಿ ನೂತನವಾಗಿ ಆರಂಭಿಸಲಾಗಿರುವ ಪ್ರಯಾಣಿಕರ ಆಟೋ ನಿಲ್ದಾಣವನ್ನು ಉದ್ಘಾಟಿಸಿದ ಶಾಸಕರು ಮಾತನಾಡಿದರು.
ಇತ್ತೀಚೆಗೆ ಹಾಸನಕ್ಕೆ ಆಗಮಿಸಿದ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಈ ಸಂಬಂಧ ಮನವಿ ಮಾಡಲಾಗಿತ್ತು. ಈಗ ಟಿಕೆಟ್ ಬುಕ್ಕಿಂಗ್ ಕೌಂಟರ್ ಪ್ರಗತಿಯಲ್ಲಿದೆ. ಇದರೊಂದಿಗೆ ಶೀಘ್ರ ಮುಂದಿನ ತಿಂಗಳಲ್ಲಿ ವಂದೇ ಭಾರತ್ ರೈಲು ಬೆಂಗಳೂರಿನಿಂದ ಮಂಗಳೂರಿಗೆ ಸಂಚಾರ ಆರಂಭಿಸಲಿದೆ ಎಂದರು.
ಪಟ್ಟಣದಲ್ಲಿ ಸೋಲ್ಲಾಪುರ ಎಕ್ಸ್‌ಪ್ರೆಸ್ ರೈಲಿನ ನಿಲುಗಡೆಗೆ ಮನವಿ ಮಾಡಿದ್ದು, ಪ್ಲಾಟ್‌ಫಾರ್ಮ್ ನವೀಕರಣದ ನಂತರ ನಿಲುಗಡೆಯಾಗಲಿದೆ. ಆದೇ ರೀತಿ ತಾಲೂಕಿನಿಂದ ಮುಂಬೈಗೆ ಹೆಚ್ಚಿನ ನಂಟು ಹೊಂದಿರುವ ಕಾರಣ ವಾರದಲ್ಲಿ ಎರಡು ದಿನ ಬೆಂಗಳೂರು, ಹಾಸನ, ಮಂಗಳೂರು ಮೂಲಕ ಮುಂಬೈಗೆ ರೈಲು ಸಂಚಾರ ಆರಂಭಿಸುವಂತೆ ರೈಲ್ವೆ ಸಚಿವರಿಗೆ ಮನವಿ ಮಾಡಲಾಗಿದೆ. ಜತೆಗೆ ಹಿರಿಸಾವೆ ನಿಲ್ದಾಣಕ್ಕೆ ಮೂಲಸೌಲಭ್ಯ ಕಲ್ಪಿಸಲು ಮನವಿ ಮಾಡಲಾಗಿದೆ ಎಂದರು.
ನಗರದಲ್ಲಿರುವ ಆಟೋ ನಿಲ್ದಾಣಗಳಿಗೆ ನೆರಳಿನ ವ್ಯವಸ್ಥೆ ಮಾಡಿಕೊಡುವ ಮೂಲಕ ಆಟೋ ಚಾಲಕರ ವೃತ್ತಿ ಶಿಸ್ತು ಮತ್ತು ಸುಂದರವಾಗಿರಲಿ ಎಂಬ ಆಶಯ ಹೊಂದಿದ್ದು, ಇದೀಗ ರೈಲ್ವೆ ನಿಲ್ದಾಣದ ಬಳಿ ನಿರ್ಮಾಣ ಮಾಡಲಾಗಿರುವ ಆಟೋ ನಿಲ್ದಾಣಕ್ಕೂ ನೆರಳಿನ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.
ರೈಲ್ವೆ ನಿಲ್ದಾಣಕ್ಕೆ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಸಂಪರ್ಕ ಕಲ್ಪಿಸುವ ಎರಡು ರಸ್ತೆಗಳನ್ನು ಅಭಿವೃದ್ಧಿಗೊಳಿಸಿ ಡಾಂಬರೀಕರಣ ಮಾಡಲಾಗಿದೆ. ರಾತ್ರಿಯಿಡೀ ಸಂಚಾರ ಮಾಡುವ ರೈಲುಗಳಿಂದ ಪ್ರಯಾಣಿಕರು ಆಗಮಿಸುವ ಹಿನ್ನೆಲೆಯಲ್ಲಿ ಪುರಸಭೆ ವತಿಯಿಂದ ಹೈಮಾಸ್ಟ್ ಲ್ಯಾಂಪ್ ಅಳವಡಿಸಲಾಗಿದೆ. ರಾತ್ರಿಯಿಡೀ ಆಗಮಿಸುವ ಪ್ರಯಾಣಿಕರೊಂದಿಗೆ ಆಟೋಚಾಲಕರು ಸಭ್ಯತೆ, ಸಂಯಮದಿಂದ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಟಿಎಪಿಎಂಎಸ್ ಅಧ್ಯಕ್ಷ ಅನಿಲ್‌ಕುಮಾರ್, ಆಟೋ ಚಾಲಕರ ಮಾಲೀಕರ ಸಂಘದ ಗೌರವಾಧ್ಯಕ್ಷ ಮೂಳೆ ಮತ್ತು ಕೀಲು ತಜ್ಞ ಡಾ.ವಿ.ಮಹೇಶ್, ರೈಲ್ವೆ ಮಾಸ್ಟರ್ ಸುಬ್ರಹ್ಮಣ್ಯ, ಕಸಬಾ ಸೊಸೈಟಿ ನಿರ್ದೇಶಕರಾದ ಶಂಕರ್, ಆಟೋ ಚಾಲಕರ ಸಂಘದ ಅಧ್ಯಕ್ಷ ಪುರಿ ಮಂಜು, ಸ್ಥಳೀಯರಾದ ನಂಜುಂಡೇಗೌಡ ಇತರರಿದ್ದರು.