

ವಿಜಯವಾಣಿ ಸುದ್ದಿಜಾಲ ದೇವನಹಳ್ಳಿ
ತಾಲೂಕಿನ ಅವತಿ ಗ್ರಾಮದಲ್ಲಿ ರೈಲು ನಿಲುಗಡೆ ಭಾಗ್ಯ ದೊರೆತಿದೆ. 80-90ರ ದಶಕದಿಂದಲೂ ಗ್ರಾಮದಲ್ಲಿ ನಿಲುಗಡೆಯಾಗುತ್ತಿದ್ದ ರೈಲುಗಳನ್ನು ವರ್ಷದಿಂದ ಕಾರಣಾಂತರಗಳಿಂದ ನಿಲುಗಡೆ ಮಾಡುತ್ತಿರಲಿಲ್ಲ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿತ್ತು.
ಮುಖಂಡ ಕೆ.ವೆಂಕಟೇಶ್ ಮಾತನಾಡಿ, ಹಲವು ವಿಶೇಷಗಳಿಂದ ಕೂಡಿದ ಗ್ರಾಮದಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ಅವರ ಕಾಲದಿಂದಲೂ ರೈಲು ನಿಲುಗಡೆ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ ವರ್ಷದ ಹಿಂದೆ ಈ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಎದುರಾದ ಸಮಸ್ಯೆ ಬಗ್ಗೆ ರೈಲ್ವೆ ಇಲಾಖೆಯನ್ನು ಸಂಪರ್ಕಿಸಿ ಮನವಿ ಮಾಡಿದ್ದು, ಮತ್ತೆ ನಿಲುಗಡೆ ಅವಕಾಶ ಕಲ್ಪಿಸಿರುವುದು ಸಂತಸ ತಂದಿದೆ ಎಂದರು.
ಗ್ರಾಪಂ ಸದಸ್ಯ ನರಸಪ್ಪ ಮಾತನಾಡಿ, ವರ್ಷದಿಂದ ರೈಲು ನಿಲ್ದಾಣ ಹಾಳಾಗಿತ್ತು. ನಮ್ಮ ಪಂಚಾಯಿತಿಯಿಂದ ಎಲ್ಲವನ್ನು ಸ್ವಚ್ಛಗೊಳಿಸಿ ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಟಿಕೆಟ್ ವಿತರಣೆ ಮಾಡುವ ಸಿಬ್ಬಂದಿ, ಗ್ಯಾಂಗ್ ಮನ್ ಕೊರತೆ ಇತ್ತು. ಅದನ್ನು ಸಹ ರೈಲ್ವೆ ಇಲಾಖೆ ಒಪ್ಪಿಗೆ ಪಡೆದು ನಮ್ಮ ಗ್ರಾಮದವರನ್ನೆ ನೇಮಕ ಮಾಡಲಾಗಿದೆ ಎಂದರು.
ಬಿಜೆಪಿ ಜಿಲ್ಲಾ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ, ಮುಖಂಡರಾದ ರಾಮಾಂಜಿನಪ್ಪ, ಸಿದ್ದಪ್ಪ, ಬಾಬಣ್ಣ, ಚಿಕ್ಕಣ್ಣ, ನಾಗರಾಜ್, ಸರ್ಪಭೂಷಣ್, ಗ್ರಾಪಂ ಸದಸ್ಯರಾದ ಹಾರೋಹಳ್ಳಿ ವೆಂಕಟೇಶ್, ಮುನಿಕೃಷ್ಣಪ್ಪ, ಆನಂದ, ಹನುಮಂತು, ಚೆನ್ನಕೇಶವ, ತಿಲಕ್, ಬುಡ್ಡಪ್ಪ, ಸುಬ್ರಹ್ಮಣ್ಯ, ಗೇಟ್ ಮ್ಯಾನ್ ಪಿ.ಆನಂದ ಇತರರು ಇದ್ದರು.