

ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಗ್ರಾಮದಲ್ಲಿ ಸುಸಜ್ಜಿತ ರೈಲು ನಿಲ್ದಾಣವಿದ್ದರೂ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆ ಇಲ್ಲದೆ ಗ್ರಾಮಸ್ಥರು ರೈಲು ಸಂಚಾರದಿಂದ ವಂಚಿತರಾಗುತ್ತಿದ್ದಾರೆ.
ಪ್ರತಿನಿತ್ಯ 50-60 ಎಕ್ಸ್ಪ್ರೆಸ್ ರೈಲುಗಳು ಮಾಯಕೊಂಡ ನಿಲ್ದಾಣದ ಮೂಲಕ ಸಂಚರಿಸುತ್ತವೆ. ಒಂದೆರಡು ಪ್ಯಾಸೆಂಜರ್ ಗಾಡಿಗಳಿಗೆ ಮಾತ್ರ ಇಲ್ಲಿ ನಿಲುಗಡೆಯಿದೆ ಹೀಗಾಗಿ ಪ್ರಯಾಣಿಕರು ಬಸ್ ಬಳಸಿ ರೈಲುಗಳನ್ನು ಹತ್ತುವುದು ಅನಿವಾರ್ಯ.
ಇಲ್ಲಿ ನಿಲುಗಡೆಗೆ ಅವಕಾಶ ದೊರೆತರೆ ಪ್ರತಿನಿತ್ಯ ತೆರಳುವ ನೂರಾರು ವಿದ್ಯಾರ್ಥಿಗಳು, ದೂರ ನಗರಗಳಿಗೆ ಸಂಚರಿಸುವ ಸಾರ್ವಜನಿಕರಿಗೆ ಅನುಕೂಲ ಆಗಲಿದೆ ಎಂಬ ಅಭಿಪ್ರಾಯವಿದೆ.
ಬೆಂಗಳೂರು, ಮೈಸೂರು, ತಮಿಳುನಾಡು, ಕೇರಳ ಸೇರಿ ದಕ್ಷಿಣ ರಾಜ್ಯಗಳಿಂದ ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರ ಪ್ರದೇಶ, ದೆಹಲಿಯಂತಹ ಉತ್ತರ ಭಾರತದ ಹಲವಾರು ರಾಜ್ಯಗಳನ್ನು ಈ ಮಾರ್ಗ ಸಂರ್ಪಸುತ್ತದೆ.
ಇಲ್ಲಿ ಪ್ರತಿನಿತ್ಯ ನಿಜಾಮುದ್ದೀನ್, ಕುರ್ಲಾ, ಇಂಟರ್ಸಿಟಿ, ಸಂಪರ್ಕ ಕ್ರಾಂತಿ, ರಾಣಿ ಚನ್ನಮ್ಮ, ಗೋಲ್ ಗುಂಬಜ್, ವಾಸ್ಕೋ, ಧಾರವಾಡ ಮೈಸೂರು, ಕುಚುವೇಲಿ, ವಿಜಯವಾಡ, ನಾಗಪುರ, ತಿರುವನಂತಪುರ್ ಸೇರಿ ಅಂದಾಜು 50 ಎಕ್ಸ್ಪ್ರೆಸ್ ರೈಲು ಸಂಚರಿಸುತ್ತವೆ.
ಹುಬ್ಬಳ್ಳಿ- ಅರಸೀಕೆರೆ ಪ್ಯಾಸೆಂಜರ್, ಬೆಂಗಳೂರು-ಹುಬ್ಬಳ್ಳಿ ಮೇಲ್, ಹರಿಹರ - ಚಿತ್ರದುರ್ಗ ಪ್ಯಾಸೆಂಜರ್ ರೈಲುಗಳಿಗೆ ಇಲ್ಲಿ ನಿಲುಗಡೆಯಿದೆ. ಎಕ್ಸ್ಪ್ರೆಸ್ ರೈಲು ಹಿಡಿಯಲು ಮಾಯಕೊಂಡದ ಜನರು 30 ಕಿಮೀ ದೂರದ ದಾವಣಗೆರೆ, ಅಥವಾ 25 ಕಿ.ಮೀ. ದೂರದ ಚಿಕ್ಕಜಾಜೂರು ಜಂಕ್ಷನ್ಗೆ ಹೋಗುವುದು ಅನಿವಾರ್ಯ.
ಮಾಯಕೊಂಡ ರೈಲು ನಿಲ್ದಾಣದಲ್ಲಿ ಇಂಟರ್ಸಿಟಿ ಹಾಗೂ ಸಂಪರ್ಕ ಕ್ರಾಂತಿ ರೈಲುಗಳಿಗೆ ನಿಲುಗಡೆ ಕೋರಿ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರೊಂದಿಗೆ ಚರ್ಚೆ ನಡೆಸಲಾಗುವುದು. ಸುತ್ತಲಿನ ಗ್ರಾಮಸ್ಥರೊಂದಿಗೆ ಸಂಸದರ ಮೂಲಕ ಕೇಂದ್ರದ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು. | ಕೆ.ಎಸ್. ಬಸವಂತಪ್ಪ, ಶಾಸಕರು, ಮಾಯಕೊಂಡ ಗ್ರಾಮದಲ್ಲಿ ಎಕ್ಸ್ಪ್ರೆಸ್ ರೈಲುಗಳಿಗೆ ನಿಲುಗಡೆ ಬೇಕು ಎನ್ನುವುದು ಬಹು ದಿನದ ಬೇಡಿಕೆ. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಗಮನಹರಿಸಿ ಕೇಂದ್ರ ರೈಲ್ವೆ ಸಚಿವರೊಂದಿಗೆ ಮಾತುಕತೆ ನಡೆಸಬೇಕೆಂಬುದು ನಮ್ಮ ಮನವಿ. | ಅಶೋಕ್ ಗೌಡ್ರು, ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಎಕ್ಸ್ಪ್ರೆಸ್ ರೈಲುಗಳ ನಿಲುಗಡೆಯಿಂದ ವಿದ್ಯಾರ್ಥಿಗಳು, ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಶಾಸಕರು ಮತ್ತು ಸಂಸದರು ಈ ಬಗ್ಗೆ ಗಮನಹರಿಸಬೇಕು. | ಸಿ. ಅನಿಲ್ ಕುಮಾರ್ ನಾಯ್್ಕ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಯಕೊಂಡ ನಿಲ್ದಾಣ ಹತ್ತಾರು ಹಳ್ಳಿಗಳಿಗೆ ವರದಾನ ಇದ್ದಂತೆ. ಶಾಸಕರು ಮತ್ತು ಸಂಸದರು ಎಕ್ಸ್ಪ್ರೆಸ್ ರೈಲುಗಳ ನಿಲುಗಡೆ ಮಾಡಿಸಲು ಕ್ರಮ ಕೈಗೊಳ್ಳಬೇಕು. | ಆರ್.ಸಿ. ಗಣೇಶ್, ಗ್ರಾಪಂ ಮಾಜಿ ಅಧ್ಯಕ್ಷ ಹುಚ್ಚವ್ವನಹಳ್ಳಿ