ಅರಸಾಳಿನಲ್ಲಿ ರೈಲು ನಿಲುಗಡೆ; ಜನರ ಹೋರಾಟಕ್ಕೆ ಸಂದ ಜಯ

26 RPT 2
ರಿಪ್ಪನ್‌ಪೇಟೆ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ಉದ್ದೇಶಿಸಿ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿದರು.
Published on

ರಿಪ್ಪನ್‌ಪೇಟೆ: ಅರಸಾಳು ನಿಲ್ದಾಣದಲ್ಲಿ ಪ್ರಸ್ತುತ ಇಂಟರ್‌ಸಿಟಿ ರೈಲುಗಳು ನಿಲುಗಡೆಗೊಳ್ಳುತ್ತಿರುವುದು ಈ ಭಾಗದ ಜನರು ಮತ್ತು ಹೋರಾಟಗಾರರಿಗೆ ಸಂದ ಗೆಲುವಾಗಿದೆ. ಪ್ರಾಯೋಗಿಕವಾಗಿದ್ದರೂ ಲಾಭ-ನಷ್ಟದ ಲೆಕ್ಕಾಚಾರ ಎಣಿಸದೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲು ನಿಲುಗಡೆಯನ್ನು ಕಾಯಂಗೊಳಿಸಲು ಕ್ರಮವಹಿಸುತ್ತೇನೆ ಎಂದು ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಹಂತ ಹಂತವಾಗಿ ರೈಲ್ವೆ ಯೋಜನೆ ಅಭಿವೃದ್ಧಿಗೊಳಿಸಿದ್ದು ಈಗ ಇಂಟರ್ ಸಿಟಿ ರೈಲುಗಳನ್ನು ನಿಲುಗಡೆಗೊಳಿಸಲಾಗುತ್ತಿದೆ. ನಮ್ಮ ಎಲ್ಲ ಪ್ರಯತ್ನದಲ್ಲಿ ಸಹಕರಿಸಿ ಅನುದಾನ ಮಂಜೂರು ಮಾಡಿ ಈ ಭಾಗದ ರೈಲ್ವೆ ವ್ಯವಸ್ಥೆಯನ್ನು ಸದೃಢಗೊಳಿಸಲು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸಹಕರಿಸಿದ್ದಾರೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಿಂದಿನ ದಿನಗಳಲ್ಲಿ ಈ ಭಾಗದ ಜನರಿಗೆ ರೈಲು ಸಂಚಾರವೇ ಒಂದು ಸುಗಮ ವ್ಯವಸ್ಥೆಯಾಗಿತ್ತು. ಕಾಲಕ್ರಮೇಣ ಸಂಚಾರ ವ್ಯವಸ್ಥೆಯಲ್ಲಿ ವಾಹನಗಳ ಬಳಕೆಯಾಗುತ್ತಿದ್ದಂತೆ ರೈಲು ಸಂಚಾರ ವ್ಯವಸ್ಥೆ ಕಳೆಗುಂದಿತ್ತು. ಪ್ರತಿಯೊಬ್ಬರು ವಾಹನಗಳನ್ನೇ ಆಶ್ರಯಿಸಿದ್ದರು. ಒಂದು ಹಂತದಲ್ಲಿ ಅರಸಾಳು ರೈಲು ನಿಲ್ದಾಣ ಜನ ಸಂಚಾರವಿಲ್ಲದೆ ಸ್ಥಗಿತಗೊಳ್ಳುವ ಹಂತ ತಲುಪಿತ್ತು. ಆಗ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೆ ತಂದಾಗ ಐತಿಹಾಸಿಕ ಹಿನ್ನೆಲೆಯಿರುವ ಈ ಪ್ರದೇಶದ ರೈಲಿನ ಸಂಚಾರ ಹಾಗೂ ನಿಲ್ದಾಣಗಳನ್ನು ಉಳಿಸಿಕೊಳ್ಳುವ ಸಂಕಲ್ಪ ಮಾಡಿದ್ದರು. ಶಾಸಕ ಆರಗ ಜ್ಞಾನೇಂದ್ರ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಹೆಚ್ಚಿನ ಆಸಕ್ತಿ ವಹಿಸಿ ಶ್ರಮಿಸಿದ್ದರು. ಅದರಂತೆ ಹಿಂದಿದ್ದ ಮೀಟರ್‌ಗೇಜ್ ವ್ಯವಸ್ಥೆಯನ್ನು ಬದಲಾಯಿಸಿ ಬ್ರಾಡ್‌ಗೇಜ್ ವ್ಯವಸ್ಥೆ ಮಾಡಲಾಯಿತು. ನಶಿಸುತ್ತಿದ್ದ ಅರಸಾಳು ರೈಲ್ವೆ ನಿಲ್ದಾಣಕ್ಕೆ ಹೊಸ ಮೆರಗನ್ನು ನೀಡಿ ಮಾಲ್ಗುಡಿ ಮ್ಯೂಸಿಯಂ ನಿರ್ಮಾಣ ಮಾಡಿ ಜನಾಕರ್ಷಣೆಗೊಳಿಸಲಾಯಿತು. ಅಗತ್ಯವಿರುವ ಎಲ್ಲ ಮೂಲ ಸೌಕರ್ಯಗಳ ಅಭಿವೃದ್ಧಿಯೊಂದಿಗೆ ನೂತನ ರೈಲು ನಿಲ್ದಾಣವನ್ನು ಸ್ಥಾಪಿಸಲಾಯಿತು ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಬೆಳಗೋಡು ಗಣಪತಿ, ತಾಪಂ ಮಾಜಿ ಅಧ್ಯಕ್ಷ ವೀರೇಶ ಆಲುವಳ್ಳಿ, ಮುಖಂಡರಾದ ಎಂ.ಬಿ. ಮಂಜುನಾಥ, ಮೆಣಸೆ ಆನಂದ, ಸುಧೀಂದ್ರ ಪೂಜಾರಿ, ಪದ್ಮಾ ಸುರೇಶ, ಲೀಲಾ ಶಂಕರ್, ಕಗ್ಗಲಿ ಲಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net