

ಆಲೂರು: ತಾಲೂಕು ಜನರ ಹಲವು ವರ್ಷಗಳ ಬೇಡಿಕೆಯಾಗಿದ್ದ ಪಟ್ಟಣದಲ್ಲಿ ರೈಲು ನಿಲುಗಡೆ ಕನಸು ಈಡೇರಿದ್ದು, ಸೋಮವಾರ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಸಿಮೆಂಟ್ ಮಂಜು ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.
ಆಲೂರು ತಾಲೂಕು ಕೇಂದ್ರವಾಗಿದ್ದು, ತಾಲೂಕಿನಲ್ಲಿ ರೈಲ್ವೆ ನಿಲ್ದಾಣವಿದ್ದರೂ ರೈಲು ನಿಲ್ಲಿಸುತ್ತಿರಲಿಲ್ಲ. ಇದರಿಂದ ತಾಲೂಕಿನ ಜನರು, ಸಂಘ-ಸಂಸ್ಥೆಗಳು ಹಲವು ಬಾರಿ ಹೋರಾಟ, ಪ್ರತಿಭಟನೆ ಮಾಡಿದರ ಫಲವಾಗಿ ರೈಲ್ವೆ ಇಲಾಖೆ ನಿಲುಗಡೆಗೆ ಆದೇಶ ಹೊರಡಿಸಿದ್ದು, ಯಶವಂತಪುರದಿಂದ ಕಾರವಾರಕ್ಕೆ ತೆರಳುವ ರೈಲು 5 ನಿಮಿಷ ಪಟ್ಟಣದಲ್ಲಿ ನಿಲುಗಡೆ ಮಾಡಿತು. ಈ ಸಂದರ್ಭದಲ್ಲಿ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಜನರು ಸಂಭ್ರಮಿಸಿದರು. ಹಾಸನ ಸಂಸದ ಪ್ರಜ್ವಲ್‌ರೇವಣ್ಣ, ಸ್ಥಳೀಯ ಶಾಸಕ ಸಿಮೆಂಟ್ ಮಂಜು ಹಾಗೂ ವಿವಿಧ ಪಕ್ಷ, ಸಂಘ-ಸಂಸ್ಥೆಗಳ ಮುಖಂಡರು ನಿಲ್ದಾಣದಲ್ಲಿ ರೈಲಿಗೆ ಪೂಜೆ ಸಲ್ಲಿಸಿ, ಸಿಹಿ ವಿತರಿಸಿ ಸಂತಸ ಹಂಚಿಕೊಂಡರು.
ಆಲೂರು ರಾಧಮ್ಮ ಜನಸ್ಪಂದನ ಸಂಸ್ಥಾಪಕ ಹೇಮಂತ್ ಕುಮಾರ್, ಕೇಂದ್ರ ರೈಲ್ವೆ ಮಂತ್ರಿ ಮತ್ತು ಕೇಂದ್ರ ರೈಲ್ವೆ ಇಲಾಖೆ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಮಾಡಿಕೊಂಡಿದ್ದರು. ಅದರಂತೆ ಶ್ರೀ ರಾಮನ ದರ್ಶನ ಪಡೆಯಲು ಆಯೋಧ್ಯೆಗೆ ವಿಮಾನದಲ್ಲಿ ಸಂಚರಿಸಿ ಬೆಂಗಳೂರಿನಿಂದ ಆಲೂರು ರೈಲ್ವೆ ನಿಲ್ದಾಣಕ್ಕೆ ಟಿಕೆಟ್ ಖರೀದಿಸಿ ಪ್ರಯಾಣ ಮಾಡುವ ಮೂಲಕ ನನ್ನ ನೂರಾರು ದಿನದ ಹೋರಾಟಕ್ಕೆ ಜಯ ಲಭಿಸಿದೆ ಎಂದು ಪಟ್ಟಣದ ನಿಲ್ದಾಣದಲ್ಲಿ ಹರ್ಷ ವ್ಯಕ್ತಪಡಿಸಿದರು. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ತಾಲೂಕಿನ ಜನರು ಹೇಮಂತ್ ಕುಮಾರ್ ಅವರಿಗೆ ಹಾರ, ಶಾಲು, ಹಾಕಿ ಗೌರವಿಸಿದ್ದರಲ್ಲದೆ, ರೈಲು ನಿಲುಗಡೆಯ ಹೋರಾಟಕ್ಕೆ ಒಟ್ಟಾಗಿ ಶ್ಲಾಘಿಸಿದರು.
ಸಂಸದ ಪ್ರಜ್ವಲ್ ರೇವಣ್ಣ ರೈಲಿನಲ್ಲಿ ಆಲೂರಿನಿಂದ ಸಕಲೇಶಪುರದವರೆಗೆ ಪ್ರಯಾಣಿಸಲು ಟಿಕೆಟ್ ಖರೀದಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಚಿವ ಎಚ್.ಡಿ.ರೇವಣ್ಣ ಹಾಗೂ ಸಂಸದನಾದ ನನ್ನ ಸತತ ನಾಲ್ಕು ವರ್ಷದ ಪ್ರಯತ್ನದ ಫಲವಾಗಿ ಆಲೂರಿನಲ್ಲಿ ರೈಲು ನಿಲುಗಡೆಯಾಗುತ್ತಿದೆ. ಇದಕ್ಕೆ ಸಹಕರಿಸಿದ ಸಚಿವರು ಹಾಗೂ ಇಲಾಖೆಯ ಅಧಿಕಾರಿಗಳಿಗೆ ಧನ್ಯವಾದ. ಪ್ರತಿದಿನ ಬೆಳಗ್ಗೆ 10.25ಕ್ಕೆ ಬೆಂಗಳೂರಿನಿಂದ ಮಂಗಳೂರು ಹಾಗೂ ಕಾರವಾರಕ್ಕೆ, ಸಂಜೆ 4.15ಕ್ಕೆ ಮಂಗಳೂರು ಕಡೆಯಿಂದ ಬೆಂಗಳೂರಿಗೆ ಸಂಚರಿಸುವ ರೈಲುಗಳು ನಿಲುಗಡೆಯಾಗಲಿವೆ. ಮುಂದಿನ ದಿನಗಳಲ್ಲಿ ಹೆಚ್ಚುವರಿ ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಅಲ್ಲದೇ, ನಿಲ್ದಾಣಕ್ಕೆ ಜಾಗ ನೀಡಿದ ಹಂತನಮನೆ ಗ್ರಾಮಸ್ಥರಿಗೆ ಆಗುತ್ತಿರುವ ತೊಂದರೆ ಪರಿಹರಿಸಲು ಮೇಲ್ಸೇತುವೆ ನಿರ್ಮಿಸಲಾಗುವುದು ಎಂದರು.
ಶಾಸಕ ಸಿಮೆಂಟ್ ಮಂಜು ಮಾತನಾಡಿ, ನಾನು ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲಿ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಲೇಬೇಕು ಎಂದು ಜನರು ಒತ್ತಾಯಿಸಿದ್ದರು. ತಾಲೂಕು ಕೇಂದ್ರದಲ್ಲಿ ರೈಲು ನಿಲುಗಡೆಯಾದರೆ ಕಡಿಮೆ ಖರ್ಚಿನಲ್ಲಿ ಬೆಂಗಳೂರು, ಮಂಗಳೂರು, ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ವಿವಿಧ ಭಾಗಗಳಿಗೆ ಸಂಚರಿಸಲು ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಕೇಂದ್ರ ರೈಲ್ವೆ ಮಂತ್ರಿ ಮತ್ತು ಕೇಂದ್ರ ರೈಲ್ವೆ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ನಿಲುಗಡೆಗೆ ಅವಕಾಶ ಕಲ್ಪಿಸಲೇಬೇಕು ಎಂದು ಮನವಿ ಮಾಡಲಾಗಿತ್ತು. ಅದರನ್ವಯ ಅವರು ಕೂಡ ಪತ್ರದ ಮೂಲಕ ನಮ್ಮ ಮನವಿಗೆ ಸ್ಪಂದಿಸುವುದಾಗಿ ತಿಳಿಸಿದ್ದರು. ಅದರಂತೆ ಇಂದು ಆಲೂರಿನಲ್ಲಿ ರೈಲು ನಿಲುಗಡೆ ಮಾಡಿದೆ. ಪ್ರಧಾನಿ ಮೋದಿ ಮತ್ತು ಇದಕ್ಕೆ ಸಹಕರಿಸಿದ ಎಲ್ಲ ಅಧಿಕಾರಿಗಳಿಗೆ ಕೃತಜ್ಞತೆ ಅರ್ಪಿಸುತ್ತೇನೆ ಎಂದು ತಿಳಿಸಿದರು.
ಆಲೂರು ರೈಲ್ವೆ ನಿಲ್ದಾಣದಿಂದ ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಸಿಮೆಂಟ್ ಮಂಜು, ಮಾಜಿ ಶಾಸಕ ಎಚ್.ಕೆ.ಕುಮಾರಸ್ಚಾಮಿ ಹಾಗೂ ಜೆಡಿಎಸ್ ಮುಖಂಡರು, ಬಿಜೆಪಿ ಮಖಂಡರು, ರೈಲಿನಲ್ಲಿ ಪ್ರಯಾಣ ಬೆಳೆಸಿದ್ದು ವಿಶೇಷವಾಗಿತ್ತು. ಆಲೂರು ನಿಲ್ದಾಣದಿಂದ ಸಕಲೇಶಪುರ, ಮಂಗಳೂರು, ಕಾರವಾರದವರೆಗೆ 34 ಜನರು ಟಿಕೆಟ್ ಖರೀದಿಸಿ ಪ್ರಯಾಣಿಸಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ, ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಜಗದೀಶ್ ಕಬ್ಬಿನಹಳ್ಳಿ, ಬಿಜೆಪಿ ಮುಖಂಡರಾದ ಅಜಿತ್, ಲೋಕೇಶ್, ಹನುಮಮಂತೇಗೌಡ, ನಂಜುಂಡಪ್ಪ, ರುದ್ರೇಗೌಡ, ದೊರೆಗೌಡ, ಜೆಡಿಎಸ್ ಮುಖಂಡರಾದ ಸಿ.ವಿ.ಲಿಂಗರಾಜ್, ಪಿ.ಎಲ್.ನಿಂಗರಾಜು, ನಾಕಲಗೂಡು ನಟರಾಜ್, ಪುಟ್ಟಸ್ವಾಮಿ ನಾಯಕ ಉದ್ಯಮಿ ಶೇಖರ್, ಲಯನ್ಸ್ ಕ್ಲಬ್ ಅಧ್ಯಕ್ಷ ನವೀನ್, ಕಾರ್ಯದರ್ಶಿ ಆನಂದ್, ಕಾಂಗ್ರೆಸ್ ಮುಖಂಡ ಶಾಂತಕೃಷ್ಣ ಹಾಗೂ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.