ತುರ್ತು ಸಂಚಾರಕ್ಕೆ ರೈಲು ಸೇವೆ

Trainig
Published on

ಪ್ರಕಾಶ್ ಮಂಜೇಶ್ವರ, ಮಂಗಳೂರು

ಲಾಕ್‌ಡೌನ್ ಸಂಕಷ್ಟದ ಅವಧಿಯಲ್ಲಿ ಜನಸಾಮಾನ್ಯರು ತುರ್ತು ಸಂದರ್ಭ ಬಳಸಲು ಲಭ್ಯವಿರುವ ಏಕೈಕ ಸಾರ್ವಜನಿಕ ಸಾರಿಗೆ ರೈಲು. ಜನರು ಹೆಚ್ಚು ಬಳಸುತ್ತಿದ್ದ ಬಸ್ ಸಾರಿಗೆ ನಿರ್ಬಂಧಕ್ಕೆ ಒಳಗಾಗಿದೆ.

ಕರಾವಳಿಯಿಂದ ರಾಜಧಾನಿ ಸಂಪರ್ಕಿಸುವ ರೈಲುಗಳು ಬಹುತೇಕ ಪ್ರಯಾಣಿಕರಿಂದ ತುಂಬಿ ಸಂಚರಿಸುತ್ತಿವೆ. ಉಳಿದ ಮಾರ್ಗಗಳಲ್ಲಿ ಹಚ್ಚು ಪ್ರಯಾಣಿಕರಿಲ್ಲ. ಕಳೆದ ವರ್ಷದ ಕರೊನಾ ಲಾಕ್‌ಡೌನ್ ಘೊಷಣೆ ಬಳಿಕ ದೇಶಾದ್ಯಂತದ ಪರಿಸ್ಥಿತಿ ಜನರನ್ನು ಈಗಲೂ ದುಃಸ್ವಪ್ನದಂತೆ ಕಾಡುತ್ತಿದೆ. ಆದ್ದರಿಂದ ಈ ಬಾರಿ ಲಾಕ್‌ಡೌನ್ ಸುಳಿವು ದೊರೆತ ಕೂಡಲೇ ಉದ್ಯೋಗ ನಿಮಿತ್ತ ವಿವಿಧ ಊರು, ನಗರಗಳಲ್ಲಿ ನೆಲೆಸಿದ್ದ ಹೆಚ್ಚಿನವರು ಊರು ಸೇರಿದ್ದಾರೆ. ಇನ್ನೂ ಒಂದು ದೊಡ್ಡ ವರ್ಗಕ್ಕೆ ರೈಲು ಬಳಕೆ ರೂಢಿಯಾಗಿಲ್ಲ. ಆದ್ದರಿಂದಲೇ ಕೆಲವು ದಿನಗಳಿಂದ ಪ್ರಯಾಣಿಕರ ಕೊರತೆಯಿಂದ ರದ್ದಾಗುತ್ತಿರುವ ರೈಲುಗಳ ಪಟ್ಟಿ ವಿವಿಧ ವಲಯಗಳಿಂದ ದಿನಂಪ್ರತಿ ಪ್ರಕಟವಾಗುತ್ತಿದೆ. ಇದನ್ನು ಹೊರತುಪಡಿಸಿಯೂ ತುಂಬ ರೈಲುಗಳು ಪ್ರಯಾಣಕ್ಕೆ ಲಭ್ಯವಿವೆ.

ಪ್ರಸ್ತುತ ವೈದ್ಯಕೀಯ ಅವಶ್ಯಕತೆ, ಮನೆ ದಿನಸಿ, ತರಕಾರಿ, ಮೀನು, ಮಾಂಸ ಖರೀದಿಗೆ ನಿಗದಿಪಡಿಸಿದ ಸೀಮಿತ ಸಮಯದಲ್ಲಿ ನಿರ್ದಿಷ್ಟ ದೂರದ ತನಕ ಮಾತ್ರ ಸಂಚರಿಸಲು ಅವಕಾಶ. ಕರೊನಾ ವಾರಿಯರ್ಸ್‌ಗೆ ಒಂದಷ್ಟು ವಿನಾಯಿತಿಯಿದೆ. ಇದು ಹೊರತುಪಡಿಸಿ ಈಗ ಜನರಿಗೆ ಲಭ್ಯವಿರುವ ಸಾರ್ವಜನಿಕ ಸಾರಿಗೆ ಅಂದರೆ ರೈಲು ಮತ್ತು ವಿಮಾನ ಸೇವೆ. ಇದರಲ್ಲಿ ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರಿಗೆ ಕಡಿಮೆ ಶುಲ್ಕದಲ್ಲಿ ಸಿಗುವುದು ರೈಲು.

ರಾಜಧಾನಿ ಸಂಪರ್ಕ ಸುಲಭ: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕಾಸರಗೋಡು ಹಾಗೂ ಕಣ್ಣೂರು ಜಿಲ್ಲೆಗಳ ಜನರಿಗೆ ಬೆಂಗಳೂರು ಸಂಪರ್ಕ ಸುಲಭ. ಮಂಗಳೂರು-ಬೆಂಗಳೂರು ನಡುವೆ ಒಂದು ಹಗಲು ರೈಲು ನಿತ್ಯ ಸಂಚರಿಸುತ್ತಿವೆ. ವಾರದ ಏಳು ದಿನ ಬೆಂಗಳೂರು-ಮಂಗಳೂರು- ಕಣ್ಣೂರು (ಶ್ರವಣಬೆಳಗೊಳ ಮಾರ್ಗ) ರಾತ್ರಿ ರೈಲು, ವಾರದಲ್ಲಿ ಮೂರು ದಿನ ಮಂಗಳೂರು-ಬೆಂಗಳೂರು (ಮೈಸೂರು ಮಾರ್ಗ) ರೈಲು ಸಂಚರಿಸುತ್ತಿವೆ. ವಾರದಲ್ಲಿ ಏಳು ದಿನ ಸಿಎಸ್‌ಟಿ (ಮುಂಬೈ)- ಮಂಗಳೂರು ಜಂಕ್ಷನ್ ಪ್ರಯಾಣಿಸುತ್ತಿವೆ. ಕೇರಳ ಮಾರ್ಗದಲ್ಲಿ ಹಲವು ರೈಲುಗಳು ಓಡುತ್ತಿವೆ.

ಮುಂಗಡ ಬುಕಿಂಗ್ ಮಾತ್ರ: ಆನ್‌ಲೈನ್ ಮೂಲಕ ಅಥವಾ ರೈಲು ನಿಲ್ದಾಣಗಳಲ್ಲಿ ರಿಸರ್ವೇಶನ್ ಕೌಂಟರ್‌ನಲ್ಲಿ ಟಿಕೆಟ್ ಕಾದಿರಿಸಿದವರು ಮಾತ್ರ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶವಿದೆ. ತುರ್ತು ಸಂದರ್ಭ ರೈಲು ಅಥವಾ ವಿಮಾನಗಳಲ್ಲಿ ಪ್ರಯಾಣಿಸುವವರು ನಿಲ್ದಾಣದಲ್ಲಿಳಿದು ಟ್ಯಾಕ್ಸಿಗಳಲ್ಲಿ ಸಂಚರಿಸುವ ಸಂದರ್ಭ ಟಿಕೆಟ್‌ನ ಮೊಬೈಲ್ ಸಂದೇಶವನ್ನೇ ಪಾಸ್ ಆಗಿ ಉಪಯೋಗಿಸಬಹುದು.

ಪ್ರಸಕ್ತ ಪರಿಸ್ಥಿತಿಯಲ್ಲಿ ಪ್ರಯಾಣ ಉಚಿತವಲ್ಲ. ಆದರೆ ತುರ್ತು ಸಂದರ್ಭ ಕೋವಿಡ್ ಮಾರ್ಗಸೂಚಿ ಪಾಲನೆ ಜೊತೆಗೆ ಪ್ರಯಾಣಿಸಲು ರೈಲು ಸೂಕ್ತವಾಗಿದೆ.ಅನಿಲ್ ಹೆಗ್ಡೆಪಶ್ಚಿಮ ರೈಲ್ವೆ ಯಾತ್ರಿ ಸಂಘ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net