ಪ್ರಯಾಣಿಕ ಸ್ನೇಹಿ ವೇಳಾಪಟ್ಟಿಗೆ ಅಸ್ತು

Special train
Published on

ಮಂಗಳೂರು: ನೈಋತ್ಯ ರೈಲ್ವೆಯು ಬೆಂಗಳೂರು- ಮಂಗಳೂರು- ಬೆಂಗಳೂರು ವಿಶೇಷ ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಿದೆ.

ಸಾರ್ವಜನಿಕರ ಬೇಡಿಕೆಯಂತೆ ಬೆಂಗಳೂರಿನಿಂದ ಹೊರಡುವ ಸಮಯವನ್ನು ಮುಂದೂಡಲಾಗಿದ್ದು, ಮಂಗಳೂರಿನಿಂದ ಈ ಹಿಂದಿನ ಸಮಯಕ್ಕಿಂತ ಮುಂಚಿತವಾಗಿ ರೈಲು ಹೊರಡುವ ಸಮಯ ನಿಗದಿಪಡಿಸಲಾಗಿದೆ. ಪರಿಷ್ಕೃತ ವೇಳಾಪಟ್ಟಿಯು ನಿಯಮಿತವಾಗಿ ಸಂಚರಿಸುವ ರೈಲುಗಳ ಓಡಾಟ ಸಹಜ ಸ್ಥಿತಿಗೆ ಮರಳುವ ತನಕ ಮಾತ್ರ ಅನ್ವಯವಾಗಲಿದೆ.

ಸಂಸದ ನಳಿನ್‌ಕುಮಾರ್ ಕಟೀಲ್, ನೈಋತ್ಯ ರೈಲ್ವೆ ಬಳಕೆದಾರರ ವಲಯ ಸಲಹಾ ಸಮಿತಿ ಸದಸ್ಯ ಕುಂಜಾಲ್ ವೆಂಕಟೇಶ ಕಿಣಿ ಮತ್ತು ಪಶ್ಚಿಮ ಕರಾವಳಿ ರೈಲ್ವೆ ಯಾತ್ರಿ ಅಭಿವೃದ್ಧಿ ಸಮಿತಿ ಪ್ರತಿನಿಧಿಗಳು ಈ ಕುರಿತು ಬೇಡಿಕೆ ಮುಂದಿಟ್ಟಿದ್ದರು.

ಹೊಸ ವೇಳಾಪಟ್ಟಿಯಲ್ಲಿ ಕೆಎಸ್‌ಆರ್ ಬೆಂಗಳೂರು- ಮಂಗಳೂರು ಸೆಂಟ್ರಲ್ ಸ್ಪೆಷಲ್ ರೈಲು ಸ್ಪೆಷಲ್ ಎಕ್ಸ್‌ಪ್ರೆಸ್ (ನಂ.06515) ಬೆಂಗಳೂರಿನಿಂದ ರಾತ್ರಿ 10.30ಕ್ಕೆ ಹೊರಟು ಮಂಗಳೂರು ಸೆಂಟ್ರಲ್‌ಗೆ ಮರುದಿನ ಬೆಳಗ್ಗೆ 8.25ಕ್ಕೆ ತಲುಪಲಿದೆ. ಮಂಗಳೂರು ಸೆಂಟ್ರಲ್- ಕೆಎಸ್‌ಆರ್ ಬೆಂಗಳೂರು ಸ್ಪೆಷಲ್ ಎಕ್ಸ್‌ಪ್ರೆಸ್ (ನಂ. 06516) ಸಾಯಂಕಾಲ 7.15ಕ್ಕೆ ಪ್ರಯಾಣ ಆರಂಭಿಸಲಿದ್ದು, ಬೆಂಗಳೂರು ಸೆಂಟ್ರಲ್‌ಗೆ ಮರುದಿನ ಬೆಳಗ್ಗೆ 4.15ಕ್ಕೆ ತಲುಪಲಿದೆ. ಬೆಂಗಳೂರು- ಮಂಗಳೂರು ಸೆಂಟ್ರಲ್ ಸ್ಪೆಷಲ್ ಎಕ್ಸ್‌ಪ್ರೆಸ್ (ಮೈಸೂರು ಮಾರ್ಗ) ರೈಲು ಹೊರಡುವ ಸಮಯದಲ್ಲಿ ಬದಲಾವಣೆ ಇರುವುದಿಲ್ಲ. ಇದರ ಜೋಡಿ ಮಂಗಳೂರು ಸೆಂಟ್ರಲ್- ಬೆಂಗಳೂರು (ನಂ. 06518) ಮುಂಚಿತವಾಗಿ ಅಂದರೆ ಸಾಯಂಕಾಲ 7.15ಕ್ಕೆ ಹೊರಟು ಮರುದಿನ ಬೆಳಗ್ಗೆ 6.45ಕ್ಕೆ ಬೆಂಗಳೂರು ತಲುಪಲಿದೆ.

ಯಶವಂತಪುರ - ಕಾರವಾರ ಸ್ಪೆಷಲ್ ಎಕ್ಸ್‌ಪ್ರೆಸ್ (ನಂ.06585) ಯಶವಂತಪುರದಿಂದ ಹೊರಡುವ ಸಮಯದಲ್ಲಿ ಬದಲಾವಣೆ ಇರುವುದಿಲ್ಲ. ಆದರೆ ಹಾಸನ ಮತ್ತು ಬಂಟ್ವಾಳ ನಡುವೆ ಈ ರೈಲು ಆಗಮನ ಹಾಗೂ ನಿರ್ಗಮನ ಸಮಯದಲ್ಲಿ ತುಸು ಬದಲಾವಣೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net