ರೈಲಲ್ಲಿ ಪ್ರಯಾಣಿಸುವವರಿಗೆ ಸಿಗಲಿದೆ ಇನ್ನಷ್ಟು ಸುರಕ್ಷೆ; ನಾಳೆ ರೈಲ್ವೆ ಪ್ರಯಾಣಿಕ ಸ್ನೇಹಿ ಪೊಲೀಸಿಂಗ್​ ಚಾಲನೆ

police
Published on

ಬೆಂಗಳೂರು: ಜನಸ್ನೇಹಿ ಪೊಲೀಸಿಂಗ್ ಮಾದರಿಯಲ್ಲಿ ‘ರೈಲ್ವೆ ಪ್ರಯಾಣಿಕ ಸ್ನೇಹಿ ಪೊಲೀಸಿಂಗ್’ಗಾಗಿ ಪರಿಚಯ ಪತ್ರ (ವಿಸಿಟಿಂಗ್ ಕಾರ್ಡ್) ವಿತರಿಸುವ ವಿನೂತನ ಯೋಜನೆಗೆ ರೈಲ್ವೇ ಪೊಲೀಸ್ ಇಲಾಖೆ ಮುಂದಾಗಿದೆ.

ದೇಶ ವ್ಯಾಪಿ ರೈಲು ಸೇವೆ ಇದ್ದು, ದೂರದ ಊರುಗಳಿಗೆ ಜನರು ಪ್ರಯಾಣ ಬೆಳೆಸುತ್ತಾರೆ. ನಗರಕ್ಕೂ ಸಾವಿರಾರು ಪ್ರಯಾಣಿಕರು ಭೇಟಿ ನೀಡುತ್ತಾರೆ. ಪರಿಚಯ ಇಲ್ಲದ ಪ್ರದೇಶಕ್ಕೆ ಹೋದಾಗ ಅಥವಾ ಮಾರ್ಗಮಧ್ಯೆದಲ್ಲಿ ಸಂಕಷ್ಟಕ್ಕೆ ಸಿಲುಕಿದಾಗ ಸಹಾಯ ಮಾಡುವ ಉದ್ದೇಶಕ್ಕೆ ರಾಜ್ಯ ರೈಲ್ವೆ ಪೊಲೀಸ್ ಇಲಾಖೆಯು ಅಧಿಕಾರಿ, ಸಿಬ್ಬಂದಿ ಪರಿಚಯ ಪತ್ರ (ವಿಸಿಟಿಂಗ್ ಕಾರ್ಡ್) ವಿತರಿಸುವ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಿದೆ.

ವಿಸಿಟಿಂಗ್ ಕಾರ್ಡ್‌ನಲ್ಲಿ ರೈಲ್ವೆ ಠಾಣೆ ದೂರವಾಣಿ ಸಂಖ್ಯೆ, ಕಂಟ್ರೋಲ್ ರೂಮ್ ನಂಬರ್ ಮತ್ತು ಅಧಿಕಾರಿಗಳ ಮೊಬೈಲ್ ನಂಬರ್ ಇರಲಿದೆ. ರೈಲು ನಿಲ್ದಾಣಕ್ಕೆ ಬರುವ ಪ್ರತಿಯೊಬ್ಬ ಪ್ರಯಾಣಿಕರಿಗೂ ವಿಸಿಟಿಂಗ್ ಕಾರ್ಡ್ ವಿತರಿಸಲಿದ್ದಾರೆ. ಪ್ರಯಾಣಿಕರು ರೈಲು ಅಥವಾ ಮನೆಗೆ ಹೋಗುವಾಗ ಆಟೋ, ಕ್ಯಾಬ್ ಇನ್ನಿತರ ಸ್ಥಳಗಳಲ್ಲಿ ಸಂಕಷ್ಟಕ್ಕೆ ಅಥವಾ ಅಪರಾಧಕ್ಕೆ ತುತ್ತಾದರೆ ತಕ್ಷಣ ವಿಸಿಟಿಂಗ್ ಕಾರ್ಡ್‌ನಲ್ಲಿ ಇರುವ ಫೋನ್ ನಂಬರ್‌ಗೆ ಕರೆ ಮಾಡಿದರೆ ರೈಲ್ವೆ ಪೊಲೀಸರು ಸಹಾಯ ಮಾಡಲಿದ್ದಾರೆ. ರೈಲ್ವೆ ಕಂಟ್ರೋಲ್ ರೂಮ್​ಗೆ ದೇಶ ವ್ಯಾಪಿ ವಿಸ್ತಾರ ಇರುವ ಕಾರಣಕ್ಕೆ ಇದು ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಪ್ರಯಾಣಿಕರು ಈ ಯೋಜನೆಯ ಪ್ರಯೋಜನ ಪಡೆಯಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಳೆ ಚಾಲನೆ :

ಬುಧವಾರ ಬೆಳಗ್ಗೆ 11 ಗಂಟೆಗೆ ಯಶವಂತಪುರ ರೈಲು ನಿಲ್ದಾಣದಲ್ಲಿ ವಿಸಿಟಿಂಗ್ ಕಾರ್ಡ್ ಯೋಜನೆಗೆ ರೈಲ್ವೆ ಇಲಾಖೆ ಎಡಿಜಿಪಿ ಭಾಸ್ಕರ್ ರಾವ್ ಚಾಲನೆ ನೀಡಲಿದ್ದಾರೆ. ಎಸ್‌ಪಿ ಡಾ. ಸಿರಿಗೌರಿ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net