

ತಿಪಟೂರು: ತಿಪಟೂರು ಮಾರ್ಗವಾಗಿ ಕುಕ್ಕೆ ಸುಬ್ರಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಮೂಲಕ ಮೂರು ಜಿಲ್ಲೆಗಳ ಯಾತ್ರಾರ್ಥಿಗಳಿಗೆ ಅನುಕೂಲವಾಗಿದ್ದ ಮಂಗಳ ರೈಲು ಮಾರ್ಗ ಬದಲಿಸಿ ನಾಲ್ಕು ವರ್ಷಗಳಾದರೂ, ಯಥಾಸ್ಥಿತಿ ಜಾರಿಗೆ ತರುವಲ್ಲಿ ಜನಪ್ರತಿನಿಧಿಗಳು ಇನ್ನೂ ಮನಸ್ಸು ಮಾಡಿಲ್ಲ.
ಮಂಗಳ ಎಕ್ಸ್‌ಪ್ರೆಸ್ ವಾರದಲ್ಲಿ 3ದಿನ ಸೋಮವಾರ-ಬುಧವಾರ-ಶುಕ್ರವಾರದಂದು ಯಶವಂತಪುರದಿಂದ ಹೊರಟು ತುಮಕೂರು, ತಿಪಟೂರು, ಅರಸೀಕೆರೆ, ಹಾಸನ, ಸಕಲೇಶಪುರ ಮಾರ್ಗವಾಗಿ ಸುಬ್ರಮಣ್ಯ ರೋಡ್ ಜಂಕ್ಷನಿನಲ್ಲಿ ನಿಲುಗುಡೆಯಾಗುತ್ತಿತ್ತು. ಅಲ್ಲಿಂದ ಮಂಗಳೂರು, ಕಾರವಾರ ತಲುಪುತ್ತಿತ್ತು.
ತುಮಕೂರು, ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ಹುಳಿಯಾರು ಹಾಗೂ ಶಿವಮೊಗ್ಗ, ಭದ್ರಾವತಿ, ಕಡೂರು, ಬೀರೂರು, ಅಜ್ಜಂಪುರ, ಚನ್ನಗಿರಿ, ದಾವಣಗೆರೆ ಭಾಗದ ಯಾತ್ರಿಗಳು ಬಸ್ ಮೂಲಕ ತಿಪಟೂರು ಅಥವಾ ಅರಸೀಕೆರೆ ಜಂಕ್ಷನ್‌ನಲ್ಲಿ ರೈಲು ಹತ್ತುತ್ತಿದ್ದರು. ಇದರ ಜತೆಗೆ ಮಂಗಳೂರು ಭಾಗದ ಪ್ರತಿಷ್ಠಿತ ಶಾಲಾ-ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆ ತೆರಳಲು ಹಾಗೂ ಮಂಗಳೂರಿಗೆ ಪ್ರಯಾಣಿಸಲು ಈ ರೈಲು ಪ್ರಮುಖ ಸಂಪರ್ಕ ಕೊಂಡಿಯಾಗಿತ್ತು.
ರಸ್ತೆ ಸಾರಿಗೆಗೆ ಹೋಲಿಸಿದರೆ ರೈಲು ಪ್ರಯಾಣ ದರ ಕಡಿಮೆ. ಮಂಗಳ ರೈಲು ಮಾರ್ಗ ಬದಲಿಸಿರುವುದರಿಂದ ಪುಣ್ಯಕ್ಷೇತ್ರಕ್ಕೆ ತೆರಳುವವರಿಗೆ ಆರ್ಥಿಕ ಹೊರೆಬೀಳುತ್ತಿದೆ. ಈ ಬಗ್ಗೆ ಅಧಿಕಾರಿಗಳನ್ನು ಸಂಪರ್ಕಿಸಲು ವಿಜಯವಾಣಿ ಯತ್ನಿಸಿದಾಗ ಅಧಿಕಾರಿಗಳು ಉತ್ತರಿಸಲು ನಿರಾಕರಿಸಿದರು. ಇನ್ನಾದರೂ ಜಿಲ್ಲೆಯ ಜನಪ್ರತಿನಿಧಿಗಳು ಇತ್ತ ಗಮನಹರಿಸಬೇಕಿದೆ.
ಪ್ರಯಾಣದ ಅವಧಿ ಕಡಿಮೆ: ಯಶವಂತಪುರ-ಹಾಸನ ಜೋಡಿ ಮಾರ್ಗ ಉದ್ಘಾಟನೆಗೊಂಡ ಬಳಿಕ ಹಾಸನ ಮಾರ್ಗವಾಗಿ ಮಂಗಳೂರಿನ ಪ್ರಯಾಣದ ಅವಧಿ 4 ತಾಸು ಕಡಿಮೆಯಾಗಿದೆ. ಇದಲ್ಲದೆ ಮುಂಬೈನಿಂದ ಬರುವ ಚಾಲುಕ್ಯ ಎಕ್ಸ್‌ಪ್ರೆಸ್ ರೈಲಿನ ಸಮಯದಲ್ಲಿ ವ್ಯತ್ಯಯಕ್ಕೆ ಮಂಗಳ ರೈಲು ಕಾರಣವಾಗಿತ್ತು. ಹಾಗಾಗಿ, ರೈಲುಗಾಡಿಯ ಮಾರ್ಗ ಬದಲಾಯಿಸಲಾಯಿತು.
ರೈಲ್ವೆ ಇಲಾಖೆಯ ನಿಯಮಗಳು ತುಂಬ ವಿಭಿನ್ನ. ಅಂದು ನಾನು ವಿಪಕ್ಷದಲ್ಲಿದ್ದ ಕಾರಣ ಸಂಸತ್ತಿನಲ್ಲಿ ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಸಲು ಸಾಧ್ಯವಾಗಲಿಲ್ಲ. ಹಾಲಿ ಸಂಸದರು ಮನಸ್ಸು ಮಾಡಿದರೆ ರೈಲಿನ ಮಾರ್ಗ ಬದಲಾವಣೆ ಸಾಧ್ಯ. ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಂಸದ ತುಮಕೂರು ಯಶವಂತಪುರದಿಂದ ಹಾಸನ ಮಾರ್ಗವಾಗಿ ಸಂಚರಿಸುವ ಮಂಗಳ ಎಕ್ಸ್‌ಪ್ರೆಸ್ ರೈಲಿಗೆ ಲಿಂಕ್ ಮಾಡುವಂತೆ ಯಶವಂತಪುರ-ತುಮಕೂರು-ಅರಸೀಕೆರೆ ಮಾರ್ಗವಾಗಿ ಪ್ರತ್ಯೇಕ ರೈಲು ಸಂಚಾರ ಆರಂಭಿಸಬೇಕು. ಇದರಿಂದ ತುಮಕೂರು ನಗರ ಮತ್ತು ಜಿಲ್ಲೆಯ ಎಲ್ಲ ತಾಲೂಕುಗಳು ಹಾಗೂ ನೆರೆಯ ಜಿಲ್ಲೆಯ ಪ್ರವಾಸಿಗರಿಗೆ ಧರ್ಮಸ್ಥಳ, ಕುಕ್ಕೆ, ಶೃಂಗೇರಿ ಮತ್ತಿತರ ಯಾತ್ರಾಸ್ಥಳಗಳಿಗೆ ಅನುಕೂಲವಾಗಲಿದೆ. ಜನಪ್ರತಿನಿಧಿಗಳು ಹಾಗೂ ಇಲಾಖೆ ಅಧಿಕಾರಿಗಳಿಗೆ ವೇದಿಕೆ ನಿರಂತರ ಮನವಿ ಮಾಡುತ್ತಲೇ ಇದೆ. ಕರುಣಂ ರಮೇಶ್, ಪ್ರಧಾನ ಕಾರ್ಯದರ್ಶಿ, ತುಮಕೂರು-ಬೆಂಗಳೂರು ರೈಲ್ವೇ ಪ್ರಯಾಣಿಕರ ವೇದಿಕೆ ತುಮಕೂರು ತಿಪಟೂರು ಮಾರ್ಗವಾಗಿ ಕುಕ್ಕೆ ಸುಬ್ರಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಕುರಿತು ಮನವಿ ಬಂದರೆ ಕೇಂದ್ರ ರೈಲ್ವೆ ಮಂತ್ರಿಗಳ ಗಮನಕ್ಕೆ ತಂದು, ನನ್ನಿಂದ ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ. ಬಿ.ಸಿ.ನಾಗೇಶ್, ತಿಪಟೂರು ಶಾಸಕ