ರಿಯಲ್ ಸ್ಫೋಟವೇ ಆಗಿದ್ಯಲ್ಲ: ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್ ವ್ಯಂಗ್ಯ

S.C.Madhuchandan (2)
Published on

ಮಂಡ್ಯ: ಗಣಿಗಾರಿಕೆಯಿಂದ ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಗೆ ಅಪಾಯವಿದೆ ಎನ್ನುವ ಸ್ಪಷ್ಟ ವರದಿಯನ್ನು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಿಂದೆಯೇ ನೀಡಿದೆ. ಇದಲ್ಲದೆ ಹಲವು ವರ್ಷದಿಂದ ಡ್ಯಾಂ ಸುತ್ತಮುತ್ತ ರಿಯಲ್ ಸ್ಫೋಟ ಮಾಡಿ ಸಮಸ್ಯೆ ಸೃಷ್ಟಿಸಿರುವುದು ಜಗಜ್ಜಾಹೀರಾಗಿದೆ. ಹೀಗಿರುವಾಗ ಪ್ರಾಯೋಗಿಕವಾಗಿ ಪರೀಕ್ಷೆ ಮಾಡುವ ಅವಶ್ಯಕತೆಯಾದರೂ ಏನಿದೆ ಎಂದು ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್ ಪ್ರಶ್ನಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೆಆರ್‌ಎಸ್ ಜಲಾಶಯಕ್ಕೆ ಗಣಿಗಾರಿಕೆಯಿಂದ ಅಪಾಯವಿದೆಯೇ ಎಂಬುದನ್ನು ಪತ್ತೆ ಹಚ್ಚಲು ಜು.25ರಿಂದ ಪ್ರಾಯೋಗಿಕ ಸ್ಫೋಟ ನಡೆಸಲು ಜಿಲ್ಲಾಡಳಿತ ಮತ್ತು ಸರ್ಕಾರ ಮುಂದಾಗಿರುವುದು ಸರಿಯಾದ ಕ್ರಮವಲ್ಲ. ಗಣಿಗಾರಿಕೆಯಿಂದ ಡ್ಯಾಂ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಗೆ ಅಪಾಯವಿದೆ ಎನ್ನುವ ಆತಂಕ ಹಿಂದಿನಿಂದಲೂ ಇದೆ. ಈ ಬಗ್ಗೆ ಹಲವಾರು ಸಂಘಟನೆಗಳು ಹೋರಾಟ ನಡೆಸುತ್ತಿವೆ. ಇದಲ್ಲದೆ ಬೇಬಿ ಬೆಟ್ಟದ ಪ್ರದೇಶದಲ್ಲಿ 10.5 ಕಿ.ಮೀ ವ್ಯಾಪ್ತಿಯಲ್ಲಿ ಭಾರೀ ಸ್ಫೋಟಕ ಬಳಸುವುದರಿಂದ ಕಂಪನವಾಗಿರುವ ಬಗ್ಗೆ ತನಿಖೆಯಿಂದ ವರದಿಯಾಗಿದೆ ಎಂದಿದ್ದಾರೆ.

ಕನ್ನಂಬಾಡಿ ಅಣ್ಣೆಕಟ್ಟೆಗೆ ಗಣಿಗಾರಿಕೆಯಿಂದ ಅಪಾಯವಿದೆ ಎಂಬುದನ್ನು ಪತ್ತೆಹಚ್ಚಲು 2019ರ ಜನವರಿಯಲ್ಲಿ ತಜ್ಞರ ತಂಡ ಆಗಮಿಸಿತ್ತು. ಮತ್ತೆ 25 ರಿಂದ 31ರವರೆಗೆ ತಜ್ಞರ ತಂಡ ಪ್ರಾಯೋಗಿಕ ಸ್ಫೋಟ ನಡೆಸಲು ಮುಂದಾಗಿರುವುದು ಸರಿಯಲ್ಲ. ಸಮಸ್ಯೆಯಾಗಲಿದೆ ಎನ್ನುವುದು ಖಚಿತವಾಗಿರುವುದರಿಂದ ಯಾರ ಒತ್ತಾಯಕ್ಕೆ ಪರೀಕ್ಷೆ ಮಾಡಿಸುತ್ತಿದ್ದೀರಿ. ಆದ್ದರಿಂದ ಟ್ರಯಲ್ ಬ್ಲಾಸ್ಟ್ ಮಾಡಬಾರದು. ಅಂತೆಯೇ ಡ್ಯಾಂ ಸುತ್ತಮುತ್ತ ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಬೇಕು. ಇಲ್ಲದಿದ್ದರೆ ಪ್ರಾಯೋಗಿಕ ಸ್ಫೋಟ ನಡೆಸಲು ಬರುವ ತಂಡದ ವಿರುದ್ಧ ಗೋಬ್ಯಾಕ್ ಚಳವಳಿ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net