ದುರಂತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಿ

19Manju12
ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಗೆ ಸೋಮವಾರ ಎಸ್.ಕೆ.ವಂಟಿಗೋಡಿ ಭೇಟಿ ನೀಡಿ ಪರಿಶೀಲಿಸಿದರು. ಶ್ರವಣ ನಾಯಕ, ಬಸವರಾಜ ನಾಗರಾಳ ಇತರರಿದ್ದರು.
Published on

ಬೆಳಗಾವಿ: ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಯ ಅಗ್ನಿ ದುರಂತದಂಥ ಪ್ರಕರಣ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಎಸ್.ಕೆ.ವಂಟಿಗೋಡಿ ಸೂಚನೆ ನೀಡಿದರು.

ಬೆಳಗಾವಿ ತಾಲೂಕಿನ ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಗೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.

ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಯ ಅಗ್ನಿ ದುರಂತದ ಪ್ರಕರಣದ ಕುರಿತು ಪತ್ರಿಕೆಗಳಲ್ಲಿ ಸಾಕಷ್ಟು ಭಿನ್ನವಾದ ಅಭಿಪ್ರಾಯಗಳು ಪ್ರಕಟವಾಗಿವೆ. ಈ ನಿಟ್ಟಿನಲ್ಲಿ ಮಾನವ ಹಕ್ಕುಗಳ ಆಯೋಗದದಿಂದ ನಿಖರವಾದ ವರದಿ ಆಧರಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ಸ್ಪಷ್ಟ ವರದಿ ಸಲ್ಲಿಸಬೇಕು ಎಂದು ತಿಳಿಸಿದರು.

ಕಾರ್ಮಿಕರಿಗೆ ಅಗತ್ಯ ರಕ್ಷಣಾತ್ಮಕ ಪರಿಕರಗಳನ್ನು ನೀಡಿರುವ ಬಗ್ಗೆ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಬೇಕು. ಕಾರ್ಮಿಕರು ಗಾಯಗೊಂಡಲ್ಲಿ ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲು ವಾಹನ ವ್ಯವಸ್ಥೆ ಮತ್ತು ತುರ್ತು ವೈದ್ಯಕೀಯ ಚಿಕಿತ್ಸೆ ಒದಗಿಸಲು ಮೆಡ್ ಕಿಟ್ ಕಡ್ಡಾಯವಾಗಿ ಇರಬೇಕು. ಕಾರ್ಮಿಕ ಇಲಾಖೆ ಅಧಿಕಾರಿಗಳು ನಿರಂತರ ಪರಿಶೀಲನೆ ನಡೆಸಬೇಕು. ಇದರಿಂದ ಸಂಭವಿಸಬಹುದಾದ ದುರಂತ ತಪ್ಪಿಸಬಹುದು ಎಂದು ತಿಳಿಸಿದರು.

ಅಪರ ಜಿಲ್ಲಾಧಿಕಾರಿ ವಿಜಯಕುಮಾರ ಹೊನಕೇರಿ, ಬೆಳಗಾವಿ ಉಪ ವಿಭಾಗಾಧಿಕಾರಿ ಶ್ರವಣ ನಾಯಕ, ಬೆಳಗಾವಿ ತಹಸೀಲ್ದಾರ್ ಬಸವರಾಜ ನಾಗರಾಳ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸೂರ್ಯನಾರಾಯಣ ಭಟ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net