

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಒಂದು ಮುಕ್ಕಾಲು ವರ್ಷದಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಒಟ್ಟು 53 ಜನ ಪ್ರಾಣ ಕಳೆದುಕೊಂಡಿದ್ದಾರೆ.
ಪೊಲೀಸ್ ಇಲಾಖೆ ಮಾಹಿತಿಯಂತೆ 2023 ರಲ್ಲಿ 1029 ಅಪಘಾತಗಳು ಸಂಭವಿಸಿದ್ದು, 251 ಜನ ಮೃತಪಟ್ಟಿದ್ದರು. 1,737 ಜನ ಗಾಯಗೊಂಡಿದ್ದರು. 2024 ರಲ್ಲಿ 974 ಅಪಘಾತಗಳು ಸಂಭವಿಸಿದ್ದು, 264 ಜನ ಮೃತಪಟ್ಟಿದ್ದರು. 1,622 ಜನ ಗಾಯಗೊಂಡಿದ್ದರು. ಅದರಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿದ 33 ಅಪಘಾತಗಳು ಸಂಭವಿಸಿದ್ದು, 18 ಜನ ಮೃತಪಟ್ಟು , 15 ಜನ ಗಾಯಗೊಂಡಿದ್ದರು. 2025 ರಲ್ಲಿ 9 ತಿಂಗಳುಗಳಲ್ಲಿ 592 ಅಪಘಾತಗಳು ಸಂಭವಿಸಿದ್ದು, 179 ಜನ ಮೃತಪಟ್ಟಿದ್ದಾರೆ. 1,169 ಜನ ಗಾಯಗೊಂಡಿದ್ದಾರೆ. ಹೆಲ್ಮೆಟ್ ಇಲ್ಲದೇ ಬೈಕ್ ಚಲಾಯಿಸಿ 64 ಅಪಘಾತಗಳು ಸಂಭವಿಸಿದ್ದು, 35 ಜನ ಮೃತಪಟ್ಟಿದ್ದಾರೆ. 29 ಜನ ಗಾಯಗೊಂಡಿದ್ದಾರೆ.
467 ಡಿಎಲ್ ರದ್ದು:
ಪೊಲೀಸ್ ಇಲಾಖೆ ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ, ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ದಂಡ ವಿಽಸುವ ಹಾಗೂ ಚಾಲನಾ ಪರವಾನಗಿ (ಡಿಎಲ್) ರದ್ದು ಮಾಡುವ ಕಾರ್ಯವನ್ನು ಕೈಗೊಳ್ಳಲಾಗಿದೆ. ಆದರೂ ಜನ ಎಚ್ಚರಗೊಳ್ಳುತ್ತಿಲ್ಲ ಎಂಬುದು ಪೊಲೀಸ್ ಇಲಾಖೆಯ ಗೋಳು.
ಸಂಚಾರ ನಿಯಮ ಉಲ್ಲಂಘನೆ ಬಗ್ಗೆ 2023 ರಲ್ಲಿ 2.16 ಕೋಟಿ ರೂ., 2024 ರಲ್ಲಿ 1.96 ಕೋಟಿ ರೂ, 2025 ರಲ್ಲಿ 1.68 ಕೋಟಿ ರೂ. ಸೇರಿ ಒಟ್ಟು 5.80 ಕೋಟಿ ರೂ.ದಂಡ ವಸೂಲಿ ಮಾಡಲಾಗಿದೆ. ವೇಗದ ಮಿತಿ ಹೆಚ್ಚಿ ವಾಹನ ಚಾಲನೆ ಕುರಿತು ಮೂರು ವರ್ಷದಲ್ಲಿ 1.02 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಿದ 745 ಪ್ರಕರಣಗಳನ್ನು ದಾಖಲಿಸಿ 34.02 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ. 2023 ರಲ್ಲಿ 103, 2024 ರಲ್ಲಿ 214 ಹಾಗೂ ಈ ವರ್ಷ 150 ಜನರ ಡಿಎಲ್ ರದ್ದು ಮಾಡಲು ಕ್ರಮ ವಹಿಸಲಾಗಿದೆ ಎಂದು ಎಸ್‌ಪಿ ಕಚೇರಿಯ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲೂ ಎಂಟಿಎಂಎಸ್ ಜಾರಿ ಜಿಲ್ಲೆಯಲ್ಲೂ ಸಂಯೋಜಿತ ಸಂಚಾರ ನಿರ್ವಹಣಾ ವ್ಯವಸ್ಥೆ (ಎಂಟಿಎಂಎಸ್) ವ್ಯವಸ್ಥೆಯನ್ನು ಶೀಘ್ರದಲ್ಲಿ ಜಾರಿ ಮಾಡಲಾಗುವುದು ಎಂದು ಎಸ್‌ಪಿ ದೀಪನ್ ಎಂ.ಎನ್.ತಿಳಿಸಿದರು. ಸಂಚಾರ ಜಾಗೃತಿ ಕುರಿತು ಸೋಮವಾರ ನಗರದಲ್ಲಿ ಆಯೋಜಿಸಿದ್ದ ಬೈಕ್ ರ‍್ಯಾಲಿಗೆ ಚಾಲನೆ ನೀಡಿ, ಸ್ವತಃ ನಗರದೆಲ್ಲೆಡೆ ಹಾಗೂ ಚಿತ್ತಾಕುಲಾ ಗ್ರಾಪಂ ವ್ಯಾಪ್ತಿಯಲ್ಲಿ ಬೈಕ್ ಚಾಲನೆ ಮಾಡಿಕೊಂಡು ತೆರಳಿದರು. ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಮುಖ ಹಾಗೂ ನಂಬರ್ ಪ್ಲೇಟ್ ಗುರುತಿಸುವ ಎನ್‌ಪಿಆರ್ ಕ್ಯಾಮರಾಗಳನ್ನು ಜಿಲ್ಲೆಯಲ್ಲೂ ಅಳವಡಿಸಲಾಗುವುದು. ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡುವವರನ್ನು ಗುರುತಿಸುವ ಯಂತ್ರಗಳನ್ನು ಶೀಘ್ರ ವಿವಿಧ ಠಾಣೆಗಳಿಗೆ ಒದಗಿಸಲಾಗುವುದು ಎಂದು ತಿಳಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಈ ವರ್ಷ ಅಪಘಾತಗಳ ಸಂಖ್ಯೆ ಕಡಿಮೆಯಾದರೂ ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸಿ ಅಪಘಾತದಲ್ಲಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಿದೆ. ರಸ್ತೆ ಅವ್ಯವಸ್ಥೆ ಹಾಗೂ ಅವುಗಳನ್ನು ದುರಸ್ತಿ ಮಾಡುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯಲಾಗಿದೆ. ರಸ್ತೆ ಸುರಕ್ಷತಾ ಸಭೆಗಳಲ್ಲಿ ಚರ್ಚಿಸಲಾಗಿದೆ. ಸದ್ಯ ಜಿಲ್ಲೆಯ ಎಲ್ಲ 12 ತಾಲೂಕುಗಳಲ್ಲಿ ಹೆಲ್ಮೆಟ್ ಧರಿಸುವ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸಲಾಗುವುದು. ನಂತರ ಕಟ್ಟುನಿಟ್ಟಾಗಿ ದಂಡ ಆಕರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ಹೆಚ್ಚುವರಿ ಎಸ್‌ಪಿ ಕೃಷ್ಣಮೂರ್ತಿ, ಡಿವೈಎಸ್‌ಪಿಗಳಾದ ಗಿರೀಶ ಎಸ್.ವಿ., ಬಿ.ಅಶ್ವಿನಿ, ರಾಘವೇಂದ್ರ ನಾಯ್ಕ ಇದ್ದರು.
ಕೂದಲು ಉದುರಿದರೆ ಕಸಿ ಮಾಡಿಸಬಹುದು. ಜೀವ ಹೋದರೆ ಮತ್ತೆ ತರಲು ಸಾಧ್ಯವಿಲ್ಲ. 10 ಬಾರಿ ಅಪಘಾತ ಸಂಭವಿಸಿಲ್ಲ ಎಂದು ನಿರ್ಲಕ್ಷ್ಯ ಮಾಡುವುದು ಸರಿಯಲ್ಲ. ಕೆಲವೇ ಕ್ಷಣಗಳಲ್ಲಿ ಸಂಭವಿಸುವ ಅಪಘಾತ ಜೀವ ಬಲಿ ಪಡೆಯಬಹುದು. ಇದರಿಂದ ಗುಣಮಟ್ಟದ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು. ದೀಪನ್ ಎಂ.ಎನ್. ಎಸ್‌ಪಿ, ಉತ್ತರ ಕನ್ನಡ