ಹೊಸಕೋಟೆಯಲ್ಲಿ ಟ್ರಾಫಿಕ್ ಕಿರಿಕಿರಿ

Manjunath-HSK-01
ಹೊಸಕೋಟೆ ನಗರದ ಹಳೆ ಬಸ್ ನಿಲ್ದಾಣ ರಸ್ತೆಯ ಎರಡೂ ಕಡೆ ವಾಹನಗಳ ಅನಧಿಕೃತ ಪಾರ್ಕಿಂಗ್ ದೃಶ್ಯ.
Published on

*ಸಾರಿಗೆ ಬಸ್ ಪ್ರಯಾಣಿಕರ ಪರದಾಟ
*ವಾಹನ ಸಂಚಾರಕ್ಕೂ ಅಡೆತಡೆ

ಮಂಜುನಾಥ್, ಹೊಸಕೋಟೆ
ರಾಜಧಾನಿ ಬೆಂಗಳೂರಿಗೆ ಹೊಂದಿಕೊಂಡಿರುವ ಹಾಗೂ ಚೆನ್ನೈ ಸೂಪರ್ ಎಕ್ಸ್ ಪ್ರೆಸ್ ಹೈವೆ ಹಬ್ ಆಗಲಿರುವ ಹೊಸಕೋಟೆಯಲ್ಲಿ ದಿನೆ ದಿನೇ ಟ್ರಾಫಿಕ್ ಸಮಸ್ಯೆ ಬಿಗಡಾಯಿಸುತ್ತಿದ್ದು, ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ. ಇದರೊಂದಿಗೆ ಬಿಎಂಟಿಸಿ ಬಸ್‌ಗಳು ನಿಗದಿತ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಾಗದೆ ಪ್ರಯಾಣಿಕರು ಪರದಾಡುವಂತಾಗಿದೆ.
ಅಡ್ಡಾದಿಡ್ಡಿ ವಾಹನಗಳ ನಿಲುಗಡೆ, ಸಂಚಾರ ನಿಯಮ ಉಲ್ಲಂಘನೆ, ಸಂಚಾರ ಪೊಲೀಸರ ನಿರ್ಲಕ್ಷ್ಯ ಮತ್ತಿತರ ಕಾರಣದಿಂದಾಗಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಉಲ್ಭಣಿಸುತ್ತಿದೆ. ನಗರದಲ್ಲಿ ಮಿನಿ ವಿಧಾನ ಸೌಧವಿರುವ ಹಳೆಯ ಬಸ್ ನಿಲ್ದಾಣಕ್ಕೆ ಬಿಎಂಟಿಸಿ ಬಸ್‌ಗಳು ಬರುವುದೇ ಇಲ್ಲ, ಬಸ್ ನಿಲ್ದಾಣ ರಸ್ತೆಯ ಎರಡು ಕಡೆ ಅವೈಜ್ಞಾನಿಕವಾಗಿ ಕಾರು, ಟೆಂಪೊ, ಲಾರಿಗಳು ನಿಲ್ಲಿಸಲಾಗಿರುತ್ತವೆ, ಬಿಎಂಟಿಸಿ ಬಸ್‌ಗಳು ಹಳೆಯ ಬಸ್ ನಿಲ್ದಾಣದಲ್ಲಿ ತಿರುವು ಪಡೆಯಲು ಸಾಧ್ಯವಾಗದೆ ಇರುವುದರಿಂದ ಹಳೆಯ ಬಸ್ ನಿಲ್ದಾಣಕ್ಕೆ ಬಸ್‌ಗಳು ಹೋಗಲು ಸಾಧ್ಯವಿಲ್ಲವಾಗಿದೆ. ಅಡ್ಡಾದಿಡ್ಡಿ ವಾಹನ ನಿಲುಗಡೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ದೂರಾಗಿದೆ. ನಗರದ ಶಕ್ತಿ ಕೇಂದ್ರವಾಗಿರುವ ಹಳೆಯ ಬಸ್ ನಿಲ್ದಾಣದ ಅಕ್ಕ ಪಕ್ಕದಲ್ಲಿ ತಾಲೂಕು ಕಚೇರಿ, ನಗರಸಭೆ ಕಾರ್ಯಾಲಯ, ಉಪನೋಂದಣಾಧಿಕಾರಿ ಕಚೇರಿ, ರಾಷ್ಟ್ರೀಕೃತ ಬ್ಯಾಂಕ್‌ಗಳಿದ್ದು, ಕೆ.ಆರ್.ರಸ್ತೆ ಹಾಗೂ ಹಳೆಯ ಬಸ್ ನಿಲ್ದಾಣದಲ್ಲಿ ಜನಸಂದಣಿ ಜತೆ ವಾಹನ ದಟ್ಟನೆಯೂ ಇದೆ. ಈ ಭಾಗದಲ್ಲಿ ಕೆಲಸಗಳಿಗೆ ಆಗಮಿಸುವವರು ವಾಹನಗಳನ್ನು ರಸ್ತೆಯ ಪಕ್ಕದಲ್ಲಿ ನಿಲ್ಲಿಸಿ ತಮ್ಮ ಕೆಲಸಗಳಿಗೆ ತೆರಳುತ್ತಾರೆ.

ಠಾಣೆಯಲ್ಲಿ ಸಿಬ್ಬಂದಿ ಕೊರತೆ ಹೊಸಕೋಟೆಯಲ್ಲಿ ತೆರೆಯಲಾಗಿರುವ ಟ್ರಾಫಿಕ್ ಪೊಲೀಸ್ ಠಾಣೆ ಕೇವಲ ನಗರದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗೆ ಸೀಮಿತವಾಗಿದ್ದು, ಹೆದ್ದಾರಿಗಳಲ್ಲಿ ಸಂಭವಿಸುವ ಅಫಘಾತಗಳ ಮಾಹಿತಿ ಹಾಗೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲು ಮತ್ತು ಪ್ರಕರಣ ದಾಖಲು ಮಾಡಲು ಹಾಗೂ ಗಣ್ಯರು ಸಂಚರಿಸುವ ಸಂದರ್ಭದಲ್ಲಿ ಟ್ರಾಫಿಕ್ ಕ್ಲಿಯರೆನ್ಸ್‌ಗೆ ಸೀಮಿತಗೊಳಿಸಲಾಗಿದೆ, ಸುಮಾರು 44 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಹಾಗೂ 44 ಕಿ.ಮೀ ರಾಜ್ಯ ಹೆದ್ದಾರಿ ನಿರ್ವಹಣೆಗೆ ಕೇವಲ 18 ಸಿಬ್ಬಂದಿ ನೇಮಕ ಮಾಡಲಾಗಿದ್ದು ಠಾಣೆಯಲ್ಲಿ ಸಿಬ್ಬಂದಿ ಕೊರತೆ ಎದುರಾಗಿದೆ.

ಈ ಮೊದಲು ಹೊಸಕೋಟೆಗೆ ಆಗಮಿಸುತ್ತಿದ್ದ ಬಿಎಂಟಿಸಿ ಬಸ್‌ಗಳು ಹಳೆಯ ಬಸ್ ನಿಲ್ದಾಣಕ್ಕೆ ಬರುತಿದ್ದವು. ಆದರೆ ಈಗ ನಗರದ ರಾಷ್ಟ್ರೀಯ ಹೆದ್ದಾರಿ 75ರ ಕೋರ್ಟ್ ವೃತ್ತದಲ್ಲಿ ನಿಲ್ಲಿಸುತ್ತಿದ್ದು ಪ್ರಯಾಣಿಕರನ್ನು ಅಲ್ಲಿಯೇ ಇಳಿಸಲಾಗುತ್ತಿದೆ. ಇದರಿಂದ ಆಟೋಗಳಲ್ಲಿ ಸಂಚರಿಸಬೇಕಾಗಿದೆ. ಹೊಸಕೋಟೆ ನಗರದೊಳಗೆ ಹೋಗಲು ಬಾರಿ ಸಮಸ್ಯೆ ಆಗುತ್ತಿದೆ, ಆಟೊದಲ್ಲಿ ಹೋಗಬೇಕಾದರೆ ಬಿಎಂಟಿಸಿ ಬಸ್‌ಗಳನ್ನು ನಗರದ ಹಳೆ ಬಸ್ ನಿಲ್ದಾಣಕ್ಕೆ ಬರುವಂತೆ ವ್ಯವಸ್ಥೆ ಮಾಡಬೇಕು ಇದಕ್ಕೆ ಇಲ್ಲಿನ ಟ್ರಾಫಿಕ್ ಸಮಸ್ಯೆ ಬಗೆಹರಿಸಬೇಕು.

ತೋಟಿ ಜಯರಾಮ್, ಹೊಸಕೋಟೆ ನಿವಾಸಿ.

ಬಸ್ ಸಂಚಾರದ ಬಗ್ಗೆ ಪೊಲೀಸರಿಗೆ ಪತ್ರ ಬರೆಯುವಂತೆ ಡಿಪೊ ವ್ಯವಸ್ಥಾಪಕರಿಗೆ ಹಲವು ಬಾರಿ ಮನವಿ ಮಾಡಲಾಗಿದೆ. ಜತೆಗೆ ಸಂಚಾರ ಪೊಲೀಸರಿಗೆ ಟ್ರಾಫಿಕ್ ಸಮಸ್ಯೆ ಸರಿಪಡಿಸುವಂತೆ ಹಲವು ಬಾರಿ ದೂರು ನೀಡಲಾಗಿದೆ. ಆದರೆ ಇದುವರೆಗೆ ಯಾವುದೇ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿಲ್ಲ.
ಬಿಎಂಟಿಸಿ ಬಸ್ ಚಾಲಕರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net