ಟೋಲ್ ತಪ್ಪಿಸಲು ವಾಹನಗಳ ಅಡ್ಡದಾರಿ

 ರೈಲ್ವೆ ಗೊಲ್ಲಹಳ್ಳಿ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು.
ರೈಲ್ವೆ ಗೊಲ್ಲಹಳ್ಳಿ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳು.
Published on

ರೈಲ್ವೇಗೊಲ್ಲಹಳ್ಳಿ ಬಳಿ ಟ್ರಾಫಿಕ್ ಜಾಮ್

ಸ್ಥಳೀಯರ ಪರದಾಟ


ವಿಜಯವಾಣಿ ಸುದ್ದಿಜಾಲ ಬೆಂ.ಗ್ರಾಮಾಂತರ/ಮಧುರೆ
ನೆಲಮಂಗಲ ಹಾಗೂ ಹುಲಿಕುಂಟೆಯಲ್ಲಿನ ಟೋಲ್ ತಪ್ಪಿಸಲು ಅಡ್ಡದಾರಿ ಹಿಡಿದಿರುವ ಲಾರಿ ಮತ್ತಿತರ ವಾಹನ ಸವಾರರು ರೈಲ್ವೇಗೊಲ್ಲಹಳ್ಳಿ ಭಾಗದಲ್ಲಿ ಟ್ರಾಫಿಕ್ ಕಿರಿಕಿರಿಗೆ ಕಾರಣವಾಗಿದ್ದಾರೆ.
ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ಭಾಗಕ್ಕೆ ಸಂಪರ್ಕ ಕಲ್ಪಿಸುವ ರೈಲ್ವೇಗೊಲ್ಲಹಳ್ಳಿ ಮಾರ್ಗದಲ್ಲಿ ವಾಹನಗಳ ಸಂಚಾರ ವಿಪರೀತವಾಗಿದ್ದು ಸ್ಥಳೀಯರು ಕೇವಲ ಎರಡ್ಮೂರು ಕಿ.ಮೀ ದಾಟಲು ಗಂಟೆಗಟ್ಟಲೆ ವಾಹನದಟ್ಟಣೆಯಲ್ಲಿ ಸಿಲುಕಿ ಪರದಾಡುವಂತಾಗಿದೆ.
ಸುಗಮ ವಾಹನ ಸಂಚಾರಕ್ಕೆ ಹಾಗೂ ಲಾರಿ ಹಾಗೂ ಟ್ರಕ್‌ಗಳಂಥ ಬೃಹತ್ ವಾಹನಗಳ ಸಂಚಾರಕ್ಕಾಗಿಯೇ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಲಾರಿ ಹಾಗೂ ಟ್ರಕ್‌ನಂಥ ಬೃಹತ್ ವಾಹನಗಳ ಚಾಲಕರೂ ಹುಲಿಕುಂಟೆ ಹಾಗೂ ನೆಲಮಂಗಲ ಟೋಲ್‌ನಲ್ಲಿ ಹಣ ಉಳಿಸಲು ರೈಲ್ವೇಗೊಲ್ಲಹಳ್ಳಿ ಮಾರ್ಗ ಹಿಡಿದಿದ್ದಾರೆ ಎನ್ನಲಾಗಿದೆ. ಇದರ ಜತೆಗೆ ಕಾರು, ಜೀಪು ಮತ್ತಿತರ ವಾಹನ ಸವಾರರು ಇದೇ ಮಾರ್ಗದಲ್ಲಿ ಹೆಚ್ಚು ಸಂಚರಿಸುತ್ತಿದ್ದು ಪ್ರತಿನಿತ್ಯ ಈ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಸಾಮಾನ್ಯವಾಗಿದೆ.
ಕೆಡಿಪಿ ಸಭೆಯಲ್ಲೂ ಚರ್ಚೆ: ರೈಲ್ವೇಗೊಳ್ಳಹಳ್ಳಿ ಮಾರ್ಗದಲ್ಲಿ ಟ್ರಾಫಿಕ್ ಬವಣೆ ಬಗ್ಗೆ ಕಳೆದ ತಿಂಗಳು ನಡೆದ ಕೆಡಿಪಿ ಸಭೆಯಲ್ಲೂ ಪ್ರಸ್ತಾಪವಾಗಿತ್ತು. ದೊಡ್ಡಬಳ್ಳಾಪುರ ಶಾಸಕ ಧೀರಜ್‌ಮುನಿರಾಜು ಹಾಗೂ ನೆಲಮಂಗಲ ಶಾಸಕ ಶ್ರೀನಿವಾಸ್ ಈ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಸಮಸ್ಯೆ ಆಲಿಸಿದ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ದೊಡ್ಡ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರುವ ಸಂಬಂಧ ಅಧಿಕಾರಿಗಳು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸೂಚನೆ ನೀಡಿದ್ದರು. ಆದರೆ ಇದರುವರೆಗೆ ಯಾರೂ ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪರಿಣಾಮವಾಗಿ ಪ್ರತಿನಿತ್ಯ ಈ ರಸ್ತೆಯಲ್ಲಿ ವಾಹನ ದಟ್ಟಣೆ ಸಾಮಾನ್ಯವಾಗಿದೆ.
ಆಂಬುಲೆನ್ಸ್‌ಗೆ ಜಾಗ ಸಿಗಲ್ಲ: ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ಭಾಗದ ಆಂಬುಲೆನ್ಸ್‌ಗಳು ಈ ಭಾಗದಲ್ಲಿ ಸಂಚರಿಸಿದರೆ ವಾಹನದ ಒಳಗಿರುವ ರೋಗಿಯ ಕಥೆ ಊಹಿಸುವಂತೆಯೇ ಇಲ್ಲ. ಏನೇ ಹರಸಾಹಸ ನಡೆಸಿದರೂ ಆಂಬುಲೆನ್ಸ್‌ಗಳು ವಾಹನದಟ್ಟಣೆಯ ಚಕ್ರವ್ಯೆಹದಲ್ಲಿ ಸಿಲುಕಿ ಹೊರಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗುತ್ತದೆ.
ಮೇಲ್ಸುತುವೆ ಕಿರಿಕಿರಿ: ಈ ಭಾಗದಲ್ಲಿ ಮೇಲ್ಸುತುವೆ ಕಾಮಗಾರಿ ನಡೆಯುತ್ತಿದ್ದು ಇದರಿಂದಲೂ ಸುಗಮ ವಾಹನ ಸಂಚಾರಕ್ಕೆ ತೊಡಕಾಗಿದೆ ಎನ್ನಲಾಗಿದೆ. ಕಾಮಗಾರಿ ಕುಂಟುತ್ತಾ ಸಾಗಿದ್ದು ಪರಿಕರಗಳನ್ನು ಎಲ್ಲೆಂದರಲ್ಲಿ ಸುರಿಯಲಾಗಿದೆ ಇದರಿಂದ ರಸ್ತೆಯೂ ಕಿರಿದಾಗಿದ್ದು ಟ್ರಾಫಿಕ್ ಕಿರಿಕಿರಿಗೆ ಕಾರಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಎರಡೂ ಬದಿ ಪಾರ್ಕಿಂಗ್: ಇನ್ನೂ ಈ ಭಾಗದಲ್ಲಿನ ದೊಡ್ಡ ದೊಡ್ಡ ಗೋದಾಮುಗಳಿಂದ ಸರಕುಗಳನ್ನು ಸಾಗಿಸಲು ಬರುವ ದೊಡ್ಡ ಟ್ರಕ್‌ಗಳು ರಸ್ತೆಯ ಎರಡೂ ಬದಿ ನಿಲುಗಡೆ ಮಾಡುತ್ತವೆ. ಟ್ರಕ್‌ಗಳು ಹಲವು ವೇಳೆ ತಿರುವು ಪಡೆಯಲು ರಸ್ತೆ ಮಧ್ಯೆ ನಿಂತು ಇನ್ನಿತರ ವಾಹನಗಳ ಸಂಚಾರಕ್ಕೆ ತೊಡಕಾಗುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶೇಷ ದಿನಗಳಂದು ಹೆಚ್ಚು ಕಿರಿಕಿರಿ:ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ಭಾಗದಲ್ಲಿನ ಧಾರ್ಮಿಕ ಸ್ಥಳಗಳಿಗೆ ವಾರಾಂತ್ಯದ ದಿನಗಳಲ್ಲಿ ಹಾಗೂ ವಿಶೇಷ ದಿನಗಳಲ್ಲಿ ಭೇಟಿ ನೀಡುವವರ ಸಂಖ್ಯೆ ಹೆಚ್ಚಿರುತ್ತದೆ. ಇದರಲ್ಲಿ ಭಾಗಶಃ ವಾಹನ ಸವಾರರು ಇದೇ ರಸ್ತೆಯನ್ನು ಅವಲಂಬಿಸಿರುವುದರಿಂದ ವಿಶೇಷ ದಿನಗಳಲ್ಲಿ ಗಂಟೆಗಟ್ಟಲೆ ವಾಹನ ದಟ್ಟಣೆ ಸಾಮಾನ್ಯ ಎನ್ನುವಂತಾಗಿದೆ.

ನೆಲಮಂಗಲ ಹಾಗೂ ಹುಲಿಕುಂಟೆ ಟೋಲ್ ತಪ್ಪಿಸಲು ಲಾರಿ ಹಾಗೂ ಮತ್ತಿತರ ವಾಹನ ಚಾಲಕರು ರೈಲ್ವೇಗೊಳ್ಳಹಳ್ಳಿ ರಸ್ತೆಯನ್ನು ಅವಲಂಬಿಸಿದ್ದಾರೆ ಟೋಲ್‌ಗಳು ಕಾರ್ಯಾರಂಭ ಮಾಡಿದ ದಿನದಿಂದಲೂ ಇದೇ ಪರಿಸ್ಥಿತಿ ಇದೆ. ಇದರಿಂದ ಗಂಟೆಗಟ್ಟಲೆ ವಾಹನ ಸವಾರರು ಪರದಾಡುವಂತಾಗಿದೆ. ಸ್ಥಳೀಯರು ಕೆಲವೇ ದೂರ ಕ್ರಮಿಸಲೂ ಗಂಟೆಗಟ್ಟಲೆ ಕಾಯಬೇಕಾಗಿದೆ. ತುರ್ತು ಸಂದರ್ಭದಲ್ಲಿ ತೆರಳಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಧರ್ಮೆಂದ್ರ, ಸಕ್ಕರೆ ಗೊಲ್ಲಹಳ್ಳಿ ನಿವಾಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net