ಪರವಾನಗಿ ಪಡೆಯದೆ ಸಂಚಾರ

FotoJet
Published on

ಕಿರುವಾರ ಎಸ್​. ಸುದರ್ಶನ್​ ಕೋಲಾರ

ಪ್ರಾದೇಶಿಕ ಸಾರಿಗೆ ಕಚೇರಿಗಳು (ಆರ್​ಟಿಒ) ಭ್ರಷ್ಟಾಚಾರದ ಕೂಪಗಳಾಗಿವೆ ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಆದರೂ ಕಚೇರಿಗಳಲ್ಲಿನ ಅವ್ಯವಸ್ಥೆ ಸರಿಪಡಿಸಿಕೊಳ್ಳಲು ಅಧಿಕಾರಿಗಳು ಮುಂದಾಗದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕೋಲಾರ ಜಿಲ್ಲೆಯ ಆರ್​ಟಿಒ ಹಾಗೂ ಕೆಜಿಎಫ್​ ಎಆರ್​ಟಿಒ ಕಚೇರಿಗಳಲ್ಲಿ ದುಡ್ಡು ಕೊಡದೆ ಯಾವುದೇ ಸೌಲಭ್ಯ ಪಡೆಯಲು ಆಗುವುದಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ಈ ಅಕ್ರಮ ತಡೆಗೆ ಕ್ರಮ ಕೈಗೊಳ್ಳುವಂತೆ ಜನಪ್ರತಿನಿಧಿಗಳು, ವಿವಿಧ ಸಂಘ& ಸಂಸ್ಥೆಗಳಿಂದ ಒತ್ತಾಯ ವ್ಯಕ್ತವಾದರೂ ಹಿರಿಯ ಅಧಿಕಾರಿಗಳು ರ್ನಿಲಕ್ಷ$್ಯವಹಿಸಿರುವುದು ಸಾರ್ವಜನಿಕ ವಲಯದಲ್ಲಿ ಮತ್ತಷ್ಟು ಅನುಮಾನ ಮೂಡಲು ಕಾರಣವಾಗಿದೆ.

ಇದರ ನಡುವೆ ಮತ್ತೊಂದು ಅಕ್ರಮ ಬಯಲಾಗಿದೆ. ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಖಾಸಗಿ ಬಸ್​ಗಳು ಸಂಚರಿಸುತ್ತಿದ್ದು, ಅವುಗಳ ಪೈಕಿ ಬಹುತೇಕ ಬಸ್​ಗಳು ಪಮೀರ್ಟ್​ ಪಡೆದುಕೊಂಡಿರುವ ಮಾರ್ಗ ಬಿಟ್ಟು, ಬೇರೆ ಮಾರ್ಗದಲ್ಲಿ ಸಂಚರಿಸುತ್ತಿವೆ. ಅಲ್ಲದೆ ಸಮರ್ಪಕವಾಗಿ ದಾಖಲೆ ಇಲ್ಲ. ಈ ಬಗ್ಗೆ ಜನಪ್ರತಿನಿಧಿಗಳು ಧ್ವನಿ ಎತ್ತಿದ್ದರು. ಆದರೆ ಆಗ, ನೆಪಮಾತ್ರಕ್ಕೆ ಎಂಬಂತೆ ಒಂದು ದಿನ ಕಾರ್ಯಾಚರಣೆ ನಡೆಸಿದ ಆರ್​ಟಿಒ ಅಧಿಕಾರಿಗಳು ಮತ್ತೆ ಸುಮ್ಮನಾಗಿದ್ದಾರೆ.

ಹಲವು ಖಾಸಗಿ ಬಸ್​ಗಳಿಗೆ ರೂಟ್​ ಪಮೀರ್ಟ್​ ಇಲ್ಲ, ಸಾಕಷ್ಟು ಬಸ್​ಗಳು ಕಚೇರಿ ಮುಂದೆಯೇ ಓಡಾಡುತ್ತಿದ್ದರೂ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ಕೆಲ ಬಸ್​ಗಳು ರಸ್ತೆಯಲ್ಲಿ ಸಂಚರಿಸಲು ಯೋಗ್ಯವಲ್ಲದಿದ್ದರೂ ಅವುಗಳಿಗೆ ಅಧಿಕಾರಿಗಳು ದೃಢೀಕರಣ ಪತ್ರ ನೀಡುವ ಮೂಲಕ ಜನರ ಪ್ರಾಣದ ಜತೆ ಚಲ್ಲಾಟವಾಡುತ್ತಿದ್ದಾರೆ.

ಗ್ರಾಮೀಣ ಮಾರ್ಗದಲ್ಲಿ ಸಂಚರಿಸಲು ಅನುಮತಿ ಪಡೆದುಕೊಂಡಿರುವ ಹಾಗೂ ಬೆಂಗಳೂರು ತನಕ ಪರವಾನಿಗೆ ಪಡೆದುಕೊಂಡಿರುವ ಬೆರಳೆಣಿಕೆಯಷ್ಟು ಬಸ್​ ಮಾಲೀಕರು, ಆರ್​ಟಿಒ ಭಯವಿಲ್ಲದೆ ನಿತ್ಯ ಬೆಂಗಳೂರಿಗೆ ಬಸ್​ ಓಡಿಸುತ್ತಿರುವುದಲ್ಲದೆ, ಸರ್ಕಾರಕ್ಕೆ ತೆರಿಗೆ ವಂಚನೆ ಮಾಡುತ್ತಿದ್ದಾರೆ.

2&3 ಬಸ್​ಗಳಿಗೆ ಒಂದೇ ನಂಬರ್​ ಬಳಕೆ

ಒಂದೇ ನಂಬರ್​ ಬಳಕೆ ಮಾಡಿಕೊಂಡು ಎರಡು ಮೂರು ಬಸ್​ಗಳು ಓಡಾಟ ಮಾಡುತ್ತಿದ್ದ ಬಗ್ಗೆ ರಾಜ್ಯಮಟ್ಟದ ಅಧಿಕಾರಿಗಳಿಗೆ ಗೊತ್ತಾಗಿ ಕಾರ್ಯಾಚರಣೆ ನಡೆಸಿದಾಗ ಸಿಕ್ಕಿ ಹಾಕಿಕೊಂಡಿದ್ದವು. ಆಗ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಇದು ಮುಂದುವರಿಯದಂತೆ ಎಚ್ಚರಿಕೆ ನೀಡಿದ್ದರು, ಆದರೆ, ಈಗಲೂ ಒಂದೇ ನಂಬರಿನಲ್ಲಿ ಎರಡ್ಮೂರು ಬಸ್​ಗಳು ಸಂಚರಿಸುತ್ತಿವೆ ಎಂಬ ಆರೋಪ ಇದೆ.

 ನಿತ್ಯವೂ ಮಾಮೂಲಿ ವಸೂಲಿ

ನಗರ ಪ್ರವೇಶಕ್ಕೆ ಕೆಲ ಬಸ್​ಗಳಿಗೆ ಅನುಮತಿಯಿಲ್ಲ, ಆದರೆ ಆರ್ಥಿಕ ಲಾಭದ ದೃಷ್ಟಿಯಿಂದ ನಗರ ಪ್ರವೇಶ ಮಾಡುತ್ತಾರೆ. ಇದಕ್ಕೆ ಆರ್​ಟಿಒ ಅಧಿಕಾರಿಗಳಿಗೆ ಪ್ರತಿದಿನವೂ ಮಾಮೂಲು ವಸೂಲಿ ಮಾಡಿಕೊಡಲು ಖಾಸಗಿ ವ್ಯಕ್ತಿಗಳನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಆರೋಪವಿದಿದೆ. ಕ್ಲಾಕ್​ ಟವರ್​, ಬಸ್​ ಬಿಲ್ದಾಣ, ಹಳೇಬಸ್​ ನಿಲ್ದಾಣ ಸಮೀಪ ವಸೂಲಿಗಾರರನ್ನು ತಂಡದಂತೆ ನೇಮಕ ಮಾಡಿಕೊಂಡಿದ್ದಾರೆ. ಪ್ರತಿ ಖಾಸಗಿ ಬಸ್​ನವರು 50 ರಿಂದ 100 ರೂ. ಕೊಡಲೇ ಬೇಕಿದೆ.

ಬಸ್​ ಪರಿಶೀಲಿಸದೆ ಅನುಮತಿ?

ಬಸ್​ನ ಚಾಸ್ಸಿ 2013ರಲ್ಲಿ ತಯಾರಾಗಿದ್ದರೆ, ಅದೇ ನಂಬರಿಗೆ 2021&22ರಲ್ಲಿ ತಯಾರು ಮಾಡಲಾಗಿದೆ ಎಂದು ಹೇಳಿ ಗ್ಯಾರೇಜಿನಲ್ಲಿ ದಾಖಲೆ ಸೃಷ್ಟಿ ಮಾಡುವ ಜಾಲ ಅವ್ಯಾವಹತವಾಗಿದೆ. ಬಸ್​ ಪರಿಶೀಲಿಸಿ ಅನುಮತಿ ನೀಡಬೇಕಾದ ಅಧಿಕಾರಿಗಳು ಸ್ಥಳಕ್ಕೆ ಬಸ್​ಗಳನ್ನು ಕರೆಸಿಕೊಳ್ಳದೆ ಮಧ್ಯವರ್ತಿಗಳ ಮೂಲಕ ವ್ಯವಹಾರ ಕುದರಿಸಿಕೊಳ್ಳುವುದನ್ನೇ ದಂಧೆ ಮಾಡಿಕೊಂಡಿದ್ದಾರೆ. ಸೆಕ್ಷನ್​ ಅಧಿಕಾರಿಗಳ ಕೆಲಸವನ್ನು ಮಧ್ಯವರ್ತಿಗಳು ಮಾಡುತ್ತಾರೆ, ಕಡತ ತಯಾರು ಮಾಡಿ ಆನ್​ಲೈನ್​ನಲ್ಲಿ ದಾಖಲು ಮಾಡಿದರೆ ಅಂತಿಮವಾಗಿ ಅಧಿಕಾರಿಗಳು ಥಂಬ್​ ನೀಡುವ ಮೂಲಕ ಅನುಮತಿ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net