ಟ್ರಾಫಿಕ್ ವಾರ್ಡನ್ ವ್ಯವಸ್ಥೆ ಶೀಘ್ರದಲ್ಲೇ ಆರಂಭ

BLY- 27-3
ಬಳ್ಳಾರಿ ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ನಡೆದ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ರಸ್ತೆ ಸುಗಮ ಸಂಚಾರದ ಸಮಾಲೋಚನಾ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿದರು. ಬಿ. ಮಹಾರುದ್ರಗೌಡ, ಯಶವಂತರಾಜ್ ನಾಗಿರೆಡ್ಡಿ , ಸಿ.ಶ್ರೀನಿವಾಸ್‌ರಾವ್, ಜೆ.ರಾಜೇಶ್, ಖಲೀಲ್ ಸಾಬ್ ಇತರರಿದ್ದರು.
Published on

ಬಳ್ಳಾರಿ: ಬಳ್ಳಾರಿ ನಗರದಲ್ಲಿನ ರಸ್ತೆ ಸಂಚಾರದ ದಟ್ಟಣೆಯನ್ನು ಸುಧಾರಿಸಿ ಸುಗಮ ರಸ್ತೆ ಸಂಚಾರಕ್ಕೆ ಸಹಕಾರ ನೀಡಲು ಸಾರ್ವಜನಿಕರ ಪಾಲ್ಗೊಳ್ಳುವಿಕೆಯ ‘ಟ್ರಾಫಿಕ್ ವಾರ್ಡನ್’ ವ್ಯವಸ್ಥೆಯನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹೇಳಿದರು.

ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸಭಾಂಗಣದಲ್ಲಿ ಬುಧವಾರ ನಡೆದ ವಾಣಿಜ್ಯೋದ್ಯಮಿಗಳು, ಕೈಗಾರಿಕೋದ್ಯಮಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳ ರಸ್ತೆ ಸುಗಮ ಸಂಚಾರದ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಆಸಕ್ತ ಸಾರ್ವಜನಿಕರು, ನಿವೃತ್ತರು ‘ಟ್ರಾಫಿಕ್ ವಾರ್ಡನ್’ ಗಳಾಗಿ ನಿತ್ಯ ಎರಡು ತಾಸು ಮಾತ್ರ ಕೆಲಸ ಮಾಡಲು ಅವಕಾಶವಿದ್ದು, ಆಸಕ್ತರಿಗೆ ಅಗತ್ಯ ತರಬೇತಿ ಮತ್ತು ಬೆಂಬಲವನ್ನು ಪೊಲೀಸ್ ಇಲಾಖೆ ನೀಡಲಿದೆ. ಮುಖ್ಯ ರಸ್ತೆಗಳಲ್ಲಿಯ ವ್ಯಾಪಾರಿಗಳು, ಉದ್ಯಮಿಗಳು ಒಟ್ಟಾಗಿ ಸೆಕ್ಯುರಿಟಿ ಗಾರ್ಡ್‌ಗಳನ್ನು ನೇಮಕ ಮಾಡಿಕೊಂಡು ಸಂಚಾರ ಮತ್ತು ವಾಹನಗಳ ಪಾರ್ಕಿಂಗ್ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಮುಕ್ತ ಅವಕಾಶವಿದ್ದು, ಇಲಾಖೆ ಬೆಂಬಲ ನೀಡಲಿದೆ ಎಂದರು.

ಆಟೋ ಚಾಲಕರು ಪ್ರಯಾಣಿಕರು ಮತ್ತು ಸಾರ್ವಜನಿಕರ ಜೊತೆಗೆ ಉತ್ತಮವಾಗಿ ಮಾತನಾಡಲಿಕ್ಕಾಗಿ ಆಪ್ತಸಮಾಲೋಚನೆ ನಡೆಸಲಾಗುತ್ತಿದೆ. ಆಟೋ ಚಾಲಕರಿಗಾಗಿ ಆರೋಗ್ಯ ತಪಾಸಣೆ ಶಿಬಿರಗಳನ್ನು ನಡೆಸಲಾಗುತ್ತಿದೆ. ವಾಹನಗಳ ‘ಯು’ಟರ್ನ್ ವ್ಯವಸ್ಥೆ, ಬೀದಿ ಬದಿ ವ್ಯಾಪಾರಿಗಳು ಮತ್ತು ಫುಟ್‌ಬಾತ್ ಅಕ್ರಮಣ, ಪಾದಾಚಾರಿಗಳು ಎದುರಿಸುತ್ತಿರುವ ಸಮಸ್ಯೆಗಳು ಎಲ್ಲವನ್ನೂ ಹಂತ ಹಂತವಾಗಿ ಪರಿಹರಿಸಲಾಗುತ್ತದೆ. ಸಾರ್ವಜನಿಕರ ಸಹಕಾರ - ಬೆಂಬಲ ಸಿಕ್ಕಾಗ ತ್ವರಿತವಾಗಿ ಸಂಚಾರ ಸಮಸ್ಯೆಗಳು ಪರಿಹಾರಗೊಳ್ಳುತ್ತವೆ. ಸಾರ್ವಜನಿಕರು 112 ಸಂಖ್ಯೆಗೆ ಯಾವುದೇ ಸಂದರ್ಭದಲ್ಲಿ ಕರೆ ಮಾಡಿದರೂ ಪೊಲೀಸ್ ಸಿಬ್ಬಂದಿ ಸ್ಥಳದಲ್ಲಿ ಹಾಜರಾಗುತ್ತದೆ. ಬದಲಾವಣೆ ಸಾರ್ವಜನಿಕರಿಂದಲೇ ಆರಂಭವಾಗಬೇಕು ಎಂದು ತಿಳಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಮಾತನಾಡಿ, ಬಳ್ಳಾರಿ ನಗರಾದ್ಯಂತ ಇರುವ ಸಂಚಾರಿ ದಟ್ಟಣೆ, ವಾಹನಗಳ ಹೆಚ್ಚಳ, ಇಕ್ಕಟ್ಟಾಗುತ್ತಿರುವ ರಸ್ತೆಗಳು, ರಸ್ತೆಗಳಲ್ಲಿಯ ಗುಂಡಿಗಳು, ಆಟೋ ನಿಲ್ದಾಣಗಳ ಪುನರ್ ರಚನೆ, ಬಡಾವಣೆಗಳಲ್ಲಿ ನಡೆಯುತ್ತಿರುವ ಕುಡಿತ, ಅನಧಿಕೃತ ಮಟನ್-ಚಿಕನ್ ಅಂಗಡಿಗಳ ಮೇಲೆ ನಿಯಂತ್ರಣ, ಬೀದಿ ನಾಯಿಗಳ ನಿಯಂತ್ರಣ ಇನ್ನಿತರ ವಿಷಯಗಳ ಕುರಿತು ಸಮಗ್ರವಾಗಿ ವಿಷಯವನ್ನು ಮಂಡನೆ ಮಾಡಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಬಿ. ಮಹಾರುದ್ರಗೌಡ ಮಾತನಾಡಿ, ಎಪಿಎಂಸಿ ಆವರಣದಲ್ಲಿ ಪೊಲೀಸ್ ಗಸ್ತು ಹೆಚ್ಚಿಸಿ ಕಳ್ಳತನ-ಹಲ್ಲೆಗಳನ್ನು ನಿಯಂತ್ರಿಸಬೇಕು. ಅಲ್ಲದೆ ವ್ಯಾಪಾರಿಗಳಿಗೆ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಮಾಜಿ ಅಧ್ಯಕ್ಷ ವಿ.ರವಿಕುಮಾರ್ ಮಾತನಾಡಿ, ಆಟೋ ಚಾಲಕರಲ್ಲಿ ಶಿಸ್ತು ಮತ್ತು ಸಂಯವನ್ನು ಆಚರಣೆಗೆ ತರಬೇಕಿದೆ. ವಾಹನಗಳ ತಪಾಸಣೆಯ ನೆಪದಲ್ಲಿ ವಾಹನಗಳನ್ನು ರಸ್ತೆಗಳಲ್ಲಿ ಹೆಚ್ಚು ಸಮಯ ನಿಲ್ಲಿಸಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವುದು, ಹೊರ ರಾಜ್ಯಗಳು - ಬೇರೆ ಜಿಲ್ಲೆಗಳ ವಾಹನಗಳ ನೋಂದಣಿ ಇದ್ದಲ್ಲಿ ಕುಟುಂಬದವರು ವಾಹನದಲ್ಲಿದ್ದರೂ ತಪಾಸಣೆಯ ನೆಪದಲ್ಲಿ ನೀಡುತ್ತಿರುವ ಕಿರುಕುಳಗಳ ಬಗ್ಗೆ ವಿವರಿಸಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಗೌರವಾಧ್ಯಕ್ಷ ಸಿ.ಶ್ರೀನಿವಾಸ್‌ರಾವ್, ಜೆ.ರಾಜೇಶ್, ಪಾಲಿಕೆಯ ಆಯುಕ್ತ ಖಲೀಲ್ ಸಾಬ್ , ಟ್ರಾಫಿಕ್ ಸಿಪಿಐ ಅಯ್ಯನಗೌಡ ಪಾಟೀಲ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net