

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ರಸ್ತೆಯ ಬ್ಯಾಟರಾಯನಪುರದಲ್ಲಿ ಬೃಹತ್ ಮಾಲ್ ಉದ್ಘಾಟನೆಯಾದ ಬೆನ್ನಲ್ಲೇ ಆ ಭಾಗದಲ್ಲಿ ವಾಹನ ಸಂಚಾರ ಹಳಿ ತಪ್ಪಿದೆ. ದಿನವೂ ದಟ್ಟಣೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ ವೀಕ್ಷಿಸಲು ಬರುವ ಜನರು ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡುವಂತಾಗಿದೆ. ವಾಹನ ಸವಾರರು ಕೂಡ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಹೈರಾಣರಾಗುತ್ತಿದ್ದಾರೆ.
ವಾರಾಂತ್ಯ ಸಮಯದಲ್ಲಿ ಒಂದು ಲಕ್ಷ ಮಂದಿ ಭೇಟಿ ನೀಡುವಷ್ಟು ವಿಶಾಲವಾಗಿರುವ ‘ಫೀನಿಕ್ಸ್ ಮಾಲ್ ಆ್ ಏಷ್ಯಾ’ ದೇಶದಲ್ಲೇ ಅತಿದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ಎಂಬ ಹೆಗ್ಗಳಿಕೆ ಪಡೆದಿದೆ. ಆದರೆ, ಈ ಖ್ಯಾತಿಗೆ ತಕ್ಕಂತೆ ಮಾಲ್‌ಗೆ ಬರುವ ನಾಗರಿಕರಿಗೆ ವಾಹನ ನಿಲುಗಡೆ ಹಾಗೂ ಟ್ರಾಫಿಕ್ ಸಮಸ್ಯೆ ಬಗ್ಗೆ ಉತ್ತಮ ಸೌಲಭ್ಯ ಇಲ್ಲದಂತಾಗಿದೆ. ಲೋಕಾರ್ಪಣೆ ಮುನ್ನ ಮಾಲ್ ವ್ಯವಸ್ಥಾಪಕರು ಸಂಚಾರ ಪೊಲೀಸರೊಂದಿಗೆ ಪೂರ್ವಭಾವಿಯಾಗಿ ಚರ್ಚಿಸದೆ ದಿಢೀರ್ ಆಗಿ ಸಾರ್ವಜನಿಕರಿಗೆ ಮುಕ್ತಗೊಳಿಸಿದ್ದರಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂಬ ಆಕ್ಷೇಪ ಕೇಳಿಬಂದಿದೆ.
ಮಾಲ್‌ನಲ್ಲಿ 3,400 ವಾಹನಗಳ ನಿಲುಗಡೆಗಾಗಿ ಪಾರ್ಕಿಂಗ್ ಸ್ಥಳಾವಕಾಶ ಇದೆ. ಅದಿನ್ನು ಪೂರ್ಣವಾಗಿ ನಾಗರಿಕರಿಗೆ ಮುಕ್ತ ಮಾಡಿಲ್ಲ. ಬದಲಾಗಿ ಅಲ್ಲಿ ಮಳಿಗೆಗಳಲ್ಲಿ ಪ್ರದರ್ಶಿಸಲಿರುವ ಉತ್ಪನ್ನಗಳನ್ನು ದಾಸ್ತಾನು ಮಾಡಲಾಗಿದೆ. ಹೀಗಾಗಿ ಮಾಲ್‌ಗೆ ಬರುವ ಎಲ್ಲ ಜನರಿಗೂ ಪಾರ್ಕಿಂಗ್ ಕಲ್ಪಿಸಲಾಗುತ್ತಿಲ್ಲ. ಜತೆಗೆ ದುಬಾರಿ ಶುಲ್ಕ ವಿಧಿಸಲಾಗುತ್ತಿದೆ ಎಂಬ ನೆಪ ಮಾಡಿ ಜನರು ತಮ್ಮ ವಾಹನಗಳನ್ನು ರಸ್ತೆ ಬದಿಯಲ್ಲೇ ನಿಲುಗಡೆ ಮಾಡುತ್ತಿರುವುದು ಸರಾಗ ಸಂಚಾರಕ್ಕೆ ಅಡ್ಡಿಯಾಗಿದೆ.
ಮರುಕಳಿಸಿದೆ ಹಳೆಯ ಸಮಸ್ಯೆ:
ದಶಕದ ಹಿಂದೆ ಮಲ್ಲೇಶ್ವರದಲ್ಲಿ ಮಂತ್ರಿ ಮಾಲ್ ಹಾಗೂ ಯಶವಂತಪುರದಲ್ಲಿ ಓರಿಯನ್ ಮಾಲ್ ಆರಂಭವಾದಾಗ ಇಂತಹದ್ದೇ ಸಮಸ್ಯೆ ಎದುರಾಗಿತ್ತು. ಸುಮಾರು ವರ್ಷ ಕಾಲ ಟ್ರಾಫಿಕ್ ಸಮಸ್ಯೆಯನ್ನು ನಿವಾರಿಸಲು ಸಾಧ್ಯವಾಗಿರಲಿಲ್ಲ. ಮಾಲ್‌ನಿಂದ ಹೆಚ್ಚುವರಿ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರನ್ನು ನಿಯೋಜಿಸಿದ ಬಳಿಕ ಪರಿಸ್ಥಿತಿ ತುಸು ಸುಧಾರಿಸಿತ್ತು. ಈಗ ಬ್ಯಾಟರಾಯನಪುರದ ಮಾಲ್ ಆ್ ಏಷ್ಯಾ ಸ್ಥಳದಲ್ಲೂ ಸಮಸ್ಯೆ ಮರುಕಳಿಸಿದ್ದು, ಸಂಚಾರ ಪೊಲೀಸರು ಏರ್‌ಪೋರ್ಟ್ ರಸ್ತೆಯ ಟ್ರಾಫಿಕ್ ಗಮನಿಸಿ ಸ್ಪಷ್ಟ ಕ್ರಮ ಕೈಗೊಳ್ಳಬೇಕಿದೆ.
ತಪ್ಪು ವಿಳಾಸ ತಂದ ಪೀಕಲಾಟ:
‘ಮಾಲ್ ಆ್ ಏಷ್ಯಾ’ ಏರ್‌ಪೋರ್ಟ್ ರಸ್ತೆಯ ಬ್ಯಾಟರಾಯನಪುರದಲ್ಲಿದೆ. ಆದರೆ, ಮಾಲ್ ವಿಳಾಸವನ್ನು ಹೆಬ್ಬಾಳ ಎಂದು ನಮೂದಿಸಲಾಗಿದೆ. ಈ ಎರಡೂ ಸ್ಥಳಗಳ ದೂರ 3 ಕಿ.ಮೀ. ಆಗಿದ್ದು, ನಗರದ ವಿವಿಧ ಭಾಗಗಳಿಂದ ಆಗಮಿಸುವ ಜನರಿಗೆ ವಿಳಾಸ ಹುಡುಕುವ ಪೀಕಲಾಟ ಶುರುವಾಗಿದೆ. ಆಟೋ, ಟ್ಯಾಕ್ಸಿಗಳಲ್ಲಿ ಬರುವ ಕೆಲವರು ಮೊದಲು ಹೆಬ್ಬಾಳ ವಿಳಾಸ ಹೇಳಿ ನಂತರ ಮಾಲ್ ಕಾಣದಾದಿದ್ದಾಗ ಮತ್ತೆ ಬ್ಯಾಟರಾಯನಪುರಕ್ಕೆ ಬರುವಂತಾಗಿದೆ. ಕೆಲವೊಮ್ಮೆ ಪ್ರಯಾಣಿಕರು ಚಾಲಕರೊಂದಿಗೆ ವಾಗ್ವದ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಾಲ್ ಆವರಣದಲ್ಲಿರುವ ಎಲ್ ಆ್ಯಂಡ್ ಟಿ ರೈನ್ ಟ್ರೀ ಅಪಾರ್ಟ್‌ಮೆಂಟ್ ವಿಳಾಸವನ್ನೂ ಹೆಬ್ಬಾಳ ಎಂದೇ ನಮೂದಿಸಲಾಗಿದೆ. ಹೆಬ್ಬಾಳದಲ್ಲಿ ರಿಂಗ್ ರೋಡ್ ಇರುವ ಕಾರಣ ್ಲ್ಯಾಟ್ಸ್ ಮಾರಾಟ ಸುಲಭ ಎಂಬ ಕಾರಣಕ್ಕೆ ಕಂಪನಿಯು ಈ ಮಾರುಕಟ್ಟೆ ತಂತ್ರವನ್ನು ಅನುಸರಿಸಲಾಗಿದೆ. ಆದರೀಗ ಈ ವಿಳಾಸವೇ ಮಾಲ್ ತಲುಪಲು ಸಮಸ್ಯೆಯನ್ನು ತಂದೊಡ್ಡಿದೆ.
ಹೊಸ ಮಾಲ್ ಆರಂಭವಾದ ಬಳಿಕ ಟ್ರಾಪಿಕ್ ಸಮಸ್ಯೆ ಹೆಚ್ಚಿದೆ. ಸಿಗ್ನಲ್ ಬಳಿ ಪೊಲೀಸರಿದ್ದರೂ, ಸಂಚಾರ ನಿಯಂತ್ರಣ ಕಷ್ಟವಾಗುತ್ತಿದೆ. ಮಾಲ್ ಪ್ರವೇಶ/ನಿರ್ಗಮನ ಕುರಿತು ಸ್ಪಷ್ಟ ಹಾದಿಯನ್ನು ಪೊಲೀಸರು ನಾಗರಿಕರಿಗೆ ಮನವರಿಕೆ ಮಾಡಿಕೊಡಬೇಕು. ಜತೆಗೆ ಬೇರೆ ಬೇರೆ ರಸ್ತೆಗಳಲ್ಲಿ ಸಂಚರಿಸಲು ಅವಕಾಶ ಮಾಡಿಕೊಡದಿದ್ದಲ್ಲಿ ಟ್ರಾಫಿಕ್ ಸಮಸ್ಯೆ ಕಗ್ಗಂಟಾಗುವುದು ನಿಶ್ಚಿತ.
- ಸುರೇಶ್, ಸ್ಥಳೀಯ ಯುವ ಮುಖಂಡ
ಏರ್‌ಪೋರ್ಟ್ ರಸ್ತೆಯಲ್ಲಿ ದಟ್ಟಣೆ ವೇಳೆ ಹೆಚ್ಚಿನ ಟ್ರಾಫಿಕ್ ಉಂಟಾಗುತ್ತಿದ್ದು, ಈಗ ಹೊಸದಾಗಿ ಮಾಲ್ ಉದ್ಘಾಟನೆಯಾಗಿ ಮತ್ತಷ್ಟು ಸಮಸ್ಯೆಯನ್ನು ಹೆಚ್ಚಿಸಿದೆ. ಶಲಾ-ಕಾಲೇಜು ವಿದ್ಯಾರ್ಥಿಗಳ ಸಹಿತ ಸ್ಥಳೀಯರು ರಸ್ತೆ ದಾಟಲು ಕಷ್ಟವಾಗಿದೆ. ಸಾರ್ವಜನಿಕರಿಗೆ ಮಾಲ್ ವ್ಯವಸ್ಥಾಪಕರು ಹಾಗೂ ಪೊಲೀಸರು ಪರ್ಯಾಯ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರೆ ಸಮಸ್ಯೆ ತುಸು ಸುಧಾರಿಸಬಹುದು.
- ನರೇಂದ್ರ ಎನ್, ಬ್ಯಾಟರಾಯನಪುರ ನಿವಾಸಿ
ಟ್ರಾಫಿಕ್ ಸಮಸ್ಯೆಗೆ ಬೇಕಿರುವ ಉಪಕ್ರಮ:
* ಮಾಲ್‌ಗೆ ಹೊಂದಿಕೊಂಡಿರುವ ಸರ್ವಿಸ್ ರಸ್ತೆಯಲ್ಲಿ ವಾಹನ ನಿಲುಗಡೆ ನಿರ್ಬಂಧ.
* ಮಾಲ್ ಒಳಗಿರುವ ಪಾರ್ಕಿಂಗ್ ಸೌಲಭ್ಯವನ್ನು ತಕ್ಷಣ ನಾಗರಿಕರಿಗೆ ತೆರೆಯುವುದು.
* ಮಾಲ್ ಒಳ ಭಾಗದಿಂದ ಜಿಕೆವಿಕೆ ಜೋಡಿ ರಸ್ತೆ ಕಡೆಗೆ ನಿರ್ಗಮನ ಸೌಲಭ್ಯ ಒದಗಿಸುವುದು.
* ಜಿಕೆವಿಕೆ ಸಿಗ್ನಲ್ ಬಳಿ ಸರ್ವಿಸ್ ರಸ್ತೆಯಿಂದ ವಾಹನಗಳು ನಗರದತ್ತ ಬರಲು ಅವಕಾಶ.
* ಮಾಲ್ ಬಳಿ ಭದ್ರತಾ ಸಿಬ್ಬಂದಿ, ಸಿಗ್ನಲ್‌ಗಳಲ್ಲಿ ಪೇದೆಗಳ ಸಂಖ್ಯೆಯನ್ನು ಹೆಚ್ಚಿಸುವುದು.