ಸಂಚಾರಿ ನಿಯಮ ನಿರ್ಲಕ್ಷ್ಯ ಸಲ್ಲ

q9imzzxlecmzavc9etol[1]
Published on

ಇಂಡಿ: ಪ್ರತಿಯೊಬ್ಬರೂ ತಪ್ಪದೇ ಸಂಚಾರಿ ನಿಯಮಗಳನ್ನು ಪಾಲಿಸಲು ಮುಂದಾಗಬೇಕು. ಸಂಚಾರಿ ನಿಯಮಗಳು ನಿರ್ಲಕ್ಷಿಸಿದರೆ ಅಪಾಯಗಳು ಕಟ್ಟಿಟ್ಟ ಬುತ್ತಿ ಎಂದು ಇಂಡಿ ಶಹರ ಪೊಲೀಸ್ ಠಾಣೆ ಎಎಸ್‌ಐ ಎ.ಎಸ್. ತಳವಾರ ಹೇಳಿದರು.

ಪಟ್ಟಣದ ಎಸ್.ಎಸ್. ವಿವಿ ಸಂಘದ ಜಿ.ಆರ್. ಗಾಂಽ ಕಲಾ, ವೈ.ಎ. ಪಾಟೀಲ ವಾಣಿಜ್ಯ ಹಾಗೂ ಎಂ.ಪಿ. ದೋಶಿ ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್, ರೆಡ್ ಕ್ರಾಸ್ ಹಾಗೂ ಸ್ಕೌಟ್ಸ್ ಗೈಡ್ಸ್ ಘಟಕಗಳ ಸಂಯುಕ್ತಾಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ಪ್ರತಿ ವರ್ಷ ಜನವರಿ 11 ರಿಂದ 17 ರವರೆಗೆ ರಸ್ತೆ ಸುರಕ್ಷತಾ ಸಪ್ತಾಹ ಆಚರಿಸುತ್ತದೆ. ಆ ಮೂಲಕ ಸಾರ್ವಜನಿಕರಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ತಿಳಿಸುವ ಜತೆಗೆ ಸಂಚಾರ ಜಾಗೃತಿ ಪಾಲಿಸದಿದ್ದರೆ ಆಗುವ ತೊಂದರೆಗಳ ಕುರಿತು ಮನವರಿಕೆ ಮಾಡಿಕೊಡಲಾಗುತ್ತಿದೆ. ಅಸುರಕ್ಷಿತ ಚಾಲನೆ, ಸಂಚಾರ ನಿಯಮ ಉಲ್ಲಂಘನೆ ಮತ್ತು ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸದೇ ಇರುವುದು ರಸ್ತೆ ಅಪಘಾತ ಸಂಭವಿಸಲು ಪ್ರಮುಖ ಕಾರಣಗಳಾಗಿವೆ. ಅಪಘಾತಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸಪ್ತಾಹದ ಮೂಲಕ ಜನರಲ್ಲಿ ರಸ್ತೆ ಸುರಕ್ಷತಾ ಜಾಗೃತಿಯ ಮಹತ್ವ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದರು.

ಮಹಾವಿದ್ಯಾಲಯದ ಪ್ರಾಚಾರ್ಯ ಶ್ರೀಶೈಲ ಸಣ್ಣಕ್ಕಿ ಮಾತನಾಡಿ, ದೈನಂದಿನ ಜೀವನದಲ್ಲಿ ಸುರಕ್ಷತೆಯ ನಿಟ್ಟಿನಲ್ಲಿ ಪ್ರತಿಯೊಬ್ಬರೂ ರಸ್ತೆ ಸುರಕ್ಷತಾ ನಿಯಮಗಳನ್ನು ಅನುಸರಿಸಬೇಕು. ಸವಾರರು ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಜತೆಗೆ ಹೆಲ್ಮೆಟ್, ಸೀಟ್  ಬೆಲ್ಟ್ ಗಳನ್ನು ಕಡ್ಡಾಯವಾಗಿ ಧರಿಸಬೇಕು. ಅಲ್ಲದೆ, ವೇಗ ಮಿತಿ ಮತ್ತು ಸುರಕ್ಷಿತ ಅಂತರ ಕಾಪಾಡಿಕೊಳ್ಳಬೇಕು. ಮದ್ಯಪಾನ ಮಾಡಿ ವಾಹನ ಚಲಾಯಿಸದೆ ಮತ್ತು ವಾಹನಗಳಿಗೆ ತಪ್ಪದೇ ವಿಮೆ ಪಾವತಿಸುವ ಜತೆಗೆ ಚಾಲನಾ ಪರವಾನಗಿ ಪಡೆಯದೇ ವಾಹನ ಚಲಾಯಿಸಬಾರದು ಎಂದು ಸಲಹೆ ನೀಡಿದರು.

ಕಾಲೇಜು ಆವರಣದಿಂದ ಬಸವೇಶ್ವರ ವೃತ್ತದವರೆಗೆ ರಸ್ತೆ ಸುರಕ್ಷತೆ ಜಾಗೃತಿ ಮೂಡಿಸಲಾಯಿತು. ಅಲ್ಲದೆ. 25 ಜನರಿಗೆ ಹೆಲ್ಮೆಟ್ ವಿತರಿಸುವ ಜತೆಗೆ ಹೆಲ್ಮೆಟ್ ಧರಿಸಿ ವಾಹನ ಚಲಿಸುವಂತೆ ಜಾಗೃತಿ ಮೂಡಿಸಲಾಯಿತು. ದಾನಮ್ಮ ಪಾಟೀಲ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ಸುರೇಂದ್ರ ಕೆ. ಸ್ವಾಗತಿಸಿ, ಪರಿಚಯಿಸಿದರು. ಉಪನ್ಯಾಸಕಿ ಶ್ವೇತಾ ಕಾಂತ ನಿರೂಪಿಸಿದರು. ಐಕ್ಯೂಎಸಿ ಸಂಯೋಜಕ ಡಾ. ಜಯಪ್ರಸಾದ ಡಿ. ವಂದಿಸಿದರು.

ಮಹಾವಿದ್ಯಾಲಯದ ಆನಂದ ನಡುವಿನಮನಿ, ವಿಶ್ವಾಸ ಕೊರವಾರ, ಪಿ.ಕೆ. ರಾಠೋಡ, ಎಸ್.ಬಿ. ಜಾಧವ, ಸಿ.ಎಸ್. ಬಿರಾದಾರ, ಶ್ರೀಕಾಂತ ರಾಠೋಡ, ಮಲ್ಲಿಕಾರ್ಜುನ ಕೋಣದೆ, ಆರ್.ಪಿ. ಇಂಗನಾಳ, ಶ್ರುತಿ ಪಾಟೀಲ, ಪಂಕಜಾ ಕುಲಕರ್ಣಿ, ಪರಶುರಾಮ ಅಜಮನಿ, ಬಿ.ಎಚ್. ಬಗಲಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net