

ಮೈಸೂರು: ಸಂಚಾರ ನಿಯಮದ ಉಲ್ಲಂಘನೆಯಿಂದ ಪ್ರಾಣಾಪಾಯ ಸಂಭವಿಸುತ್ತದೆ. ಹಾಗಾಗಿ, ಅತ್ಯಮೂಲ್ಯ ಜೀವ ಉಳಿಸಿಕೊಳ್ಳಲು ವಾಹನ ಚಾಲಕರು ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಕುವೆಂಪುನಗರ ಸಂಚಾರ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಮದನ್‌ಕುಮಾರ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ವಿಜಯ ವಿಠ್ಠಲ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಮೈಸೂರು ನಗರ ಸಂಚಾರ ಪೊಲೀಸ್ ಸಹಯೋಗದಲ್ಲಿ ಆಯೋಜಿಸಿದ್ದ ಸಂಚಾರ ನಿಯಮಗಳ ಕುರಿತ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಚಾರ ನಿಯಮ ಅರಿತು ಇತರರಿಗೂ ಅದರ ಬಗ್ಗೆ ಜಾಗೃತಿ ಮೂಡಿಸಬೇಕು. ಚಾಲನೆ ರಹದಾರಿ ಪತ್ರ (ಲೈಸೆನ್ಸ್) ಇಲ್ಲದೆ ಹಾಗೂ ಹೆಲ್ಮೆಟ್ ರಹಿತ ಚಾಲನೆ ಅಪರಾಧವಾಗುತ್ತದೆ. ರಸ್ತೆಯಲ್ಲಿ ಅಪಘಾತಗಳು ಸಂಭವಿಸಿದಾಗ ನಿಮ್ಮ ಸಹಾಯ ಹಸ್ತವನ್ನು ಚಾಚಿ ನೆರವಾಗಬೇಕು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು. ನಾಲ್ಕು ಚಕ್ರದ ವಾಹನ ಚಾಲನೆ ವೇಳೆ ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸಬೇಕು. ಇದರಿಂದ ಅನಾಹುತವನ್ನು ತಪ್ಪಿಸಬಹುದು ಎಂದು ಹೇಳಿದರು.
ಸುರಕ್ಷಿತ ಚಾಲನೆ ಜೀವದ ಸಂರಕ್ಷಣೆ ಎಂಬುದು ನಿಮ್ಮ ಗಮನದಲ್ಲಿ ಇರಲಿ. 18 ವರ್ಷ ವಯೋಮಿತಿ ದಾಟಿದ, ವಾಹನ ಪರವಾನಗಿಯನ್ನು ಹೊಂದಿದ ಸವಾರರು ನಗರ ಪ್ರದೇಶಗಳಲ್ಲಿ ವೇಗಮಿತಿಯನ್ನು ಗಮನಿಸಿ ವಾಹನವನ್ನು ಚಲಾಯಿಸಬೇಕು. ರಸ್ತೆ ನಿಯಮಗಳನ್ನು ಮತ್ತು ಸಂಚಾರ ನಿಯಮಗಳನ್ನು ತಪ್ಪದೆ ಪಾಲಿಸಬೇಕೆಂದು ತಿಳಿಸಿದರು.
ವಿಜಯ ವಿಠಲ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಸತ್ಯಪ್ರಸಾದ್ ಮಾತನಾಡಿ, ವಿದ್ಯಾರ್ಥಿಗಳ ಜೀವನ ಅತ್ಯಮೂಲ್ಯ. ಸಂಚಾರ ನಿಯಮಗಳ ಅರಿವಿನೊಂದಿಗೆ ಇಂದಿನ ವಿದ್ಯಾರ್ಥಿಗಳು ರಸ್ತೆಯಲ್ಲಿ ಉಂಟಾಗುವ ಅಪಘಾತಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.
ಇತ್ತೀಚೆಗೆ ಸಂಚಾರ ನಿಯಮಗಳ ಉಲ್ಲಂಘನೆಯಿಂದ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದೆ. ಆದ್ದರಿಂದ ವಾಹನ ಚಾಲನೆ ಬಗ್ಗೆ ನಿರ್ಲಕ್ಷ್ಯ ತಾಳದೆ ಜವಾಬ್ದಾರಿ ಅರಿತು ನಡೆಯಬೇಕು. ಅಪಘಾತಗಳ ನಿಯಂತ್ರಣದಲ್ಲಿ ವಾಹನ ಚಾಲಕರು ಮತ್ತು ನಾಗರಿಕರ ಪಾತ್ರ ಹಿರಿದಾದುದು ಎಂದರು.
ವಿದ್ಯಾರ್ಥಿಗಳಿಗೆ ಸಂಚಾರ ನಿಯಮ ಮತ್ತು ರಸ್ತೆ ಸುರಕ್ಷತೆ ಬಗ್ಗೆ ಅರಿವು ಅತ್ಯಗತ್ಯ. ಇಂದಿನಿಂದಲೇ ಸಂಚಾರ ನಿಯಮಗಳ ಬಗ್ಗೆ ಜಾಗೃತರಾಗಿ, ಅವುಗಳನ್ನು ಪಾಲಿಸುವ ದೃಢಸಂಕಲ್ಪ ಮಾಡಬೇಕು. ಆ ಮೂಲಕ ಅಪಘಾತ ರಹಿತ ಸಮಾಜ ನಿರ್ಮಾಣಕ್ಕೆ ಕಾರಣರಾಗಬೇಕು ಎಂದು ಹೇಳಿದರು.
ಕುವೆಂಪುನಗರ ಸಂಚಾರ ಪೋಲೀಸ್ ಠಾಣೆಯ ಸಂಚಾರ ಸಹಾಯಕ ಉಪ ಪೋಲೀಸ್ ನಿರೀಕ್ಷಕ ಆನಂದ್, ಸಿಬ್ಬಂದಿ ಭಜಂತ್ರಿ, ಮನೋರಂಜನ್ ಇತರರು ಇದ್ದರು.