ವಿದ್ಯಾರ್ಥಿಗಳಿಂದ ಸಂಚಾರಿ ನಿಯಮ ಜಾಗೃತಿ

New Project (37)
Published on

ಕಡಬ: ಸದಾ ಪಾಠ, ಆಟದಲ್ಲಿ ತಲ್ಲೀನರಾಗುತ್ತಿದ್ದ ವಿದ್ಯಾರ್ಥಿಗಳು ರಸ್ತೆಗಿಳಿದು ವಾಹನ ಸವಾರರಿಗೆ ಸಂಚಾರಿ ನಿಯಮ ಪಾಠ ಬೋಧಿಸಿದರು. ಶಿಕ್ಷಕರ ಮಾರ್ಗದರ್ಶನದಲ್ಲಿ ಸಂಚಾರಿ ನಿಯಮ ಪಾಲನೆ ಜಾಥಾ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಕಾರ್ಯಕ್ರಮಕ್ಕೆ ಜನ ಮೆಚ್ಚುಗೆ ವ್ಯಕ್ತವಾಯಿತು.

ಕಡಬ ತಾಲೂಕು ಕೊಯಿಲ ಗ್ರಾಮದ ಸಬಳೂರು ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಶನಿವಾರ ಶಾಲಾ ಪಕ್ಕದಲ್ಲಿ ಹಾದುಹೋಗಿರುವ ಏಣಿತ್ತಡ್ಕ-ಗೋಳಿತ್ತಡಿ ರಸ್ತೆಗಿಳಿದು ಸಂಚಾರಿ ನಿಯಮದ ಜಾಗೃತಿ ಮೂಡಿಸಿದರು. ಶಾಲಾ ಆವರಣದ ಮುಖ್ಯದ್ವಾರದ ಬಳಿ ರಸ್ತೆಗಿಳಿದ ವಿದ್ಯಾರ್ಥಿಗಳು ಎಲ್ಲ ವಾಹನಗಳನ್ನು ತಡೆದು ಸಂಚಾರಿ ನೀತಿ ಪಾಠ ಬೋದಿಸಿದರು. ರಿಕ್ಷಾ, ಲಾರಿ, ಬೈಕ್, ದ್ವಿಚಕ್ರ ವಾಹನಗಳನ್ನು ತಡೆದು ನಿಲ್ಲಿಸಿ ಸೀಟ್ ಬೆಲ್ಟ್, ಯುನಿಪಾರಂ, ಹೆಲ್ಮೆಟ್ ಮುಂತಾದುವುಗಳನ್ನು ಪಾಲನೆ ಮಾಡಲು ತಿಳಿಸಿದರು. ಚಾಲನೆ ಸಂದರ್ಭ ಫೋನ್‌ನಲ್ಲಿ ಮಾತನಾಡದಂತೆ ವಿನಂತಿಸಿದರು. ಸಂಚಾರಿ ನಿಯಮ ಪಾಲಿಸದೆ ಸಂಚರಿಸುತ್ತಿದ್ದ ಸವಾರರು ವಿದ್ಯಾರ್ಥಿಗಳ ನೀತಿ ಪಾಠಕ್ಕೆ ತಲೆಬಾಗಿ ಸ್ಥಳದಿಂದಲೇ ನಿಯಮ ಪಾಲನೆ ಮಾಡಿದರು. ನಿಯಮ ಪಾಲನೆ ಮಾಡಿ ಸಂಚರಿಸುತ್ತಿದ್ದವರಿಗೆ ತಾವೇ ತಯಾರು ಮಾಡಿಕೊಂಡು ಬಂದ ಹೂಗುಚ್ಚ ನೀಡಿ, ಚಪ್ಪಾಳೆ ತಟ್ಟಿ ಅಭಿನಂದನೆ ಸಲ್ಲಿಸಿದರು. ಸ್ಥಳದಿಂದ ನಿಯಮ ಪಾಲನೆ ಮಾಡಿಕೊಂಡವರಿಗೂ ಹೂಗುಚ್ಚ ನೀಡಲಾಯಿತು. ಒಂದು ಗಂಟೆಗೂ ಹೆಚ್ಚು ಕಾಲ ಜಾಗೃತಿ ಕಾರ್ಯಕ್ರಮ ನಡೆಯಿತು. ಮುಖ್ಯಶಿಕ್ಷಕಿ ವಾರಿಜಾ ಬಿ.ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಶಿಕ್ಷಕರಾದ ಶೇಖರ ಬಲ್ಯ, ವೆಂಕಟೇಶ್, ರವಿಚಂದ್ರ, ಶಿಕ್ಷಕಿಯರಾದ ತಾರಾದೇವಿ, ಅಂಜನಾ, ತೇಜಸ್ವಿನಿ, ದೈಹಿಕ ಶಿಕ್ಷಣ ಶಿಕ್ಷಕಿ ವನಜಾ ಮೊದಲಾದವರು ಭಾಗವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net