ನಿಯಮ ಉಲ್ಲಂಘಿಸಿದರೆ ಚಾಲಕರ ವೇತನದಿಂದ ದಂಡ ಪಾವತಿ

BMTC
Published on

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿ ಬಸ್​ ಚಾಲನೆ ಮಾಡುವ ಚಾಲಕರ ವೇತನದಿಂದ ದಂಡದ ಮೊತ್ತ ಪಾವತಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಗುರುವಾರ ನಡೆದ ವಿಭಾಗೀಯ ನಿಯಂತ್ರಣಾಧಿಕಾರಿಗಳು ಹಾಗೂ ವಿಭಾಗೀಯ ಸಂಚಾರ ಅಧಿಕಾರಿಗಳ ಸಭೆಯಲ್ಲಿ ದಂಡದ ಮೊತ್ತ ಪಾವತಿ ಕುರಿತಂತೆ ಚರ್ಚೆ ನಡೆಸಲಾಗಿದೆ. ಈ ವೇಳೆ ಮುಖ್ಯ ಸಂಚಾರ ವ್ಯವಸ್ಥಾಪಕರು, ಸಂಚಾರ ನಿಯಮ ಉಲ್ಲಂಘಿಸಿ ಬಸ್​ ಚಾಲನೆ ಮಾಡಿದರೆ ಅದರ ದಂಡದ ಮೊತ್ತವನ್ನು ಈಗಾಗಲೆ ಚಾಲಕರ ವೇತನದಿಂದ ಪಾವತಿಸುವ ನಿಯಮವಿದೆ. ಆದರೆ, ಅದು ಸಮರ್ಪಕವಾಗಿ ಜಾರಿಯಾಗದೆ, ನಿಗಮದಿಂದ ಪಾವತಿಸುವಂತಾಗಿದೆ. ಹೀಗಾಗಿ ಇನ್ನು ಮುಂದೆ ದಂಡದ ಮೊತ್ತವನ್ನು ಕಟ್ಟುನಿಟ್ಟಾಗಿ ಚಾಲಕರ ವೇತನದಿಂದಲೇ ಪಾವತಿಸಬೇಕು ಎಂದು ತಿಳಿಸಿದರು.

ನವೆಂಬರ್​ ಮೊದಲ ವಾರದಿಂದ ಪದವಿ ಕಾಲೇಜುಗಳು ಆರಂಭಗೊಳ್ಳುವ ಸಾಧ್ಯತೆಯಿದೆ. ಹೀಗಾಗಿ ವಿದ್ಯಾಥಿರ್ಗಳ ಹಿತದೃಷ್ಟಿಯಿಂದ ವಿದ್ಯಾಸಂಸ್ಥೆಗಳು ಇರುವ ಮಾರ್ಗ, ಪ್ರದೇಶಗಳಲ್ಲಿ ಹೆಚ್ಚಿನ ಬಸ್​ಗಳ ಕಾರ್ಯಾಚರಣೆಗೆ ಕ್ರಮ ಕೈಗೊಳ್ಳಬೇಕು. ಬೆಳಗ್ಗೆ ಮತ್ತು ಸಂಜೆ ಕಚೇರಿ ವೇಳೆಯಲ್ಲಿ ಸಂಚಾರ ದಟ್ಟಣೆಗೆ ಅನುಗುಣವಾಗಿ ರಾತ್ರಿ ವಸತಿ ಪಾಳಿಯ ಬಸ್​ಗಳ ಸಂಖ್ಯೆ ಹೆಚ್ಚಿಸಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾರೆ.

ಡಿಸೆಂಬರ್​ವರೆಗೆ ಶನಿವಾರ, ಭಾನುವಾರ ಹಾಗೂ ಸಾರ್ವತ್ರಿಕ ರಜಾದಿನಗಳು ಬಸ್​ಗಳ ಕಾರ್ಯಾಚರಣೆ ಕಡಿಮೆ ಮಾಡಲು ಅನುಮೋದನೆ ನೀಡಲಾಗಿದೆ. ಈ ದಿನಗಳಂದು ಪ್ರಯಾಣಿಕರ ದಟ್ಟಣೆ ಅಧಿಕವಾಗಿದ್ದಲ್ಲಿ ಅದಕ್ಕೆ ತಕ್ಕಂತೆ ಬಸ್​ಗಳ ಕಾರ್ಯಾಚರಣೆ ಮಾಡಬೇಕು. ಅಪಘಾತ ರಹಿತ ಚಾಲನೆಗಾಗಿ ನೀಡಲಾಗಿರುವ ಬಂಗಾರ ಮತ್ತು ಬೆಳ್ಳಿ ಪದಕಕ್ಕೆ ಅರ್ಹರಿರುವ ಚಾಲನಾ ಸಿಬ್ಬಂದಿ ಪಟ್ಟಿಯನ್ನು ಕೇಂದ್ರ ಕಚೇರಿಗೆ ಕಳುಹಿಸುವಂತೆ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net