ಸುಗಮ ಸಂಚಾರಕ್ಕಾಗಿ ರಸ್ತೆಗಿಳಿದ ತಹಸೀಲ್ದಾರ್

dj mlk jagruthi
Published on

ಮೊಳಕಾಲ್ಮೂರು: ರಸ್ತೆ ಬದಿ ವಾಹನ ನಿಲುಗಡೆ, ಸಂಚಾರ ವೇಳೆ ವೇಗದ ಮೀತಿ, ಶಾಲಾ-ಕಾಲೇಜು, ಆಸ್ಪತ್ರೆ ಬಳಿ ಹಾರನ್ ನಿಷೇಧ… ಹೀಗೆ ವಿವಿಧ ವಿಷಯಗಳ ಕುರಿತು ವಾಹನ ಸಂಚಾರರಿಗೆ ತಹಸೀಲ್ದಾರ್ ಎಂ.ವಿ.ರೂಪಾ ಪಾಠ ಮಾಡಿದರು.

ಪಟ್ಟಣದಲ್ಲಿ ಬುಧವಾರ ವಿವಿಧೆಡೆ ಸಂಚರಿಸಿದ ಅವರು ಮತ್ತು ಅಧಿಕಾರಿ ವರ್ಗ, ಪಟ್ಟಣದ ಮುಖ್ಯರಸ್ತೆಯಲ್ಲಿ ವಾಹನ ನಿಲುಗಡೆಗೆ ಅವಕಾಶ ಇಲ್ಲ. ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ವರ್ತಿಸಬೇಕು.

ಮೊದಲ ಬಾರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಇದೇ ಪ್ರವೃತ್ತಿ ಮುಂದುವರಿದರೆ ದಂಡ ಮತ್ತು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ವಾಹನ ನಿಲುಗಡೆ ಇತರೆ ವಿಷಯಗಳ ಸಂಬಂಧ ನಾಮಫಲಕ ಹಾಕಲಾಗುವುದು.

ಅದನ್ನು ಗಮನಿಸಿ ಪಾಲಿಸುವ ಹೊಣೆಗಾರಿಕೆ ನಿಮ್ಮದು. ಒಂದು ವೇಳೆ ಉಲ್ಲಂಘಿಸಿದರೆ ದಂಡದ ಜತೆ ಪರವಾನಗಿ ರದ್ದು ಮಾಡಬೇಕಾಗುತ್ತದೆ ಎಂದರು.

ಬಸ್ ನಿಲ್ದಾಣ ಸೇರಿ ವಿವಿಧೆಡೆ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುವ ದುರಭ್ಯಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

ಇದರಿಂದ ಎಲ್ಲರಿಗೂ ಸಮಸ್ಯೆ ಆಗಲಿದೆ ಎಂಬ ಅರಿವು ನಿಮಗೆ ಇದ್ದಂತಿಲ್ಲ. ಇಂತಹ ವರ್ತನೆ ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕೆಲ ಅಂಗಡಿ-ಮುಂಗಟ್ಟು ಮಾಲೀಕರು ಪಾದಚಾರಿಗಳ ಜಾಗವನ್ನೇ ಆಕ್ರಮಿಸಿಕೊಂಡಿದ್ದಾರೆ.

ಇನ್ನೂ ಫುಟ್‌ಪಾತ್ ವ್ಯಾಪಾರಿಗಳು ರಸ್ತೆಯಲ್ಲಿ ವ್ಯವಹಾರ ಮಾಡಿ, ರಾತ್ರಿ ವೇಳೆ ಡಬ್, ಕೈಗಾಡಿಗಳನ್ನು ಇಲ್ಲಿಯೇ ಬಿಟ್ಟು ಹೋಗುತ್ತಿದ್ದಾರೆ.

ಇದರಿಂದ ಅಪಘಾತ ಸಂಭವಿಸಿ ಅಮಾಯಕರು ಜೀವ ಕಳೆದುಕೊಳ್ಳಬೇಕಾಗುತ್ತದೆ. ಜತೆಗೆ ಸುಗಮ ಸಂಚಾರಕ್ಕೆ ತೀವ್ರ ಅಡ್ಡಿಯಾಗಲಿದೆ.

ಆದ್ದರಿಂದ ಪೊಲೀಸ್ ಇಲಾಖೆ ಸೂಚನೆ ಪಾಲಿಸಿ, ಬಸ್ ನಿಲ್ದಾಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಿ ಎಂದು ತಿಳಿಸಿದರು.

ರಸ್ತೆ ಬದಿ, ಬಸ್ ನಿಲ್ದಾಣ ಸಮೀಪದ ವ್ಯಾಪಾರಸ್ಥರ ಪಟ್ಟಿ ಮಾಡಿ ಪ್ರತಿಯೊಬ್ಬರಿಗೂ ಒಂದು ನಂಬರ್ ಕೊಡಲಾಗುವುದು.

ನಾವು ಗುರುತಿಸಿದ ಕಡೆ ವ್ಯವಾಹಾರ ಮಾಡಬೇಕು. ನಿಮಗಿಷ್ಟದ ಜಾಗದಲ್ಲಿ ವ್ಯಾಪಾರ ಮಾಡಿದರೆ ಕ್ರಮ ಖಚಿತ ಎಂದು ಎಚ್ಚರಿಸಿದರು.

ಎಗ್‌ರೈಸ್ ಸೇರಿ ಬಹಳಷ್ಟು ಫುಟ್‌ಪಾತ್ ವ್ಯಾಪಾರಿಗಳು ಕಳಪೆ ಆಹಾರ ಹಾಗೂ ರುಚಿಗಾಗಿ ರಾಸಾಯನಿಕ ವಸ್ತು ಬಳಸುವುದು ಗಮನಕ್ಕೆ ಬಂದಿದೆ. ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.

ಇನ್ಮುಂದೆ ಇಂತಹದ್ದನ್ನು ಸಹಿಸುವುದಿಲ್ಲ. ಸ್ವಚ್ಛತೆ, ಗುಣಮಟ್ಟಕ್ಕೆ ಆದ್ಯತೆ ನೀಡದ ಫುಟ್‌ಪಾತ್ ವ್ಯಾಪಾರಿಗಳನ್ನು ಶಾಶ್ವತವಾಗಿ ಎತ್ತಂಗಡಿ ಮಾಡಲಾಗುವುದು ಎಂದರು.

ಕೆಲವೆಡೆ ಬೀದಿಬದಿ ವ್ಯಾಪಾರಿಗಳನ್ನು ತೆರವುಗೊಳಿಸಲಾಯಿತು. ಪಪಂ ಮುಖ್ಯಾಧಿಕಾರಿ ಇ.ಲೀಲಾವತಿ ಇತರರು ಉಪಸ್ಥಿತರಿದ್ದರು.

ಶೀಘ್ರದಲ್ಲಿ ಸಭೆ: ಬೀದಿ ಬದಿ ವ್ಯಾಪಾರವೇ ಜೀವನಕ್ಕೆ ಆಧಾರವಾಗಿದೆ. ಕೂಲಿ ಕೆಲಸ ಸಿಗುತ್ತಿಲ್ಲ. ಸಿಕ್ಕರೂ ಕಡಿಮೆ ಕೂಲಿ ಕೊಡುತ್ತಾರೆ. ದಯಮಾಡಿ ಫುಟ್‌ಪಾತ್ ವ್ಯಾಪಾರ, ಆಟೋ, ಎತ್ತಿನಬಂಡಿ, ಡಬ್ಬಾ ಅಂಗಡಿಗಳಿಗೆ ಸಮಸ್ಯೆ ಮಾಡದಿರಿ.

ನಿಮ್ಮ ಸೂಚನೆ ಪಾಲಿಸಲಾಗುವುದು ಎಂದು ಬಹಳಷ್ಟು ಮಂದಿ ತಹಸೀಲ್ದಾರ್ ಬಳಿ ವಿನಂತಿಸಿಕೊಂಡರು.

ಈ ಸಂಬಂಧ ಶೀಘ್ರ ಅಧಿಕಾರಿಗಳ ಸಭೆ ಕರೆದು ಸಾಧಕ-ಬಾಧಕ ಕುರಿತು ಚರ್ಚಿಸಿ ನಿಮಗೆ ಮತ್ತು ಸಾರ್ವಜನಿಕರಿಗೆ ಒಳಿತು ಆಗುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ರೂಪಾ ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net