

ತುಮಕೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ, ಜನವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿವೆ ಎಂದು ಆರೋಪಿಸಿ ರೈತಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಗುರುವಾರ ರಾಷ್ಟ್ರೀಯ ಹೆದ್ದಾರಿ ತಡೆಗೆ ಮುಂದಾದಾಗ ತಡೆದ ಪೊಲೀಸರು ಕಾರ್ಯಕರ್ತರನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.
ಕಾಯ್ದೆಗಳ ಜಾರಿ ವಿರೋಧಿಸಿ ಕ್ಯಾತಸಂದ್ರ ಜಾಸ್‌ಟೋಲ್ ವರೆಗೂ ಮೆರವಣಿಗೆಯಲ್ಲಿ ಹೊರಟಿದ್ದ ರೈತಸಂಘದ ಕಾರ್ಯಕರ್ತರನ್ನು ಕ್ಯಾತಸಂದ್ರ ವೃತ್ತದಲ್ಲಿ ವಶಕ್ಕೆ ಪಡೆದ ಪೊಲೀಸರು ಸಂಜೆಯವರೆಗೆ ಜಿಲ್ಲಾ ಶಸಸ್ತ್ರ ಮೀಸಲು ಪಡೆ ಮೈದಾನದಲ್ಲಿರಿಸಿ, ಸಂಜೆಯ ನಂತರ ಬಿಡುಗಡೆಗೊಳಿಸಿದರು.
ಕ್ಯಾತಸಂದ್ರ ವೃತ್ತದಲ್ಲಿ ಮಾತನಾಡಿದ ಜಿಲ್ಲಾ ರೈತ ಸಂಘದ ಅಧ್ಯಕ್ಷ ಆನಂದಪಟೇಲ್, ಸುಗ್ರೀವಾಜ್ಞೆಗಳ ಮೂಲಕ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ, ಕರ್ನಾಟಕ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಕಾಯ್ದೆ, ವಿದ್ಯುತ್ ಖಾಸಗೀಕರಣ ಕಾಯ್ದೆ ಜನವಿರೋಧಿ ಮತ್ತು ರೈತ ವಿರೋಧಿಯಾಗಿವೆ ಎಂದರು.
ಕಾಯ್ದೆಗಳ ವಿರುದ್ದ ರಾಷ್ಟ್ರದಾದ್ಯಂತ ಹೋರಾಟಗಳು ನಡೆಯುತ್ತಿದ್ದು, ಇದರ ಭಾಗವಾಗಿ ರಾಜ್ಯದಲ್ಲಿ ಹೆದ್ದಾರಿ ಸಂಚಾರ ತಡೆ ನಡೆಸುತ್ತಿದ್ದೇವೆ, ಆದರೆ, ಪೊಲೀಸರು ಇಲ್ಲಸಲ್ಲದ ನೆಪ ಹೇಳಿ ನಮ್ಮನ್ನು ತಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಸಿರು ಸೇನೆ ಉಪಾಧ್ಯಕ್ಷ ಕೆಂಕೆರೆ ಸತೀಶ್, ಕಾರ್ಯಾಧ್ಯಕ್ಷ ಧನಂಜಯ ಆರಾಧ್ಯ, ಕಾರ್ಯದರ್ಶಿ ರುದ್ರೇಶಗೌಡ, ಸಂಘಟನಾ ಕಾರ್ಯದರ್ಶಿ ಹಳೇ ಸಂಪಿಗೆ ಕೀರ್ತಿ, ಕುಣಿಗಲ್ ತಾಲೂಕು ಅಧ್ಯಕ್ಷ ಅನಿಲ್ ಕುಮಾರ್, ತುರುವೇಕೆರೆ ತಾಲೂಕು ಅಧ್ಯಕ್ಷ ತಾಳೆಕೇರೆ ನಾಗೇಂದ್ರ, ಶಿರಾ ಉಪಾಧ್ಯಕ್ಷ ಕುದುರೆಕುಂಟೆ ಲಕ್ಕಣ್ಣ, ಗುಬ್ಬಿ ತಾಲೂಕು ಅಧ್ಯಕ್ಷ ಚಿದಾನಂದಮೂರ್ತಿ, ಲಂಕೇನಹಳ್ಳಿ ಕಾಂತರಾಜು ಮತ್ತಿತರರು ನೇತೃತ್ವ ವಹಿಸಿದ್ದರು.
ಜಿಲ್ಲಾಡಳಿತದಿಂದ ತಾರತಮ್ಯ: ಜಿಲ್ಲಾಡಳಿತ ರೈತರು ಮತ್ತು ರಾಜಕಾರಣಿಗಳ ನಡುವೆ ತಾರತಮ್ಯ ಅನುಸರಿಸುತ್ತಿದೆ, ಈ ಹಿಂದೆ ರಾಜ್ಯ ಬಂದ್‌ಗೆ ಕರೆ ನೀಡಿದ ಸಂದರ್ಭದಲ್ಲಿ ಬೈಕ್ ರ‌್ಯಾಲಿಗೆ ಅವಕಾಶ ನೀಡಿದೇ ಪ್ರತಿಭಟನೆ ಹತ್ತಿಕ್ಕುವ ಕೆಲಸ ಮಾಡಿದ್ದರು ಆದರೆ, ರಾಜಕಾರಣಿಯೊಬ್ಬರ ಮನೆಯ ಮೇಲೆ ಇಡಿ ದಾಳಿ ಆದ ಸಂದರ್ಭದಲ್ಲಿ ಪಕ್ಷಗಳ ಕಾರ್ಯಕರ್ತರು ಯಾವುದೇ ಅನುಮತಿ ಇಲ್ಲದೆ ಬೈಕ್ ರ‌್ಯಾಲಿ ನಡೆಸಲು ಅವಕಾಶ ಕಲ್ಪಿಸಿದರು ಎಂದು ಆರೋಪಿಸಿದರು.