

ನೆಲಮಂಗಲ: ಕ್ರಿಸ್‌ಮಸ್, ವೈಕುಂಠ ಏಕಾದಶಿ ಸೇರಿ ವಾರಾಂತ್ಯದ ಜತೆಗೆ ಡಿ.27ರಂದು ಗ್ರಾಪಂನ 2ನೇ ಹಂತದ ಚುನಾವಣೆ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಬೆಂಗಳೂರು ನಗರದಿಂದ ಹೊರಹೋಗುತ್ತಿದ್ದು, ಹೆದ್ದಾರಿಗಳಲ್ಲಿ ವಾಹನದಟ್ಟಣೆ ಹೆಚ್ಚಾಗಿದೆ.
ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ ಸಾಕಷ್ಟು ಸಂಖ್ಯೆಯ ಜನರು ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಮತ ಚಲಾಯಿಸಲು ತವರಿಗೆ ಮರಳುತ್ತಿದ್ದಾರೆ. ಕ್ರಿಸ್‌ಮಸ್, ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಶುಕ್ರವಾರ, ಶನಿವಾರ ಮತ್ತು ಭಾನುವಾರ ರಜೆ ಸಿಕ್ಕಿದ್ದರಿಂದ, ಕಾರ್ಮಿಕರು, ಉದ್ಯಮಿಗಳು, ಉದ್ಯೋಗಿಗಳು ಪ್ರೇಕ್ಷಣೀಯ ಸ್ಥಳಗಳ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿಯ ಎಲ್ಲ ಟೋಲ್‌ಗೇಟ್‌ಗಳಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಭಾರಿ ವಾಹನದಟ್ಟಣೆ ಉಂಟಾಗಿತ್ತು.
ಬೆಂಗಳೂರು ಕಡೆಯಿಂದ ಸಾವಿರಾರು ವಾಹನಗಳು ಒಮ್ಮೆಲೆ ಆಗಮಿಸಿದ್ದರಿಂದ ತುಮಕೂರು ಮಾರ್ಗದ ಜಾಸ್ ಟೋಲ್, ಮಂಗಳೂರು ಮಾರ್ಗದ ಲ್ಯಾಂಕೋದೇವಿಹಳ್ಳಿ ಟೋಲ್‌ಗೇಟ್‌ಗಳಲ್ಲಿ ವಾಹನಗಳು ಕಿ.ಮೀ.ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ವಾಹನಗಳ ಸುಗಮ ಸಂಚಾರಕ್ಕೆ ಸಂಚಾರ ಪೊಲೀಸರು ಹಾಗೂ ಟೋಲ್ ಸಿಬ್ಬಂದಿ ಹರಸಾಹಸ ಪಡಬೇಕಾಯಿತು. ಟೋಲ್‌ಗಳಲ್ಲಿ ಫಾಸ್ಟ್‌ಟ್ಯಾಗ್ ಲೇನ್‌ಗಳಲ್ಲಿ ವಾಹನಗಳ ಸಂಚಾರ ವಿಳಂಬವಾಗುತ್ತಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ವಾಹನಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿತ್ತು.