

ಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾಪಂ ವ್ಯಾಪ್ತಿಯ ಅರಬೈಲ್ ಸಮೀಪದ ಫಸಣಗುಳಿ ಕಿರು ಸೇತುವೆ ಮೇಲೆ ಮಂಗಳವಾರ ಗಂಗಾವಳಿ ನದಿಯ ನೀರು ಹರಿಯುತ್ತಿದೆ. ವಾಹನ ಸವಾರರು ಸೇತುವೆ ಮೇಲೆ ಸಂಚರಿಸುತ್ತಿದ್ದು, ಅಪಾಯ ಉಂಟಾದಲ್ಲಿ ಹೊಣೆ ಯಾರು ಎಂಬ ಪ್ರಶ್ನೆ ಮೂಡಿದೆ.
ಸೋಮವಾರ ಸೇತುವೆ ಮಟ್ಟದಲ್ಲಿ ನದಿ ನೀರು ಹರಿಯುತ್ತಿತ್ತು. ಸ್ಥಳಕ್ಕೆ ತಹಸೀಲ್ದಾರ್ ಅಶೋಕ ಭಟ್ಟ ಭೇಟಿ ನೀಡಿ, ಸೇತುವೆಯ ಮೇಲೆ ನೀರು ಹರಿಯಲಾರಂಭಿಸಿದಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸುವಂತೆ ಸ್ಥಳೀಯ ಆಡಳಿತಕ್ಕೆ ಸೂಚನೆಯನ್ನೂ ನೀಡಿದ್ದರು. ಆದರೆ ಮಂಗಳವಾರ ಸೇತುವೆಯ ಮೇಲೆ ನೀರು ಹರಿಯುತ್ತಿದ್ದರೂ ವಾಹನಗಳ ಸಂಚಾರ ನಿಂತಿಲ್ಲ.
ಕಳೆದ ವರ್ಷ ಮಳೆಗಾಲದಲ್ಲಿ ಸೇತುವೆಯ ಮೇಲೆ ನೀರು ಹರಿಯುವಾಗ ಅಪಾಯ ಲೆಕ್ಕಿಸದೇ ಸೇತುವೆ ಮೇಲೆ ಹೋದ ಲಾರಿಯೊಂದು ನೀರಿನಲ್ಲಿ ಕೊಚ್ಚಿ ಹೋಗಿ ಚಾಲಕ ಮೃತಪಟ್ಟ ಘಟನೆ ನಡೆದಿತ್ತು. ಮೂರು ದಿನಗಳ ನಂತರ ಆತನ ಶವ ದೊರೆತಿತ್ತು. ಇಂತಹ ದುರ್ಘಟನೆ ನಡೆದಿರುವ ನಿದರ್ಶನ ಇರುವಾಗಲೂ ವಾಹನ ಸವಾರರು ಅಪಾಯವನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ.